Homeರಾಜ್ಯ7 ಮಂದಿಯ ಹತ್ಯೆ ಪ್ರಕರಣ : ಸೇಲಂನ ಘಾಟ್‌ನಲ್ಲಿ ಎರಡು ಶವಗಳು ಪತ್ತೆ

7 ಮಂದಿಯ ಹತ್ಯೆ ಪ್ರಕರಣ : ಸೇಲಂನ ಘಾಟ್‌ನಲ್ಲಿ ಎರಡು ಶವಗಳು ಪತ್ತೆ

ಬೆಂಗಳೂರು,ನ.7-ನಗರವನ್ನೇ ಬೆಚ್ಚಿ ಬೀಳಿಸಿದ್ದ ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣದ ಮೃತದೇಹಗಳ ಪತ್ತೆಕಾರ್ಯದಲ್ಲಿ ತೊಡಗಿರುವ ಉತ್ತರ ವಿಭಾಗದ ಪೊಲೀಸರು ಇನ್ನೆರಡು ಶವಗಳನ್ನು ಹೊರತೆಗೆದಿದ್ದಾರೆ.

ಸೇಲಂ ಕಾಡಿನಲ್ಲಿ ನಿನ್ನೆ ರಾತ್ರಿ ಕೊಳೆತ ಸ್ಥಿತಿಯಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ. ಅವುಗಳು ಆರೋಪಿ ಇಂದುಶೇಖರ್‌ ಪತ್ನಿ ಸುನಿತಾ ಹಾಗೂ ಅತ್ತೆ ರೂಪವತಿ ಶವಗಳೆಂದು ಶಂಕಿಸಲಾಗಿದೆ.ಪೊಲೀಸರು ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಪತ್ನಿ ಹಾಗೂ ಅತ್ತೆಯ ಮೃತದೇಹಗಳನ್ನು ಸೇಲಂ ಕಾಡಿನಲ್ಲಿ ಬಿಸಾಡಿರುವುದಾಗಿ ತಿಳಿಸಿದ್ದಾನೆ.

ಈ ಹಿನ್ನಲೆಯಲ್ಲಿ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿ ಸೇಲಂಗೆ ಕರೆಸಿಕೊಂಡಿದ್ದಾರೆ. ಅವರುಗಳು ಶವಗಳನ್ನು ಗುರುತಿಸಿದ ನಂತರ ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆ ನಡೆಯಲಿದ್ದು, ಬಳಿಕ ಸಂಬಂಧಿಕರಿಗೆ ಹಸ್ತಾಂತರ ಮಾಡಲಿದ್ದಾರೆ.

ಆರೋಪಿ ಇಂದುಶೇಖರ್‌ 15 ದಿನಗಳ ಅಂತರದಲ್ಲಿ ಕುಟುಂಬ ಸದಸ್ಯರ ಏಳು ಮಂದಿಯನ್ನು ಕೊಲೆ ಮಾಡಿ ಶವಗಳನ್ನು ನಂದಿಬೆಟ್ಟ,ಸೇಲಂ ಕಾಡು, ಚಾರ್ಮಾಡಿ ಘಾಟ್‌, ಚಾಮುಂಡಿ ಬೆಟ್ಟದ ತಪ್ಪಲಿನ ಕಾಡಿನಲ್ಲಿ ಎಸೆದಿದ್ದಾನೆ.ನಂದಿಬೆಟ್ಟದಲ್ಲಿ ಶಂಕರ್‌ ಅವರ ಪುತ್ರ ಏಳು ವರ್ಷದ ಪುನೀತ್‌ ಶವ ಸಿಕ್ಕಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಶವವನ್ನು ಹಸ್ತಾಂತರಿಸಲಾಗಿದ್ದು, ಅಂತ್ಯಸಂಸ್ಕಾರ ಮಾಡಲಾಗಿದೆ.

ಇನ್ನುಳಿದವರ ಮೃತದೇಹಗಳಿಗಾಗಿ ಆರೋಪಿಯ ಮಾಹಿತಿಯಂತೆ ಶೋಧಕಾರ್ಯ ಮುಂದುವರೆಸಿರುವ ಪೊಲೀಸರು ತಮಿಳುನಾಡಿನ ಸೇಲಂ ಘಾಟ್‌ ಎರ್ಕಾಡ್‌ ಅರಣ್ಯ ಪ್ರದೇಶಗಳಲ್ಲಿ ಸ್ಥಳೀಯ ಪೊಲೀಸರ ನೆರವಿನಿಂದ ಹುಡುಕಾಟ ನಡೆಸಿದಾಗ ಇನ್ನಿಬ್ಬರ ಶವಗಳು ಪತ್ತೆಯಾಗಿವೆ.

ಮೃತದೇಹಗಳ ಪತ್ತೆಗೆ ಆರು ತಂಡ ರಚನೆ
ಸಿಲಿಕಾನ್‌ ಸಿಟಿಯಲ್ಲಿ ಭಾರೀ ಆತಂಕ ಮೂಡಿಸಿರುವ ಏಳು ಮಂದಿಯ ಹತ್ಯಾಕಾಂಡ ಪ್ರಕರಣದ ಗಂಭೀರತೆಯನ್ನು ಅರಿತು ತನಿಖೆ ಹಾಗೂ ಮೃತದೇಹಗಳ ಪತ್ತೆಗಾಗಿ ಆರು ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಈಗಾಗಲೇ ಕಾರ್ಯೋನುಖವಾಗಿದ್ದು, ತಮಿಳುನಾಡು , ಮೈಸೂರಿನ ಚಾಮುಂಡಿಬೆಟ್ಟ , ಚಾರ್ಮಾಡಿ ಘಾಟ್‌ ಸೇರಿದಂತೆ ವಿವಿಧ ಪ್ರದೇಶಗಳಿಗೆ ತೆರಳಿವೆ. ಮೈಸೂರಿನ ಚಾಮುಂಡಿಬೆಟ್ಟ, ತಮಿಳುನಾಡಿನ ಕೆಲವು ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲು ಎರಡು ವಿಶೇಷ ತಂಡಗಳು ತೆರಳಿವೆ.

ಚಾರ್ಮಾಡಿ ಘಾಟ್‌ ಪ್ರದೇಶದಲ್ಲಿ ಸ್ಥಳ ಪರಿಶೀಲನೆ ನಡೆಸಲು ಒಂದು ತಂಡ ತೆರಳಿದೆ. ಶ್ರೀರಾಮಪುರ ಮತ್ತು ರಾಜಾಜಿನಗರ ಠಾಣೆಗಳ ಪೊಲೀಸರು ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಶಿವಕುಮಾರ್‌ ಮತ್ತು ದಿವ್ಯಾ ದಂಪತಿಯ ಮೃತದೇಹಗಳನ್ನು ಎಲ್ಲಿ ಎಸೆಯಲಾಗಿದೆ ಎಂಬುವುದನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.ಇನ್ನುಳಿದ ತಂಡಗಳು ಆರೋಪಿ ಹೇಳಿರುವ ಸ್ಥಳಗಳಲ್ಲಿ ಮೃತದೇಹಗಳಿಗಾಗಿ ಹುಡುಕಾಟ ನಡೆಸುತ್ತಿವೆ.

RELATED ARTICLES

Latest News