ಬೆಂಗಳೂರು,ನ.7-ಮನೆಯಲ್ಲೇ ಅಪ್ಪ ತನ್ನ ಕಣ್ಣಮುಂದೆಯೇ ತಾಯಿ, ಅಜ್ಜಿ ಸೇರಿದಂತೆ ಕುಟುಂಬದ ಏಳು ಮಂದಿಯನ್ನು ಕೊಲೆ ಮಾಡಿದರೂ ಮಗಳು ಏಕೆ ಸುಮನಿದ್ದಳು ಎಂಬ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ.ಕೌಟುಂಬಿಕ ವಿಚಾರಕ್ಕೆ ಪತ್ನಿ ಕುಟುಂಬದವರ ಮೇಲಿನ ಸೇಡಿಗಾಗಿ ಎಲ್ಲರನ್ನೂ ಮುಗಿಸುವ ಸಂಚು ರೂಪಿಸಿದ್ದ ಆರೋಪಿ ಬಾಡೂಟದ ನೆಪದಲ್ಲಿ ತನ್ನ ಮಗಳಿಂದಲೇ ಕರೆ ಮಾಡಿಸಿ ಒಬ್ಬೊಬ್ಬರಾಗಿ ಮನೆಗೆ ಕರೆಸಿಕೊಂಡು ಕೊಲೆ ಮಾಡಿ ನಂತರ ಮಗಳು ಸೇರಿಕೊಂಡು ರಕ್ತವನ್ನು ಬಾಚಿ ಹಾಕಿರುವ ಅಚ್ಚರಿ ಸಂಗತಿ ಬಯಲಾಗಿದೆ.
ಅಪ್ಪನ ಹೀನ ಕೃತ್ಯಕ್ಕೆ ಮಗಳು ಏಕೆ ಸಹಕರಿಸಿದಳು ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಬಾಡೂಟದ ನೆಪದಲ್ಲಿ ಪತ್ನಿಯ ಸಂಬಂಧಿಕರನ್ನು ಒಬ್ಬೊಬ್ಬರಂತೆ ಮನೆಗೆ ಕರೆಸಿಕೊಂಡು ಆರೋಪಿ ಇಂದುಶೇಖರ್ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಏಳು ಮಂದಿಯನ್ನು ಮನೆಯಲ್ಲೇ ಕೊಲೆ ಮಾಡಿದರೂ ಮಗಳು ಏಕೆ ಸುಮನಿದ್ದಳು ಎಂಬ ಪ್ರಶ್ನೆ ಕಾಡತೊಡಗಿದೆ.
ಮೊದಲಿಗೆ ಪತ್ನಿ ಸುನಿತಾ ಅವರನ್ನು ಕೊಲೆ ಮಾಡಿದ್ದ, ನಂತರ ಅತ್ತೆ ರೂಪವತಿಗೆ ಆರೋಪಿಯ ಅಪ್ರಾಪ್ತ ಮಗಳು ಕರೆ ಮಾಡಿ ಬಾಡೂಟಕ್ಕೆ ಕರೆದಿದ್ದಳು. ಊಟಕ್ಕೆ ಬಂದ ಅತ್ತೆಯನ್ನು ರುಬ್ಬುವ ಗುಂಡುಕಲ್ಲು ಬಳಸಿ ಕೊಲೆ ಮಾಡಿದ್ದಾನೆ.ನಂತರ ಮೃತದೇಹವನ್ನು ಆರೋಪಿ ಹೊರಗೆ ಕಾರಿನಲ್ಲಿ ಸಾಗಿಸಿ ಎಸೆದು ಬಂದು ಮಗಳ ಜೊತೆ ಸೇರಿಕೊಂಡು ಮನೆಯಲ್ಲಿ ಹರಡಿದ್ದ ರಕ್ತವನ್ನೆಲ್ಲಾ ಸ್ವಚ್ಛಗೊಳಿಸಿದ್ದಾನೆ.
ಬಳಿಕ ಶಂಕರ್ ಮತ್ತು ನಳಿನಿ ದಂಪತಿಯನ್ನು ಊಟಕ್ಕೆ ಕರೆಯಲು ಮಗಳ ಕೈಯಿಂದಲೇ ಆರೋಪಿ ತಂದೆ ಕರೆ ಮಾಡಿಸಿದ್ದಾನೆ. ದಂಪತಿ ತಮ ಏಳು ವರ್ಷದ ಮಗ ಪುನೀತ್ನನ್ನು ಊಟಕ್ಕೆಂದು ಕರೆದುಕೊಂಡು ಬಂದಾಗ ಈ ಕ್ರೂರಿ ಬಾಲಕನನ್ನೂ ಬಿಡದೆ ಹೀನಾಯವಾಗಿ ಕೊಲೆ ಮಾಡಿ ಪ್ಲಾಸ್ಟಿಕ್ ಕವರ್ಗಳಲ್ಲಿ ಸುತ್ತಿ ಯಾರಿಗೂ ಅನುಮಾನ ಬಾರದಂತೆ ಕಾರಿನಲ್ಲಿ ಕೊಂಡೊಯ್ದು ನಿರ್ಜನ ಪ್ರದೇಶದ ಬಳಿ ಎಸೆದು ವಾಪಸ್ ಆಗಿದ್ದಾನೆಂಬುವುದು ಪೊಲೀಸರ ಇದುವರೆಗಿನ ತನಿಖೆಯಿಂದ ತಿಳಿದು ಬಂದಿದೆ.
ಮೊದಲು ದಂಪತಿಯನ್ನು ಕೊಲೆ ಮಾಡಿ ನಂತರ ಬಾಲಕನನ್ನು ಕೊಲೆ ಮಾಡಲಾಗಿತ್ತೇ ಎಂಬ ಬಗ್ಗೆ ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.ಆರೋಪಿಯನ್ನು ಪೊಲೀಸರು ಸುದೀರ್ಘ ವಿಚಾರಣೆಗೊಳಪಡಿಸಿದಾಗ ಇನ್ನಷ್ಟು ಸ್ಪೋಟಕ ರಹಸ್ಯಗಳು ಬಯಲಿಗೆ ಬಂದಿವೆ. ಈ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿರುವ ಪೊಲೀಸರು ಕುಟುಂಬಸ್ಥರ ಹೇಳಿಕೆಗಳನ್ನು ಪಡೆದುಕೊಳ್ಳುತ್ತಿದ್ದಾರೆ.
