ಬೆಂಗಳೂರು, ನ.7- ನಗರದ ಪೂರ್ವ ಭಾಗದ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೆ.ಆರ್. ಪುರದಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಿಸಲು ಬೆಂಗಳೂರು ಪೂರ್ವ ನಗರ ಪಾಲಿಕೆ ಸಿದ್ಧತೆ ನಡೆಸಿದೆ. ಕೆ.ಆರ್. ಪುರದಿಂದ ಭಟ್ಟರಹಳ್ಳಿ ನಡುವಿನ ಮುಖ್ಯರಸ್ತೆ ಸಮೀಪ ಸುಮಾರು ಐದು ಎಕರೆ ಜಮೀನು ಗುರುತಿಸಿ, ಯೋಜನೆಯ ಕಾರ್ಯಸಾಧ್ಯತೆ ಪರಿಶೀಲಿಸುವಂತೆ ಪಾಲಿಕೆಯ ಅಪರ ಆಯುಕ್ತೆ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಮನ್ವಯ ಸಭೆಯಲ್ಲಿ ಜಮೀನಿನ ಲಭ್ಯತೆ, ಭೂಸ್ವಾಧೀನ, ಪರಿಹಾರ ವಿತರಣೆ, ಭೂ ವಿನಿಮಯ, ರಸ್ತೆ ಸಂಪರ್ಕ, ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಒತ್ತುವರಿ ತೆರವು ಕುರಿತು ಚರ್ಚಿಸಲಾಯಿತು. ಕೆ.ಆರ್. ಪುರಕ್ಕೆ ಸುಸಜ್ಜಿತ ಬಸ್ ನಿಲ್ದಾಣದ ಅಗತ್ಯವಿದ್ದು, ಈ ವಿಚಾರ ಮುಖ್ಯಮಂತ್ರಿಗಳ ಹಂತದಲ್ಲೂ ಚರ್ಚೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐದು ಎಕರೆ ಜಮೀನಿನ ಹುಡುಕಾಟ:ಕೆ.ಆರ್. ಪುರಭಟ್ಟರಹಳ್ಳಿ ಮುಖ್ಯರಸ್ತೆ ಸಮೀಪ ಸುಮಾರು ಐದು ಎಕರೆ ಜಮೀನು ಲಭ್ಯವಾದರೆ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಅನುಕೂಲವಾಗಲಿದೆ. ಇದರಿಂದ ಬಸ್ ಸಂಚಾರ ವ್ಯವಸ್ಥೆ ಸುಧಾರಿಸುವುದರ ಜತೆಗೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಜಮೀನುಗಳ ಲಭ್ಯತೆ ಪರಿಶೀಲಿಸಿ ಸೂಕ್ತ ಸ್ಥಳ ಗುರುತಿಸಲು ಅಪರ ಆಯುಕ್ತರು ಸೂಚಿಸಿದ್ದಾರೆ.
ಜಮೀನಿನ ಲಭ್ಯತೆ ಆಧರಿಸಿ ಭೂ ವಿನಿಮಯದ ಸಾಧ್ಯತೆ ಪರಿಶೀಲಿಸುವುದರ ಜತೆಗೆ, ಅಗತ್ಯವಿದ್ದಲ್ಲಿ ಭೂಸ್ವಾಧೀನ ಕಾಯ್ದೆಯಡಿ ಜಮೀನು ಪಡೆಯಲು ಕ್ರಮ ಕೈಗೊಳ್ಳಬೇಕು. ವಿಲೇಜ್ ಮ್ಯಾಪ್ ಮತ್ತು ಭೂ ದಾಖಲೆಗಳ ಆಧಾರದ ಮೇಲೆ ಸರ್ಕಾರಿ ಹಾಗೂ ಖಾಸಗಿ ಜಮೀನುಗಳನ್ನು ಪ್ರತ್ಯೇಕವಾಗಿ ಗುರುತಿಸಬೇಕು. ಭೂಸ್ವಾಧೀನ ಸಂದರ್ಭದಲ್ಲಿ ನಿಯಮಾನುಸಾರ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ಪರಿಹಾರ ನಿಗದಿಪಡಿಸುವ ಸಾಧ್ಯತೆಗಳನ್ನೂ ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಐಟಿಐ ಜಮೀನಿನ ಮೇಲೂ ಕಣ್ಣು:
ಐಟಿಐ ಲಿಮಿಟೆಡ್‌ಗೆ ಸೇರಿದ ಜಮೀನಿನ ಲಭ್ಯತೆ ಹಾಗೂ ಕೆಎಸ್‌ಆರ್‌ಟಿಸಿಗೆ ಸುಮಾರು ಐದು ಎಕರೆ ಜಮೀನು ಪಡೆಯುವ ಆಸಕ್ತಿಯ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಮುಖ್ಯರಸ್ತೆಗೆ ಸಮೀಪದಲ್ಲಿ ಜಮೀನು ದೊರೆಯುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಐಟಿಐ ಸಂಸ್ಥೆಯ ನಿರೀಕ್ಷೆಗಳನ್ನು ಪರಿಗಣಿಸಿ, ನಿಯಮಾನುಸಾರ ವಾಣಿಜ್ಯ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ಪರಿಹಾರ ನಿಗದಿಪಡಿಸುವ ಸಾಧ್ಯತೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕಿದೆ.
ಐಟಿಐ ಪ್ರದೇಶದಲ್ಲಿ ನಕ್ಷೆಯಲ್ಲಿ ರಸ್ತೆ ಗುರುತಿಸಿದ್ದರೂ ಸ್ಥಳದಲ್ಲಿ ರಸ್ತೆ ಇಲ್ಲದಿರುವುದು ಪರಿಶೀಲನೆ ವೇಳೆ ಗಮನಕ್ಕೆ ಬಂದಿದೆ. ಹೀಗಾಗಿ ಸುಮಾರು 80 ಮೀಟರ್ ಉದ್ದದ ರಸ್ತೆ ಮಾರ್ಗದಲ್ಲಿರುವ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಸೂಚಿಸಲಾಗಿದೆ. ನಕ್ಷೆಯಲ್ಲಿರುವ ರಸ್ತೆ ಮಾರ್ಗವನ್ನು ಗುರುತಿಸಿ, ಒತ್ತುವರಿ ತೆರವು ಹಾಗೂ ರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ.
ನ.16ರಂದು ಜಂಟಿ ಸರ್ವೆ:
ಐಟಿಐ ಲಿಮಿಟೆಡ್ ಪ್ರತಿನಿಧಿಗಳು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು (ಎಡಿಎಲ್‌ಆರ್) ಹಾಗೂ ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ನವೆಂಬರ್ 16ರಂದು ಜಂಟಿ ಸರ್ವೆ ನಡೆಸಲಿವೆ. ಈ ವೇಳೆ ಸರ್ಕಾರಿ ಮತ್ತು ಖಾಸಗಿ ಜಮೀನುಗಳ ಗಡಿ, ಲಭ್ಯವಿರುವ ವಿಸ್ತೀರ್ಣ, ರಸ್ತೆ ಅಲೈನ್‌ಮೆಂಟ್ ಹಾಗೂ ಒತ್ತುವರಿ ವಿವರಗಳನ್ನು ಗುರುತಿಸಲಾಗುತ್ತದೆ.
ಜಂಟಿ ಸರ್ವೆಗೂ ಮುನ್ನ ಸಿಡಿಪಿ ರಸ್ತೆ ನಕ್ಷೆಯ ಪ್ರಕಾರ ರಸ್ತೆ ಅಲೈನ್‌ಮೆಂಟ್ ಸಿದ್ಧಪಡಿಸಿ, ಮಾರ್ಗದಲ್ಲಿರುವ ಒತ್ತುವರಿ ಹಾಗೂ ಗಿಡಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಸ್ಥಳ ಪರಿಶೀಲನೆ ಮತ್ತು ಸರ್ವೆ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ, ಯೋಜನೆಯ ಅನುಷ್ಠಾನಕ್ಕೆ ಪೂರಕವಾದ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಇದಕ್ಕೂ ಅನುಗುಣವಾಗಿ ಪಾಲಿಕೆಯ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ಐಟಿಐ ಪ್ರದೇಶದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದು, ಬಸ್ ನಿಲ್ದಾಣಕ್ಕೆ ಸೂಕ್ತ ಜಾಗ, ಜಮೀನಿನ ವಿಸ್ತೀರ್ಣ, ರಸ್ತೆ ಸಂಪರ್ಕ ಹಾಗೂ ಮೂಲಸೌಕರ್ಯಗಳ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.ಸಭೆಯಲ್ಲಿ ಮುಖ್ಯ ಅಭಿಯಂತರ ವಿಶ್ವನಾಥ್ ಜೆ., ಕರ್ನಾಟಕ ಗೃಹ ಮಂಡಳಿ, ಲೋಕೋಪಯೋಗಿ ಇಲಾಖೆ, ಭೂ ದಾಖಲೆಗಳ ಉಪ ನಿರ್ದೇಶಕರ ಕಚೇರಿ, ಐಟಿಐ ಲಿಮಿಟೆಡ್ ಹಾಗೂ ಪಾಲಿಕೆಯ ಅಧಿಕಾರಿಗಳು ಭಾಗವಹಿಸಿದ್ದರು.
