ವಾಷಿಂಗ್ಟನ್, ನ. 4 -ಅಮೆರಿಕದ ಮಧ್ಯಂತರ ಚುನಾವಣೆಗಳಲ್ಲಿ ಡೆಮಾಕ್ರಟಿಕ್ ಪಕ್ಷ ಗಮನಾರ್ಹ ಮುನ್ನಡೆ ಸಾಧಿಸಿದೆ. ಜಾರ್ಜಿಯಾ ರಾಜ್ಯದ ಗವರ್ನರ್ ಚುನಾವಣೆಯಲ್ಲಿ ಗೆಲುವು ದಾಖಲಿಸಿದೆ. ರಿಪಬ್ಲಿಕನ್ ಪಕ್ಷದ ಹಿಡಿತದಲ್ಲಿರುವ ಪ್ರಮುಖ ಸೆನೆಟ್ ಸ್ಥಾನಗಳನ್ನೂ ತನ್ನದಾಗಿಸಿಕೊಳ್ಳುವ ಸಾಧ್ಯತೆ ಮೂಡಿಸಿದೆ. ಈ ಫಲಿತಾಂಶಗಳು ಅಧ್ಯಕ್ಷ ಡೊನಾಲ್್ಡ ಟ್ರಂಪ್ ಅವರಿಗೆ ತೀವ್ರ ಹಿನ್ನಡೆಯಾಗಿ ಪರಿಣಮಿಸಿವೆ.
ಭಾರತೀಯ ಮೂಲದ ಅಭ್ಯರ್ಥಿಗಳಾದ ಸುಹಾಸ್ ಸುಬ್ರಮಣ್ಯಂ ಮತ್ತು ಪಿಯಾ ದಂಡಿಯಾ ಅವರು ಕ್ರಮವಾಗಿ ವರ್ಜೀನಿಯಾ ಮತ್ತು ಫ್ಲೋರಿಡಾದಿಂದ ಅಮೆರಿಕದ ಪ್ರತಿನಿಧಿಗಳ ಸಭೆಗೆ ಆಯ್ಕೆಯಾಗಿದ್ದಾರೆ. 61 ವರ್ಷದ ಅರುಣಾ ಮಿಲ್ಲರ್ ಅವರು ಮೇರಿಲ್ಯಾಂಡ್ನ ಲೆಫ್ಟಿನೆಂಟ್ ಗವರ್ನರ್ ಆಗಿ ಮರು ಆಯ್ಕೆಯಾಗಿದ್ದಾರೆ.
ಮಾಜಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿಯಾಗಿದ್ದ ಪಿಯಾ ದಂಡಿಯಾ, ಫ್ಲೋರಿಡಾದ 22ನೇ ಕಾಂಗ್ರೆಸ್ ಕ್ಷೇತ್ರದಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಕೇಸಿ ಅಸ್ಕರ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಅಮೆರಿಕದ ಪ್ರತಿನಿಧಿಗಳ ಸಭೆಗೆ ಆಯ್ಕೆಯಾದ ಭಾರತೀಯ ಮೂಲದ ಮತ್ತೊಬ್ಬ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸುಹಾಸ್ ಸುಬ್ರಮಣ್ಯಂ ಅವರು ವರ್ಜೀನಿಯಾದ 10ನೇ ಕಾಂಗ್ರೆಸ್ ಕ್ಷೇತ್ರದಿಂದ ಮರು ಆಯ್ಕೆಯಾಗಿದ್ದಾರೆ.
ಟ್ರಂಪ್ ಅವರ ಆಪ್ತ ಬೆಂಬಲಿಗರಾಗಿದ್ದ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಅವರು ಓಹಿಯೊ ರಾಜ್ಯದ ಗವರ್ನರ್ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಉಪಾಧ್ಯಕ್ಷ ಜೆ.ಡಿ. ವ್ಯಾನ್್ಸ ಅವರ ತವರು ರಾಜ್ಯವಾದ ಓಹಿಯೊದಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಆಮಿ ಆಕ್ಟನ್ ಅವರು ರಾಮಸ್ವಾಮಿ ಅವರನ್ನು ಸೋಲಿಸಿದ್ದಾರೆ. ತೀವ್ರ ಪೈಪೋಟಿಯ ಈ ಚುನಾವಣೆಯು ರಿಪಬ್ಲಿಕನ್ ಪಕ್ಷದೊಳಗಿನ ಭಿನ್ನಮತವನ್ನೂ ಬಹಿರಂಗಪಡಿಸಿದೆ. ಕೇರಳ ಮೂಲದ ಡೆಮಾಕ್ರಟಿಕ್ ಅಭ್ಯರ್ಥಿ ನಿತ್ಯಾ ರಾಮನ್ ಅವರು ಅಮೆರಿಕದ ಎರಡನೇ ಅತಿದೊಡ್ಡ ನಗರ ಲಾಸ್ ಏಂಜಲೀಸ್ನ ಮೇಯರ್ ಸ್ಥಾನಕ್ಕೆ ತಮ್ಮ ಮಾಜಿ ಮುಖ್ಯಸ್ಥೆ ಕರೆನ್ ಬಾಸ್ ವಿರುದ್ಧ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.
ಭಾರತೀಯ ಮೂಲದ ಹಾಲಿ ಸಂಸದರಾದ ರೋ ಖನ್ನಾ, ಅಮಿ ಬೆರಾ ಮತ್ತು ಪ್ರಮೀಳಾ ಜಯಪಾಲ್ ಅವರು ಪ್ರತಿನಿಧಿಗಳ ಸಭೆಗೆ ಮರು ಆಯ್ಕೆ ಬಯಸಿದ್ದಾರೆ. ಮತ್ತೊಬ್ಬ ಡೆಮಾಕ್ರಟಿಕ್ ಅಭ್ಯರ್ಥಿ ಅಮಿಶ್ ಶಾ ಕೂಡ ಮೊದಲ ಬಾರಿಗೆ ಸಂಸದರಾಗುವ ಪ್ರಯತ್ನದಲ್ಲಿದ್ದಾರೆ.ಉತ್ತರ ಕೆರೊಲಿನಾದ ಸೆನೆಟ್ ಸ್ಥಾನವನ್ನು ಡೆಮಾಕ್ರಟಿಕ್ ಅಭ್ಯರ್ಥಿ ರಾಯ್ ಕೂಪರ್ ರಿಪಬ್ಲಿಕನ್ ಪಕ್ಷದಿಂದ ಕಸಿದುಕೊಂಡಿದ್ದಾರೆ. ದಕ್ಷಿಣ ಕೆರೊಲಿನಾದಲ್ಲಿ ಅನ್ನಿ ಆಂಡ್ರ್ಯೂಸ್ ಅವರು ಟ್ರಂಪ್ ಬೆಂಬಲಿತ ಡಾರ್ಲಿನ್ ಗ್ರಹಾಂ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ. ಜಾರ್ಜಿಯಾದಲ್ಲಿ ಕೀಷಾ ಲ್ಯಾನ್್ಸ ಬಾಟಮ್ಸೌ ಅವರು ರಾಜ್ಯದ ಮೊದಲ ಕಪ್ಪು ವರ್ಣೀಯ ಗವರ್ನರ್ ಆಗಿ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ರಿಪಬ್ಲಿಕನ್ ಅಭ್ಯರ್ಥಿ ರಿಕ್ ಜಾಕ್ಸನ್ ಅವರನ್ನು ಅವರು ಸೋಲಿಸಿದ್ದಾರೆ.
ರಿಪಬ್ಲಿಕನ್ ಪಕ್ಷದ ಪ್ರಾಬಲ್ಯವಿರುವ ಟೆಕ್ಸಾಸ್ನಲ್ಲೂ ಡೆಮಾಕ್ರಟಿಕ್ ಅಭ್ಯರ್ಥಿ ಜೇಮ್ಸೌಟಲಾರಿಕೊ ಸೆನೆಟ್ ಚುನಾವಣೆಯಲ್ಲಿ ಟ್ರಂಪ್ ಬೆಂಬಲಿತ ಕೆನ್ ಪ್ಯಾಕ್ಸ್ ಟನ್ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ. ಟಲಾರಿಕೊ ಗೆದ್ದರೆ, 38 ವರ್ಷಗಳ ಬಳಿಕ ಟೆಕ್ಸಾಸ್ನಿಂದ ಸೆನೆಟ್ಗೆ ಆಯ್ಕೆಯಾಗುವ ಮೊದಲ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ.ಜಾರ್ಜಿಯಾದಲ್ಲಿ ಡೆಮಾಕ್ರಟಿಕ್ ಸೆನೆಟರ್ ಜಾನ್ ಒಸಾಫ್ ಮರು ಆಯ್ಕೆಯಾಗಿದ್ದಾರೆ. ಅವರು 2028ರ ಅಧ್ಯಕ್ಷೀಯ ಚುನಾವಣೆಯ ಸಂಭಾವ್ಯ ಅಭ್ಯರ್ಥಿ ಎಂದೂ ಪರಿಗಣಿಸಲ್ಪಟ್ಟಿದ್ದಾರೆ.
ಮಿಚಿಗನ್ನ 13ನೇ ಕ್ಷೇತ್ರದಲ್ಲಿ ಸಮಾಜವಾದಿಗಳ ಬೆಂಬಲ ಪಡೆದಿದ್ದ ಡೆಮಾಕ್ರಟಿಕ್ ಅಭ್ಯರ್ಥಿ ಡೊನಾವನ್ ಮೆಕಿನ್ನಿ ಅವರು ರಿಪಬ್ಲಿಕನ್ ಅಭ್ಯರ್ಥಿ ಟಿ.ಪಿ. ನೈಕೋರಿಯಾಕ್ ಅವರನ್ನು ಸೋಲಿಸಿ ಪ್ರತಿನಿಧಿಗಳ ಸಭೆಗೆ ಆಯ್ಕೆಯಾಗಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಭಾರತೀಯ ಮೂಲದ ಸಂಸದ ಶ್ರೀ ತನೇದಾರ್ ಅವರನ್ನು ಮೆಕಿನ್ನಿ ಸೋಲಿಸಿದ್ದರು.
21 ಕೋಟಿಗೂ ಅಧಿಕ ಮತದಾರರು
ಈ ಚುನಾವಣೆಯಲ್ಲಿ 21 ಕೋಟಿಗೂ ಅಧಿಕ ಅಮೆರಿಕನ್ನರು ಮತದಾನಕ್ಕೆ ಅರ್ಹರಾಗಿದ್ದರು. ಮಂಗಳವಾರ ಪೂರ್ವ ಅಮೆರಿಕದ ಕಾಲಮಾನ ಬೆಳಿಗ್ಗೆ 6 ಗಂಟೆಗೆ ಮತದಾನ ಆರಂಭವಾಗಿದ್ದು, ಪ್ರತಿನಿಧಿಗಳ ಸಭೆಯ 435 ಸ್ಥಾನಗಳು, ಸೆನೆಟ್ನ 37 ಸ್ಥಾನಗಳು, 36 ರಾಜ್ಯಗಳ ಗವರ್ನರ್ ಹುದ್ದೆಗಳು ಹಾಗೂ ಹಲವು ಸ್ಥಳೀಯ ಆಡಳಿತ ಹುದ್ದೆಗಳಿಗೆ ಚುನಾವಣೆ ನಡೆದಿದೆ.ಸಿಎನ್ಎನ್ನ ಪ್ರಾಥಮಿಕ ರಾಷ್ಟ್ರೀಯ ಮತದಾರರ ಸಮೀಕ್ಷೆಯ ಪ್ರಕಾರ, ದೇಶದ ಪ್ರಸ್ತುತ ಸ್ಥಿತಿ, ಆರ್ಥಿಕ ಪರಿಸ್ಥಿತಿ ಮತ್ತು ಟ್ರಂಪ್ ಅವರ ಆಡಳಿತ ನಿರ್ವಹಣೆ ಕುರಿತು ಮತದಾರರಲ್ಲಿ ವ್ಯಾಪಕ ಅಸಮಾಧಾನವಿದೆ.
ಮತದಾನದ ದಿನದಂದು ಟ್ರಂಪ್ ಶ್ವೇತಭವನದ ತಮ್ಮ ಕಚೇರಿಯಲ್ಲಿ ಸಲಹೆಗಾರರೊಂದಿಗೆ ಇದ್ದರು. ದೇಶಾದ್ಯಂತ ಮತದಾರರು ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾಗ, ಮಂಗಳವಾರ ಮಧ್ಯಾಹ್ನ ಅವರು ತಮ್ಮ ಸಾಮಾಜಿಕ ಜಾಲತಾಣ ೞಎಕ್್ಸೞನಲ್ಲಿ ರಿಪಬ್ಲಿಕನ್ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿ ಸರಣಿ ಪೋಸ್ಟ್ಗಳನ್ನು ಪ್ರಕಟಿಸಿದ್ದರು.
ವಾಷಿಂಗ್ಟನ್ನಲ್ಲಿ ಡೆಮಾಕ್ರಟಿಕ್ ಪಕ್ಷದ ಕಾರ್ಯಕರ್ತರು ಮತ್ತು ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ಪ್ರತಿನಿಧಿಗಳ ಸಭೆಯ ಡೆಮಾಕ್ರಟಿಕ್ ನಾಯಕ ಹಕೀಮ್ ಜೆಫ್ರಿಸ್, ಪಕ್ಷವು ಮಹತ್ವದ ಬದಲಾವಣೆಯ ಹೊಸ್ತಿಲಲ್ಲಿದೆ ಮತ್ತು ಪ್ರತಿನಿಧಿಗಳ ಸಭೆಯ ಮೇಲೆ ಮತ್ತೆ ಹಿಡಿತ ಸಾಧಿಸುವ ಹಂತದಲ್ಲಿದೆ ಎಂದು ಹೇಳಿದರು.
ಱಱಅಮೆರಿಕದ ಜನರಿಗೆ ಮೊದಲ ಆದ್ಯತೆ ನೀಡುವ ಕಾಂಗ್ರೆಸ್ ಅನ್ನು ನಾವು ರೂಪಿಸಲಿದ್ದೇವೆೞೞ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಫಾಕ್್ಸ ನ್ಯೂಸ್ನ ಮತದಾರರ ಸಮೀಕ್ಷೆಯ ಪ್ರಕಾರ, ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಆರ್ಥಿಕತೆಯಾಗಿದ್ದು, ಪ್ರಜಾಪ್ರಭುತ್ವದ ಸ್ಥಿತಿ ನಂತರದ ಸ್ಥಾನದಲ್ಲಿದೆ.
ಶ್ವೇತಭವನದಲ್ಲಿ ಟ್ರಂಪ್ ಫಾಕ್್ಸ ನ್ಯೂಸ್ನಲ್ಲಿ ಚುನಾವಣಾ ಪೂರ್ವ ಫಲಿತಾಂಶಗಳ ಪ್ರಸಾರ ವೀಕ್ಷಿಸುತ್ತಿದ್ದರು. ಆದರೆ, ವಾಹಿನಿಯ ಉದಾರವಾದಿ ನಿರೂಪಕಿ ಜೆಸ್ಸಿಕಾ ಟಾರ್ಲೋವ್ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ತಮ್ಮ ೞಟ್ರೂತ್ ಸೋಷಿಯಲ್ೞ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.
ಟ್ರಂಪ್ ಆಡಳಿತದ ಸಾಧನೆಗಳನ್ನು ಸಮರ್ಥಿಸಿಕೊಳ್ಳಲು ಕೃಷಿ ಕಾರ್ಯದರ್ಶಿ ಬ್ರೂಕ್ ರೋಲಿನ್ಸ್, ಆಂತರಿಕ ಕಾರ್ಯದರ್ಶಿ ಡೌಗ್ ಬರ್ಗಮ್ ಮತ್ತು ಹೋಮ್ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಮಾರ್ಕ್ವೇನ್ ಮುಲ್ಲಿನ್ ಸುದ್ದಿಗಾರರೊಂದಿಗೆ ಮಾತನಾಡಿದರು. ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಶ್ವೇತಭವನದ ವೆಸ್ಟ್ ವಿಂಗ್ ಪ್ರವೇಶಿಸುವುದು ಕಂಡುಬಂದರೂ, ಅವರು ಸುದ್ದಿಗಾರರೊಂದಿಗೆ ಮಾತನಾಡಲು ಇಚ್ಛಿಸಲಿಲ್ಲ.
ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಕಳೆದ ಒಂದೂವರೆ ವರ್ಷದಲ್ಲಿ ಟ್ರಂಪ್ ಆಡಳಿತ ಕೈಗೊಂಡ ತೆರಿಗೆ ಕಡಿತ ಕ್ರಮಗಳನ್ನು ಮತದಾರರಿಗೆ ನೆನಪಿಸುವ ಪ್ರಯತ್ನ ಮಾಡಿದರು. ಅಧಿಕಾವಧಿ ಕೆಲಸದ ವೇತನ, ಟಿಪ್್ಸ ಹಾಗೂ ಸಾಮಾಜಿಕ ಭದ್ರತಾ ಸೌಲಭ್ಯಗಳ ಮೇಲಿನ ತೆರಿಗೆಗಳನ್ನು ರದ್ದುಗೊಳಿಸಲಾಗಿದೆ ಎಂದು ಅವರು ೞಎಕ್್ಸೞನಲ್ಲಿ ಬರೆದಿದ್ದಾರೆ.
ಈ ಚುನಾವಣೆಗಳು ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷವು ಅಮೆರಿಕದ ಕಾಂಗ್ರೆಸ್ನ ಎರಡೂ ಸದನಗಳಾದ ಪ್ರತಿನಿಧಿಗಳ ಸಭೆ ಮತ್ತು ಸೆನೆಟ್ ಮೇಲಿನ ನಿಯಂತ್ರಣವನ್ನು ಉಳಿಸಿಕೊಳ್ಳಲಿದೆಯೇ ಅಥವಾ ಡೆಮಾಕ್ರಟಿಕ್ ಪಕ್ಷ ಕನಿಷ್ಠ ಪ್ರತಿನಿಧಿಗಳ ಸಭೆಯನ್ನಾದರೂ ತನ್ನ ವಶಕ್ಕೆ ಪಡೆಯಲಿದೆಯೇ ಎಂಬುದನ್ನು ನಿರ್ಧರಿಸಲಿವೆ. ಇದರಿಂದ ಟ್ರಂಪ್ ಅವರ ಎರಡನೇ ಅವಧಿಯ ಕೊನೆಯ ಎರಡು ವರ್ಷಗಳ ಆಡಳಿತದ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆಯಿದೆ.
