ಚಿಕ್ಕಮಗಳೂರು,ನ.7- ತಾಲೂಕಿನ ಪ್ರಸಿದ್ಧ ಬಿಂಡಿಗ ಶ್ರೀದೇವಿರಮನವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬೆಟ್ಟ ಹತ್ತಿ ದೇವಿಯ ದರ್ಶನ ದೊಂದಿಗೆ ಈ ವರ್ಷದ ದೀಪೋತ್ಸವ ಆರಂಭಗೊಂಡಿದೆ.ವರ್ಷಕ್ಕೊಮೆ ಬೆಟ್ಟ ಹತ್ತಿ ಬೆಟ್ಟದ ಮೇಲೆ ನೆಲೆಸಿರುವ ಶ್ರೀ ದೇವರಮನವರ ದರ್ಶನ ಪಡೆಯುವ ಸಲುವಾಗಿ ಬೆಳಗಿನಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರಿಗಾಲಿನಲ್ಲಿ ಬೆಟ್ಟ ಹತ್ತಿ ದೇವಿಯ ದರ್ಶನ ಪಡೆದರು.ಇಂದು ಬೆಳಿಗ್ಗೆ 6 ಗಂಟೆಗೆ ಉತ್ಸವ ಮೂರ್ತಿಯನ್ನು ಬೆಟ್ಟದ ತುದಿಯಲ್ಲಿರುವ ಗುಡಿಗೆ ಕೊಂಡೊಯ್ದು ಅಭಿಷೇಕ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಬೆಳಿಗ್ಗೆ 8 ಗಂಟೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಕೊಡಲಾಯಿತು ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ವಿವಿಧ ವಾಹನಗಳಲ್ಲಿ ಭಕ್ತರು ಆಗಮಿಸಿದ್ದರು ಈ ಬಾರಿ ಕೆಎಸ್ಆರ್ಟಿಸಿ ಸಂಸ್ಥೆ 60ಕ್ಕೂ ಹೆಚ್ಚು ಬಸ್ಸುಗಳನ್ನು ಚಿಕ್ಕಮಗಳೂರು ನಗರದಿಂದ ಮಲ್ಲೇನಹಳ್ಳಿಗೆ ಪ್ರತಿ 10 ನಿಮಿಷಕ್ಕೊಮೆ ಬಿಟ್ಟಿದ್ದು ಬಸ್ಸುಗಳಲ್ಲಿ ಭಕ್ತರು ಆಗಮಿಸುತ್ತಿರುವುದು ಕಂಡುಬಂದಿತು.
ಕಳೆದ ವರ್ಷದಿಂದ ಎರಡು ದಿನ ಬೆಟ್ಟ ಹತ್ತಿ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಬಾರಿಯೂ ಇಂದು ಮತ್ತು ನಾಳೆ ಬೆಟ್ಟ ಹತ್ತಲು ಅವಕಾಶವಿದ್ದು ಭಕ್ತರು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 3ರ ವರೆಗೆ ಬೆಟ್ಟ ಹತ್ತಿ ದೇವಿಯ ದರ್ಶನ ಪಡೆಯಬಹುದಾಗಿರುತ್ತದೆ. ಬೆಟ್ಟ ಹತ್ತಿದ ನಂತರ ಸರತಿ ಸಾಲಿನಲ್ಲಿ ದೇವಿಯ ದರ್ಶನ ಪಡೆದು ಬೆಟ್ಟದಿಂದ ಕೆಳಗೆ ಇಳಿಯುವ ಅವಕಾಶವಿದ್ದು ಯಾವುದೇ ಕಾರಣಕ್ಕೂ ಬೆಟ್ಟದ ಮೇಲೆ ತೆಂಗಿನಕಾಯಿ ಹೊಡೆಯುವುದನ್ನು ನಿಷೇಧಿಸಲಾಗಿದೆ.
ಬೆಟ್ಟದ ಕೆಳಗಿರುವ ದೇವಿಯ ದೇವಸ್ಥಾನದಲ್ಲಿ ಭಕ್ತರು ಹಣ್ಣು ಕಾಯಿ ಮಾಡಿಸಬಹುದಾಗಿದೆ. ರಾತ್ರಿ ವೇಳೆ ಬೆಟ್ಟ ಹತ್ತಲು ಜಿಲ್ಲಾಡಳಿತ ನಿಷೇಧ ವಿಧಿಸಿತ್ತು ಹಾಗೂ ಬೆಟ್ಟದ ಮೇಲೆ ಪಟಾಕಿ ಕೊಂಡೊಯ್ಯುವುದನ್ನು ನಿಷೇಧಿಸಲಾಗಿತ್ತು . ದೇವಿಯ ದರ್ಶನ ಪಡೆದು ಬೆಟ್ಟದ ಮೇಲೆ ಕುಳಿತುಕೊಳ್ಳಲು ಅವಕಾಶ ಇಲ್ಲ, ಬರಿಗಾಲಿನಲ್ಲಿ ಬೆಟ್ಟ ಹತ್ತ ಬೇಕಾಗಿರುವುದರಿಂದ ಮಳೆ ಬಂದಿರುವ ಕಾರಣ ಜಾಗರೂಕತೆಯಿಂದ ಬೆಟ್ಟ ಹತ್ತಬೇಕು ಹಾಗೂ ಇಳಿಯುವಾಗಲೂ ಜಾಗೃತರಾಗಿರಬೇಕೆಂದು ಜಿಲ್ಲಾಡಳಿತ ಹಾಗೂ ಸಂಘ ಸಂಸ್ಥೆಯ ಸ್ವಯಂಸೇವಕರು ಭಕ್ತರಿಗೆ ಮಾಹಿತಿ ನೀಡುತ್ತಿದ್ದರು.
ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಹಾಗೂ ಶ್ರೀ ದೇವಿರಮ ಅಭಿವೃದ್ಧಿ ಟ್ರಸ್ಟ್ ಹಲವು ಕ್ರಮಗಳನ್ನು ಕೈಗೊಂಡಿದೆ.ದೇವಿರಮನ ಬೆಟ್ಟ ಹತ್ತಲು ಭಕ್ತರು ಮಲ್ಲೇನಹಳ್ಳಿ ಅರಿಶಿನ ಗುಂಟೆ ಹಾಗೂ ಲಿಂಗದಹಳ್ಳಿ, ಬಾಬಾಬುಡನ್ ಗಿರಿ ಮಾರ್ಗವಾಗಿಯೂ ಬೆಟ್ಟ ಹತ್ತಿ ದೇವಿಯ ದರ್ಶನ ಪಡೆದರು.
ದೇವಿಯ ದರ್ಶನಕ್ಕೆ ಬರುವ ಎಲ್ಲಾ ಮಾರ್ಗಗಳಲ್ಲಿಯೂ ಸ್ವಯಂಸೇವಕರು ಹಾಗೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಡ್ರೋನ್ ಮೂಲಕ ನಿಗ ವಹಿಸಲಾಗುತ್ತಿತ್ತು. ದೀಪಾವಳಿಯ ಮೊದಲ ದಿನವಾದ ನಾಳೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 3ರವರೆಗೆ ಬೆಟ್ಟದಲ್ಲಿ ದೇವೀರಮನವರ ವಿಶೇಷ ಪೂಜೆ ನಡೆದು ಭಕ್ತರಿಗೆ ದರ್ಶನದ ಅವಕಾಶವಿದ್ದು ಸಂಜೆ ಏಳು ಗಂಟೆಗೆ ಬೆಟ್ಟದಲ್ಲಿ ಹರಕೆ ಹೊತ್ತು ಕೊಂಡು ಹೋದ ಬಟ್ಟೆ ಬೆಣ್ಣೆ ಸೌದೆ ಇತ್ಯಾದಿ ವಸ್ತುಗಳನ್ನು ಇಟ್ಟು ದೀಪ ಹಚ್ಚಲಾಗುವುದು ದೀಪ ನೋಡಿ ನಂತರ ದೀಪಾವಳಿ ಹಬ್ಬ ಆಚರಣೆ ಮಾಡಿಕೊಂಡು ಬರುವುದು ಇಲ್ಲಿನ ಸಂಪ್ರದಾಯ.
ಮೈಸೂರಿನ ಮಹಾರಾಜರು ಚಾಮುಂಡಿ ಬೆಟ್ಟದ ಮೇಲಿನಿಂದಲೇ ಶ್ರೀ ದೇವಿರಮ್ಮನವರ ದೀಪೋತ್ಸವವನ್ನು ಕಂಡು ಪೂಜೆ ಸಲ್ಲಿಸುವ ಪದ್ಧತಿ ಇತ್ತು ಎನ್ನಲಾಗಿದೆ.ನ.9ರ ಸೋಮವಾರ ಶ್ರೀದೇವಿರಮನವರ ದೇವಸ್ಥಾನದಲ್ಲಿ ದೇವಿಗೆ ಉಡುಗೆ ಪೂಜೆ ಸಂಜೆ ಆರು ಮೂವತ್ತಕ್ಕೆ ಬೆಣ್ಣೆ ಬಟ್ಟೆ ಸುಡುವುದು ನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಇರುತ್ತದೆ.
ನ.10 ರ ಮಂಗಳವಾರ ಕಾರ್ತಿಕ ಶುದ್ಧ ಪಾಡ್ಯ ಬೆಳಿಗ್ಗೆ ಎಂಟರಿಂದ ಶ್ರೀ ದೇವಿರಮನವರ ಮಹಾಮಂಗಳಾರತಿ ಪೂಜಾ ಕಾರ್ಯಕ್ರಮ ಹಾಗೂ ಗಣಪತಿ ಪೂಜೆ ಅಗ್ನಿಕುಂಡ ಪೂಜೆ ಕಳಸ ಸ್ಥಾಪನೆ ಕುಂಕುಮಾರ್ಚನೆ ಇತ್ಯಾದಿ ಧಾರ್ಮಿಕ ಕಾರ್ಯಗಳು ನೆರವೇರಲಿದೆ. ನ.11ರ ಬುಧವಾರ ಸೂರ್ಯೋದಯಕ್ಕೆ ಕೆಂಡಾರ್ಚನೆ ನಂತರ ಮಹಾಮಂಗಳಾರತಿ, ಹರಕೆ ಒಪ್ಪಿಸುವುದು, ತೀರ್ಥ ಪ್ರಸಾದ ವಿನಿಯೋಗವಿರುತ್ತದೆ ಎಂದು ಶ್ರೀ ದೇವಿರಮ ಟ್ರಸ್ಟ್ ನ ಅಧ್ಯಕ್ಷ ಕುಲ ಶೇಖರ ತಿಳಿಸಿದರು.ಪ್ರತಿದಿನ ದೇವರಮನವರ ದೇವಸ್ಥಾನದ ಆವರಣದಲ್ಲಿ ಅನ್ನದಾಸೋಹವಿರುತ್ತದೆ ಎಂದು ತಿಳಿಸಿದ್ದಾರೆ.
