ಬೆಂಗಳೂರು,ನ.6- ಒಂದೇ ಕುಟುಂಬದ ಏಳು ಮಂದಿಯನ್ನು ಭೀಕರವಾಗಿ ಕೊಲೆ ಮಾಡಿರುವ ಆರೋಪಿ ಇಂದುಶೇಖರ್‌ನ ಒಂದೊಂದೇ ಕೃತ್ಯಗಳು ಪೊಲೀಸರ ತನಿಖೆಯಿಂದ ಹೊರಬರುತ್ತಿದ್ದು, ಆತನ ಕರಾಳ ಹಿನ್ನೆಲೆ ಸಿನಿಮಾ ಕಥೆಯನ್ನೇ ಮೀರಿಸುವಂತಿದೆ.
ರಾಜಾಜಿನಗರದ ಬಾಷ್ಯಂ ಸರ್ಕಲ್ ಬಳಿ ಇರುವ ಮನೆಯೊಂದರಲ್ಲಿ ಬಾಡಿಗೆ ಮನೆ ಮಾಡಿಕೊಂಡು ಆರೋಪಿ ಇಂದುಶೇಖರ್ ವಾಸವಾಗಿದ್ದು,ಆ ಸಂದರ್ಭದಲ್ಲಿ ತಾನು ವಾಸವಾಗಿದ್ದ ಕಟ್ಟಡದ ಮೇಲೆಯೇ ಕೇಸ್ ಹಾಕಿದ್ದನಂತೆ.ನಕಲಿ ಸಹಿ ಮಾಡಿ ಈ ಕಟ್ಟಡ ತನಗೆ ಸೇರಿದ್ದೆಂದು ಮನೆ ಮಾಲೀಕರನ್ನು ಬೆದರಿಸಿ ಇಟ್ಟುಕೊಂಡಿದ್ದನು. ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟಾರೆ ಈ ಕ್ರೂರಿ ಯಾರನ್ನೂ ನೆಮದಿಯಾಗಿ ಬದುಕಲು ಬಿಟ್ಟಿಲ್ಲ ಎಂಬ ಸತ್ಯ ಒಂದೊಂದಾಗೆ ಬೆಳಕಿಗೆ ಬರುತ್ತಿದೆ. ಆರೋಪಿಯ ಎಡೆಮುರಿ ಕಟ್ಟಿರುವ ಪೊಲೀಸರು ಆತನಿಂದ ಒಂದೊಂದೇ ಮಾಹಿತಿಗಳನ್ನು ಹೊರತೆಗೆಯುತ್ತಿದ್ದಾರೆ.
ಪ್ರವಾಸದಲ್ಲಿರುವ ಕಥೆ ಕಟ್ಟಿ ನಂಬಿಸಿದ್ದ
ಒಬ್ಬೊಬ್ಬರಾಗಿ ಕೊಲೆ ಮಾಡಿದ ಬಳಿಕ ಅವರ ಮೊಬೈಲ್‌ಗಳನ್ನು ತನ್ನ ಬಳಿಯೇ ಇಟ್ಟುಕೊಂಡು ಯಾರಾದರೂ ಕರೆ ಮಾಡಿದರೆ ಅವರಿಗೆಲ್ಲ ಪ್ರವಾಸದಲ್ಲಿರುವುದುದಾಗಿ ಮೆಸೇಜ್ ಮಾಡುತ್ತಿದ್ದ ಆರೋಪಿ.ಮನೆಯಿಂದ ಹೊರ ಹೋದ ಅಳಿಯ, ಮಗಳು, ಮೊಮಗ ವಾಪಸ್ ಆಗದಿದ್ದಾಗ ಅವರ ಮೊಬೈಲ್‌ಗೆ ಅತ್ತೆ ಕರೆ ಮಾಡಿದಾಗ ಕೇವಲ ಮೆಸೇಜ್ ಮಾತ್ರ ಬರುತ್ತಿತ್ತು.
ಆ ಮೆಸೇಜ್‌ನಲ್ಲಿ ನಾವೆಲ್ಲಾ ಪ್ರವಾಸದಲ್ಲಿದ್ದೇವೆ. ಇಲ್ಲಿ ಲೊಕೇಶನ್ ಸಿಗುವುದಿಲ್ಲ ಎಂಬುವುದಷ್ಟೇ ಇರುತ್ತಿತ್ತು. ಹಾಗಾಗಿ ಕುಟುಂಬದವರಿಗೆ ಅನುಮಾನ ಬಂದಿಲ್ಲ.ಕೊನೆಗೆ ಕುಟುಂಬದವರ
ಮೊಬೈಲ್‌ಗಳಿಗೆ ಕರೆ ಮಾಡುತ್ತಿದ್ದ ಅತ್ತೆಯನ್ನೂ ಸಹ ಮುಗಿಸಿದ್ದಾನೆ.
ರಕ್ಕಸ ಅಪ್ಪನಿಗೆ ಮಗಳೇ ಸಾಥ್
ಬೆಂಗಳೂರು,ನ.6- ಒಂದೇ ಕುಟುಂಬದ 7 ಮಂದಿ ಕೊಲೆ ಮಾಡಿದ್ದ ಆರೋಪಿಗೆ ಆತನ ಅಪ್ರಾಪ್ತ ಮಗಳು ಸಹಾಯ ಮಾಡಿರುವ ಶಂಕೆಯಿದ್ದು, ವಿಚಾರಣೆ ನಡೆಯುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ತಿಳಿಸಿದ್ದಾರೆ.
ರಾಜಾಜಿನಗರ ಪೊಲೀಸ್ ಠಾಣೆಯ ಮುಂಭಾಗ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ 7 ಮಂದಿ ಕೊಲೆ ಪ್ರಕರಣದ ಬಗ್ಗೆ ವಿವರಣೆ ನೀಡುತ್ತಾ ಈ ವಿಷಯ ತಿಳಿಸಿದರು.ಆರೋಪಿಗೆ ಪಿಯುಸಿ ಓದುವ 17 ವರ್ಷದ ಮಗಳಿದ್ದಾಳೆ. ಏಳು ಮಂದಿಯ ಕೊಲೆಗಳೂ ಮನೆಯಲ್ಲಿಯೇ ಆಗಿರುವುದರಿಂದ ಈಕೆಗೆ ವಿಷಯ ಗೊತ್ತಿರಬಹುದು ಎಂದು ವಿಚಾರಣೆ ನಡೆಸಲಾಗುತ್ತಿದೆ.
ಶ್ರೀರಾಂಪುರ ಪೊಲೀಸ್ ಠಾಣೆಗೆ ಕಳೆದ 3ರಂದು ಒಂದು ನಾಪತ್ತೆ ದೂರು ಬಂದಿದ್ದು, ಅದನ್ನು ನಮ ಪೊಲೀಸರು ತನಿಖೆ ಕೈಗೊಂಡಾಗ ಈ ಏಳು ಮಂದಿಯ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದರು.ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಕೊಲೆ ಮಾಡಿದ ನಂತರ ಶವಗಳನ್ನು ನಂದಿಬೆಟ್ಟ, ಚಾರ್ಮುಡಿಘಾಟ್ ಇನ್ನೂ ಮುಂತಾದೆಡೆ ಶವಗಳನ್ನು ಎಸೆದಿರುವುದಾಗಿ ಹೇಳಿದ್ದಾನೆ. ಸಂಬಂಧಪಟ್ಟ ಎಸ್ಪಿಯವರಿಗೂ ಸಹ ಈ ವಿಷಯವನ್ನು ತಿಳಿಸಿದ್ದು, ಶವಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದರು.
ನಂದಿಬೆಟ್ಟದ ತಪ್ಪಲಿನಲ್ಲಿ ಬಾಲಕನ ಶವ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದು, ಉಳಿದ ಆರು ಶವಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಆ ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡಿವೆ ಎಂದು ಆಯುಕ್ತರು ತಿಳಿಸಿದರು.
ಈ ಏಳು ಮಂದಿಯ ಕೊಲೆ 15 ರಿಂದ 20 ದಿನಗಳ ಅಂತರದಲ್ಲಿ ನಡೆದಿದೆ. ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ಆರೋಪಿಗೆ ಶಿಕ್ಷೆ ಕೊಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈ ಭೀಕರ ಕೊಲೆಗಳು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದಿವೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಪೊಲೀಸರು ವಿವಿಧ ದೃಷ್ಟಿಕೋನಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಯು ಕೊಲೆಗೆ ಮನೆಯಲ್ಲಿದ್ದ ರುಬ್ಬುಗುಂಡನ್ನು ಬಳಸಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದರು.ಈ ಆರೋಪಿಗೆ ಬೇರೆ ಇನ್ಯಾರಾದರೂ ಸಹಾಯ ಮಾಡಿದ್ದಾರೆಯೇ ಎಂಬುದರ ಬಗ್ಗೆಯೂ ಸಹ ಕೂಲಂಕುಷವಾಗಿ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು.
ಎಂಟನೇ ಕೊಲೆಗೆ ಸಂಚು : ಪೊಲೀಸರಿಂದ ಬಾಲಕನ ರಕ್ಷಣೆ
ನರಹಂತಕ ಇಂದುಶೇಖರ್ ಕುಟುಂಬದ ಎಂಟನೇ ಕೊಲೆಗೆ ಸಂಚು ರೂಪಿಸಿದ್ದ ಎಂಬುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಲು ಹೋದಾಗ ಕಾರಿನಲ್ಲಿ ಪತ್ನಿ ತವರು ಮನೆಕಡೆಯ 5 ವರ್ಷದ ಬಾಲಕ ಇರುವುದು ಗೊತ್ತಾಗಿದೆ. ಈ ಬಾಲಕನನ್ನು ಕಾರಿನಲ್ಲಿ ಕರೆ ದೊಯ್ದು ಕೊಲೆ ಮಾಡಲು ಸಂಚು ರೂಪಿಸಿದ್ದ. ಅಷ್ಟರಲ್ಲಿ ಪೊಲೀಸರ ಸಮಯಪ್ರಜ್ಞೆಯಿಂದ ಬಾಲಕನನ್ನು ರಕ್ಷಣೆ ಮಾಡಿದ್ದಾರೆ.
ಕುಟುಂಬದ ಏಳು ಮಂದಿಯನ್ನು ಒಬ್ಬೊಬ್ಬರಂತೆ ಮನೆಗೆ ಕರೆಸಿಕೊಂಡು ಸರಣಿ ಕೊಲೆ ಮಾಡಿರುವ ಆರೋಪಿ ತಮ ಅಪ್ರಾಪ್ತ ಮಗಳಿಗೆ ಯಾವುದೋ ಸಬೂಬು ನೀಡಿ ಬ್ರೈನ್‌ವಾಶ್ ಮಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಇಂದುಶೇಖರ್ ಸರಗಳ್ಳ :
ಕುಟುಂಬದ ಏಳು ಮಂದಿಯನ್ನು ಭೀಕರವಾಗಿ ಕೊಲೆ ಮಾಡಿರುವ ಆರೋಪಿ ಇಂದುಶೇಖರ್ ಸರಗಳ್ಳ ಎಂಬುವುದು ರಾಜಾಜಿನಗರ ಠಾಣೆ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.ಈ ಆರೋಪಿ ಐದು ವರ್ಷಗಳ ಹಿಂದೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಾದಚಾರಿ ಮಹಿಳೆಯ ಸರ ಅಪಹರಣ ಮಾಡಿರುವುದು ಪೊಲೀಸರ ಇದುವರೆಗಿನ ತನಿಖೆಯಿಂದ ಬಯಲಾಗಿದೆ.ಇದಷ್ಟೇ ಅಲ್ಲದೇ ಇನ್ಯಾವುದಾದರೂ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆಯೇ ಎಂಬುವುದರ ಬಗ್ಗೆ ಪೊಲೀಸರು ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.
ಕಾರಿನ ಮೇಲೆ ಪ್ರೆಸ್ ಎಂದು ಬರೆಸಿಕೊಂಡಿದ್ದ ಹಂತಕ
ಬೆಂಗಳೂರು,ನ.6-ತನ್ನ ಕಾರಿನ ಮೇಲೆ ಪ್ರೆಸ್ ಎಂದು ಹಾಕಿಕೊಂಡಿದ್ದ ಹಂತಕ ಇಂದುಶೇಖರ್ ಪತ್ರಕರ್ತ ಎಂದು ಬಿಂಬಿಸಿಕೊಂಡಿದ್ದ ಎಂಬುವುದು ಗೊತ್ತಾಗಿದೆ. ಈ ಕಾರಿನಲ್ಲೇ ಏಳು ಶವಗಳನ್ನು ಆರೋಪಿ ಸಾಗಿಸಿದ್ದಾನೆ. ಪ್ರೆಸ್ ಎಂದು ಕಾರಿನ ಮೇಲೆ ಇದ್ದುದ್ದರಿಂದ ಆರೋಪಿ ಪೊಲೀಸರಿಂದ ತಪ್ಪಿಸಿಕೊಂಡಿರಬಹುದು.
ಪತಿ-ಪತ್ನಿ ನಡುವೆ ಪ್ರತಿದಿನ ಜಗಳವಾಗುತ್ತಿದ್ದು ಆರೋಪಿ ಇಂದುಶೇಖರ್‌ಗೆ ಪತ್ನಿ ಸುನಿತಾ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು ಎಂದು ತಿಳಿದು ಬಂದಿದೆ.ಇದರಿಂದ ಅವಮಾನಿತನಾದ ಆರೋಪಿ ಪತ್ನಿ ಮತ್ತು ಅವರ ಕುಟುಂಬದವರ ಮೇಲೆ ದ್ವೇಷ ಸಾಧಿಸುತ್ತಿದ್ದ ಎಂದು ತಿಳಿದು ಬಂದಿದೆ.
