ಬೆಂಗಳೂರು,ಏ.14- ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದಲ್ಲಿ ಚದುರಿದಂತೆ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗುತ್ತಿದ್ದು, ಇನ್ನೂ ಮೂರ್ನಾಲ್ಕು ದಿನಗಳು ಮುಂದುವರೆಯುವ ಮುನ್ಸೂಚನೆಗಳಿವೆ.
ಕಲ್ಯಾಣ ಕರ್ನಾಟಕ, ಮಲೆನಾಡು, ಕೊಡಗು, ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಗುಡುಗು, ಮಿಂಚು, ಬಿರುಗಾಳಿ, ಆಲಿಕಲ್ಲು ಸಿಡಿಲಿನಿಂದ ಕೂಡಿದ ಮಳೆಯಾಗಿದೆ. ಆದರೆ ದಕ್ಷಿಣ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬಂದರೂ ಮಳೆಯಾಗುತ್ತಿಲ್ಲ.
ಪೂರ್ವ ಮುಂಗಾರು ಕೂಡ ರಾಜ್ಯದಲ್ಲಿ ಕೈಕೊಟ್ಟಿದೆ. ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟು ರಾಜ್ಯದಲ್ಲಿ ತೀವ್ರ ಸ್ವರೂಪದ ಬರ ಆವರಿಸಿದೆ. ಇದರ ಬೆನ್ನಲ್ಲೇ ಕುಡಿಯುವ ನೀರಿನ ತೀವ್ರ ಸಂಕಷ್ಟ ಎದುರಾಗಿದೆ. ಬೇಸಿಗೆಯಲ್ಲಿ ಬರುತ್ತಿದ್ದ ಮುಂಗಾರು ಪೂರ್ವ ಮಳೆಯೂ ಕೂಡ ವಾಡಿಕೆ ಪ್ರಮಾಣದಲ್ಲಿ ಆಗುತ್ತಿಲ್ಲ.
ಜನವರಿಯಿಂದ ಇಲ್ಲಿಯವರೆಗೆ ಶೇ.44 ರಷ್ಟು ಮಳೆ ಕೊರತೆ ಕಂಡುಬಂದಿದೆ. ಈ ಅವಧಿಯಲ್ಲಿ 24 ಮಿಲಿ ಮೀಟರ್‍ನಷ್ಟು ವಾಡಿಕೆ ಮಳೆ ಪ್ರಮಾಣವಿದ್ದರೆ, ಕೇವಲ 14 ಮಿಲಿ ಮೀಟರ್‍ನಷ್ಟು ಮಾತ್ರ ಮಳೆಯಾಗಿದೆ.
ರಾಜ್ಯದ ಬಹುತೇಕ ಕಡೆ ಒಣಹವೆ ಮುಂದುವರೆದಿದ್ದು, ಮಳೆಯ ಅಭಾವ ಎಲ್ಲೆಡೆ ಕಂಡುಬರುತ್ತಿದೆ. ಕೊಡಗು, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ಬೀದರ್, ಬಳ್ಳಾರಿ, ಬಾಗಲಕೋಟೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಕೆಲವೆಡೆ ಬಾಳೆ ಸೇರಿದಂತೆ ತೋಟಗಾರಿಕೆ ಬೆಳೆಗಳು ಮಳೆಗೆ ಹಾನಿಗೀಡಾಗಿವೆ.
ಬಿರುಗಾಳಿ ಮಳೆಗೆ ವಿದ್ಯುತ್ ಕಂಬ, ಮರಗಳು ಧರೆಗುರುಳಿವೆ. ಹವಾಮಾನ ಮುನ್ಸೂಚನೆ ಪ್ರಕಾರ ಮೂರ್ನಾಲ್ಕು ದಿನಗಳು ಇದೇ ರೀತಿ ಮಳೆ ಮುಂದುವರೆಯುವ ಸಾಧ್ಯತೆಗಳಿವೆ.
ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗಲಿದೆ. ಕೆಲವೆಡೆ ಹಗುರವಾದ ಸಾಧಾರಣ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ರಾಜಧಾನಿ ಬೆಂಗಳೂರು ಸುತ್ತಮುತ್ತ ಭಾಗಶಃ ಮೋಡ ಕವಿದ ವಾತಾವರಣ ಮೂರ್ನಾಲ್ಕು ದಿನದಿಂದಲೂ ಕಂಡುಬರುತ್ತಿದ್ದರೂ ಮಳೆ ಮಾತ್ರ ಬೀಳುತ್ತಿಲ್ಲ.
ತಾಪಮಾನ ಗರಿಷ್ಠ ಮಟ್ಟ ತಲುಪಿದೆ. ಬಿಸಿಲಿನ ಬೇಗೆಗೆ ಜನರು ಹೈರಾಣಾಗಿದ್ದಾರೆ. ಮಳೆಯ ನಿರೀಕ್ಷೆಯಲ್ಲೇ ಜನರು ಕಾಲ ದೂಡುತ್ತಿದ್ದಾರೆ. ಆದರೆ ಮಳೆಯಾಗುವ ನಿಖರವಾದ ಮುನ್ಸೂಚನೆಗಳು ಇಲ್ಲಿಯವರೆಗೂ ದೊರೆತಿಲ್ಲ.