ಬಲ್ಲಿಯಾ, ನ.6- ದೇವಸ್ಥಾನದ ಅರ್ಚಕರನ್ನು ಕಟ್ಟಿ ಹಾಕಿ ಬೆಳ್ಳಿ ಆಭರಣಗಳನ್ನು ದೋಚಿದ ಬಿಹಾರ ಮೂಲದ ಇಬ್ಬರನ್ನು ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಲ್ಲಿಯಾ ಹಾಗೂ ನೆರೆಯ ಗಾಜಿಪುರ ಜಿಲ್ಲೆಯ ದೇವಸ್ಥಾನಗಳಲ್ಲಿ ಕಳ್ಳತನ ನಡೆಸಿದ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮಧ್ಯರಾತ್ರಿ ಬಂಧನದ ವೇಳೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಆರೋಪಿಗಳ ಕಾಲಿಗೆ ಗುಂಡು ತಗುಲಿದೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಶುಕ್ಲಾ ಅವರ ಪ್ರಕಾರ, ಶುಕ್ರವಾರ ನಸುಕಿನ ಸುಮಾರು 1 ಗಂಟೆಗೆ ಲಕ್ಷಣೇಶ್ವರ ಡಿಹ್ ದೇವಸ್ಥಾನದ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸ್ ತಂಡವು ನೋಂದಣಿ ಸಂಖ್ಯೆ ಇಲ್ಲದ ಇನ್ನೋವಾ ಕಾರನ್ನು ತಡೆದಿದೆ. ಈ ವೇಳೆ ಕಾರಿನಲ್ಲಿದ್ದವರು ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿದ್ದು, ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು ತಗುಲಿದೆ ಎಂದು ಅವರು ತಿಳಿಸಿದ್ದಾರೆ.
ಬಂಧಿತರನ್ನು ಬಿಹಾರದ ಮೋತಿಹಾರಿ ಜಿಲ್ಲೆಯ ನಿವಾಸಿಗಳಾದ ಜಿಶಾನ್ ಆಲಂ (42) ಮತ್ತು ಚಂದ್ರಶೇಖರ್ ಕುಮಾರ್ (38) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಇಬ್ಬರನ್ನೂ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಚಾರಣೆ ವೇಳೆ ಅ.30ರಂದು ಲಕ್ಷಣೇಶ್ವರ ಡಿಹ್ ದೇವಸ್ಥಾನದ ಅರ್ಚಕರ ಕೈಕಾಲುಗಳನ್ನು ಕಟ್ಟಿ ಹಾಕಿ ಬೆಳ್ಳಿಯ ಛತ್ರಿ ಹಾಗೂ ನಾಗರಹಾವಿನ ವಿಗ್ರಹವನ್ನು ಕದ್ದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ರೀತಿ ಅಕ್ಟೋಬರ್ 11ರಂದು ಗಾಜಿಪುರ ಜಿಲ್ಲೆಯ ಕಾಸಿಮಾಬಾದ್‌ನಲ್ಲಿರುವ ಪಂಚ ದೇವಸ್ಥಾನದಲ್ಲಿಯೂ ಕಳ್ಳತನ ಮಾಡಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ. ಆರೋಪಿಗಳಿಂದ ಕಳವು ಮಾಡಲಾದ ಬೆಳ್ಳಿ ಆಭರಣಗಳು, ರಾಧಾ-ಕೃಷ್ಣರ ಕಿರೀಟಗಳಿಂದ ಕರಗಿಸಿದ ಬೆಳ್ಳಿ, ಎರಡು ದೇಶೀಯ ಪಿಸ್ತೂಲ್‌ಗಳು, ಮದ್ದುಗುಂಡುಗಳು ಹಾಗೂ ಕಳ್ಳತನಕ್ಕೆ ಬಳಸುತ್ತಿದ್ದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
