ಬೆಂಗಳೂರು,ನ.7- ರಾಜ್ಯದಲ್ಲಿ ಹಾಲು, ಮೊಸರು ಸೇರಿದಂತೆ ನಂದಿನಿ ಉತ್ಪನ್ನಗಳ ಬೆಲೆ ಏರಿಕೆ ಹಾಗೂ ಬಸ್ ಪ್ರಯಾಣ ದರ ಹೆಚ್ಚಳದ ಬೆನ್ನಲ್ಲೇ ಇದೀಗ ಆಟೋ ಪ್ರಯಾಣ ದರ ಏರಿಕೆಯ ಚರ್ಚೆ ಮುನ್ನೆಲೆಗೆ ಬಂದಿದೆ. ಆಟೋ ಪ್ರಯಾಣ ದರವನ್ನು ಪರಿಷ್ಕರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಆಟೋ ಸಂಘಟನೆಗಳ ಒಕ್ಕೂಟ ಸಿದ್ಧತೆ ನಡೆಸಿದ್ದು, ಜನಸಾಮಾನ್ಯರಿಗೆ ಮತ್ತೊಂದು ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಎದುರಾಗಿದೆ.
ರಾಜ್ಯದಲ್ಲಿ ಪ್ರಸ್ತುತ ಆಟೋ ಪ್ರಯಾಣದ ಕನಿಷ್ಠ ದರ 36 ರೂ. ಇದ್ದು, ಪ್ರತಿ ಕಿಲೋಮೀಟರ್ಗೆ 18 ರೂ. ನಿಗದಿಯಾಗಿದೆ. ಈ ದರವನ್ನು ಹೆಚ್ಚಿಸುವಂತೆ ಆಟೋ ಚಾಲಕರ ಸಂಘಟನೆಗಳು ಒತ್ತಾಯಿಸುತ್ತಿವೆ. ಇಂಧನ ಬೆಲೆ, ವಾಹನ ನಿರ್ವಹಣೆ ವೆಚ್ಚ ಹಾಗೂ ಜೀವನ ನಿರ್ವಹಣೆಯ ಖರ್ಚು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಅಗತ್ಯ ಎಂಬುದು ಸಂಘಟನೆಗಳ ವಾದವಾಗಿದೆ.
ತಮಿಳುನಾಡು ಮಾದರಿ ಜಾರಿಗೆ ಒತ್ತಾಯ:ತಮಿಳುನಾಡಿನಲ್ಲಿ ಜಾರಿಯಲ್ಲಿದೆ ಎಂದು ಉಲ್ಲೇಖಿಸಲಾಗಿರುವ ದರ ಮಾದರಿಯಂತೆ ಕರ್ನಾಟಕದಲ್ಲೂ ಆಟೋ ಪ್ರಯಾಣ ದರ ನಿಗದಿಪಡಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ. ಅಲ್ಲಿ ಕನಿಷ್ಠ ಪ್ರಯಾಣ ದರವನ್ನು 50 ರೂ. ಹಾಗೂ ಪ್ರತಿ ಕಿಲೋಮೀಟರ್ಗೆ 25 ರೂ. ನಿಗದಿಪಡಿಸಿರುವ ಮಾದರಿಯನ್ನು ರಾಜ್ಯದಲ್ಲೂ ಜಾರಿಗೆ ತರಬೇಕೆಂದು ಆಟೋ ಸಂಘಟನೆಗಳ ಒಕ್ಕೂಟ ಆಗ್ರಹಿಸಲು ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರಸ್ತುತ ದರ ವ್ಯವಸ್ಥೆಯನ್ನು ಪರಿಷ್ಕರಿಸಿ, ಕನಿಷ್ಠ ಪ್ರಯಾಣ ದರ ಹಾಗೂ ಪ್ರತಿ ಕಿಲೋಮೀಟರ್ನ ದರವನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಯುತ್ತಿದೆ. ಜನಸಾಮಾನ್ಯರ ಜೇಬಿಗೆ ಮತ್ತಷ್ಟು ಹೊರೆ?ಈಗಾಗಲೇ ಹಾಲು ಮತ್ತು ಮೊಸರಿನ ಬೆಲೆ ಏರಿಕೆ, ಬಸ್ ಪ್ರಯಾಣ ದರ ಹೆಚ್ಚಳದಿಂದ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಆಟೋ ದರ ಏರಿಕೆಯ ಪ್ರಸ್ತಾವನೆ ಮತ್ತೊಂದು ಹೊರೆ ತಂದೊಡ್ಡುವ ಆತಂಕ ಮೂಡಿಸಿದೆ.
ದಿನನಿತ್ಯ ಕಚೇರಿ, ಶಾಲಾ-ಕಾಲೇಜು ಹಾಗೂ ಇತರ ಕೆಲಸಗಳಿಗೆ ಆಟೋಗಳನ್ನು ಅವಲಂಬಿಸಿರುವ ಪ್ರಯಾಣಿಕರ ಮೇಲೆ ದರ ಪರಿಷ್ಕರಣೆಯ ಪರಿಣಾಮ ಬೀರುವ ಸಾಧ್ಯತೆಯಿದೆ.ಒಕ್ಕೂಟವು ಸರ್ಕಾರಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿದ ಬಳಿಕ ದರ ಏರಿಕೆ ಕುರಿತು ಸರ್ಕಾರ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ. ಸದ್ಯಕ್ಕೆ ಆಟೋ ದರ ಏರಿಕೆ ಪ್ರಸ್ತಾವನೆ ಹಂತದಲ್ಲಿದ್ದು, ಅಂತಿಮ ನಿರ್ಧಾರ ಸರ್ಕಾರದ ಕೈಯಲ್ಲಿದೆ.
