ಜಮ್ಮು, ನ.3- ಜಮ್ಮು ಮತ್ತು ಕಾಶ್ಮೀರದ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದ್ದು, ಶ್ರೀನಗರ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಪಕ್ಷದ ಪ್ರಮುಖ ಶಿಯಾ ಮುಖಂಡ ಆಗಾ ಸಯ್ಯದ್ ರುಹುಲ್ಲಾ ಮೆಹದಿ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ತಮ್ಮ ತಂದೆ ಆಗಾ ಸಯ್ಯದ್ ಮೆಹದಿ ಅವರ 26ನೇ ಪುಣ್ಯಸ್ಮರಣೆಯ ಅಂಗವಾಗಿ ಬುಡ್ಗಾಂನಲ್ಲಿ ನಡೆದ ಭಾವನಾತ್ಮಕ ಕಾರ್ಯಕ್ರಮದಲ್ಲಿ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇದರೊಂದಿಗೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದೊಂದಿಗಿನ ಅವರ 24 ವರ್ಷಗಳ ಸುದೀರ್ಘ ರಾಜಕೀಯ ಸಂಬಂಧ ಅಂತ್ಯಗೊಂಡಿದೆ.
2024ರ ವಿಧಾನಸಭಾ ಚುನಾವಣೆಯಲ್ಲಿ ಜನರು ವ್ಯಕ್ತಪಡಿಸಿದ ಆಕ್ರೋಶ, ಭಾವನೆಗಳು ಹಾಗೂ ಭಾರೀ ಜನಾದೇಶಕ್ಕೆ ನ್ಯಾಷನಲ್ ಕಾನ್ಫರೆನ್ಸ್ ದ್ರೋಹ ಬಗೆದಿದೆ ಎಂದು ಅವರು ಆರೋಪಿಸಿದ್ದಾರೆ. ಚುನಾವಣಾ ಹೋರಾಟ ಮುಗಿದ ಕೂಡಲೇ ಪಕ್ಷ ತನ್ನ ನಿಲುವನ್ನು ಬದಲಿಸಿಕೊಂಡಿದೆ ಎಂದು ನಾಲ್ಕು ಪುಟಗಳ ರಾಜೀನಾಮೆ ಪತ್ರದಲ್ಲಿ ನಾಯಕತ್ವದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2019ರಲ್ಲಿ ಸಂವಿಧಾನದ 370 ಮತ್ತು 35-ಎ ವಿಧಿಗಳನ್ನು ರದ್ದುಗೊಳಿಸಿದ್ದು ಕಾಶ್ಮೀರದ ಜನರ ಹಕ್ಕುಗಳ ಮೇಲಿನ ನೇರ ದಾಳಿ ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಜನರ ಅಸ್ತಿತ್ವಕ್ಕೆ ಅವರ ಹಕ್ಕುಗಳೇ ಆಧಾರ. ಹಕ್ಕುಗಳಿಲ್ಲದಿದ್ದರೆ ಜನರ ಅಸ್ತಿತ್ವವೇ ಅಳಿಸಿಹೋಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
370ನೇ ವಿಧಿ ರದ್ದತಿಯ ನಂತರ ಕಾಶ್ಮೀರದ ರಾಜಕೀಯ ಹಕ್ಕುಗಳನ್ನು ಮರಳಿ ಪಡೆಯಲು ಹೋರಾಟ ನಡೆಸುವ ಅವಕಾಶವಿತ್ತು. ಈ ಹೋರಾಟಕ್ಕೆ ನ್ಯಾಷನಲ್ ಕಾನ್ಫರೆನ್ಸ್ ನೇತೃತ್ವ ವಹಿಸಲಿದೆ ಎಂಬ ಭರವಸೆಯಿಂದ ತಾವು ಪಕ್ಷದೊಂದಿಗೆ ಮತ್ತಷ್ಟು ಸಕ್ರಿಯವಾಗಿ ಗುರುತಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.
2024ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪರವಾಗಿ ತಾವು ತೀವ್ರವಾಗಿ ಪ್ರಚಾರ ನಡೆಸಿದ್ದಾಗಿ ನೆನಪಿಸಿಕೊಂಡಿರುವ ಅವರು, ಜನರು ತಮ್ಮ ಆಕ್ರೋಶ ಮತ್ತು ನಿರೀಕ್ಷೆಗಳನ್ನು ದೊಡ್ಡ ಜನಾದೇಶದ ಮೂಲಕ ಪಕ್ಷದ ಮುಂದಿಟ್ಟಿದ್ದರು. ಆದರೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಪಕ್ಷ ತನ್ನ ನಿಲುವು ಬದಲಿಸಿಕೊಂಡಿತು ಎಂದು ಟೀಕಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಜನರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸಬೇಕಾದ ನಿರ್ಣಾಯಕ ಸಂದರ್ಭದಲ್ಲಿ ಪಕ್ಷವು ಅಧಿಕಾರದ ಆಸೆಗಾಗಿ ತನ್ನ ಜವಾಬ್ದಾರಿಯಿಂದ ಹಿಂದೆ ಸರಿದಿದೆ. ರಾಜ್ಯದ ಸ್ಥಾನಮಾನ ಮರುಸ್ಥಾಪನೆಯ ಅಸ್ಪಷ್ಟ ಭರವಸೆಯೊಂದಿಗೆ ಹೋರಾಟದ ಹಾದಿಯನ್ನು ಕೈಬಿಟ್ಟಿದೆ ಎಂದು ಆರೋಪಿಸಿದ್ದಾರೆ.
ತಾವು ಈ ವಿಚಾರಗಳನ್ನು ಪಕ್ಷದ ನಾಯಕರ ಗಮನಕ್ಕೆ ತಂದಾಗ ಭಿನ್ನಾಭಿಪ್ರಾಯಗಳು ಹೆಚ್ಚಾದವು. ಪಕ್ಷದ ನಿಲುವು ಜನರ ನಿರೀಕ್ಷೆಗಳಿಗೆ ವಿರುದ್ಧವಾಗಿರುವುದರಿಂದ ಅದರೊಂದಿಗೆ ಮುಂದುವರಿಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೀಸಲಾತಿ ನೀತಿಯ ಪುನರ್ವ್ಯವಸ್ಥೆ, ರಾಜಕೀಯ ಕೈದಿಗಳ ಬಿಡುಗಡೆ ಹಾಗೂ 370ನೇ ವಿಧಿಯ ಮರುಸ್ಥಾಪನೆ ಸೇರಿದಂತೆ ಹಲವು ಪ್ರಮುಖ ವಿಚಾರಗಳಲ್ಲಿ ಪಕ್ಷದ ನಿಷ್ಕ್ರಿಯತೆಯೇ ರಾಜೀನಾಮೆಗೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ತಮ್ಮ ರಾಜಕೀಯ ಪಯಣಕ್ಕೆ ಸಹಕರಿಸಿದವರಿಗೆ ಧನ್ಯವಾದ ಸಲ್ಲಿಸಿರುವ ಅವರು, ಇನ್ನು ಮುಂದೆ ತಮ್ಮ ಜನರ ಸೇವೆ ಮಾಡಲು ಹೊಸ ಮಾರ್ಗ ಕಂಡುಕೊಳ್ಳುವುದಾಗಿ ಹೇಳಿದ್ದಾರೆ. ತತ್ವ ಮತ್ತು ಮೌಲ್ಯಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಇನ್ನೊಂದೆಡೆ, ರುಹುಲ್ಲಾ ಮೆಹದಿ ಅವರು ಸದ್ಯಕ್ಕೆ ಬೇರೆ ಯಾವುದೇ ರಾಜಕೀಯ ಪಕ್ಷ ಸೇರುವ ಉದ್ದೇಶ ಹೊಂದಿಲ್ಲ. ಯುವಕರ ನೇತೃತ್ವದಲ್ಲಿ ಹೊಸ ರಾಜಕೀಯ ಸಂಘಟನೆಯನ್ನು ರೂಪಿಸುವ ಚಿಂತನೆಯಲ್ಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಆದರೆ ಒಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶ ತಮಗಿಲ್ಲ ಎಂಬ ಸಂದೇಶವನ್ನೂ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಲೋಕಸಭೆ ಸ್ಪೀಕರ್ ಅಂಗೀಕರಿಸಿದ ಬಳಿಕ ಶ್ರೀನಗರ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುವ ಸಾಧ್ಯತೆಯಿದೆ.
