ನವದೆಹಲಿ, ಏ.17- ಮುಂಬರುವ ಟಿ20 ವಿಶ್ವಕಪ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ವಿರಾಟ್ ಕೋಹ್ಲಿ ಆರಂಭಿಕ ಆಟಗಾರರಾಗಿ ಆಡುವ ಸಾಧ್ಯತೆಗಳಿವೆ. ಜೂನ್ನಲ್ಲಿ ಯುಎಸ್ಎ ಮತ್ತು ವೆಸ್ಟ್ಇಂಡೀಸ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಈ ಪ್ರಯೋಗ ನಡೆಯುವ ಸಾಧ್ಯತೆಗಳಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಟಿ20 ವಿಶ್ವಕಪ್ನಲ್ಲಿ ರೋಹಿತ್ನ ಆರಂಭಿಕ ಪಾಲುದಾರನಾಗಿ ಕೊಹ್ಲಿಯನ್ನು ಆಡಿಸಲು ಉತ್ಸುಕವಾಗಿದೆ ಎಂದು ವರದಿಯಾಗಿದೆ. ಕಳೆದ ವಾರ ಮುಂಬೈನಲ್ಲಿ ನಡೆದ ಸಭೆಯಲ್ಲಿ ನಾಯಕ ರೋಹಿತ್, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಅಜಿತ್ ಅಗರ್ಕರ್ ಅವರು ಈ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಹದಿನೈದು ದಿನಗಳಲ್ಲಿ ಪ್ರಕಟಗೊಳ್ಳಲಿರುವ ಭಾರತದ ಟಿ 20 ವಿಶ್ವಕಪ್ ತಂಡದಲ್ಲಿ ಕೊಹ್ಲಿ ಸ್ಥಾನದ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ ಆದರೆ ಎಲ್ಲಾ ಅನುಮಾನಗಳಿಗೆ ಈ ವರದಿ ತೆರೆ ಎಳೆದಿದೆ. ಕಳೆದ ವರ್ಷ ಏಕದಿನ ವಿಶ್ವಕಪ್ ನಂತರ ರೋಹಿತ್ , ದ್ರಾವಿಡ್ ಮತ್ತು ಆಯ್ಕೆದಾರರನ್ನು ಭೇಟಿಯಾದಾಗ ಟಿ20 ತಂಡದಲ್ಲಿ ಕೊಹ್ಲಿ ಸ್ಥಾನ ಖಚಿತವಾಗಿರಲಿಲ್ಲ. ಆದರೆ ಕಳೆದ ಕೆಲವು ತಿಂಗಳುಗಳಲ್ಲಿ ಬಹಳಷ್ಟು ಬದಲಾವಣೆಯಾಗಿದೆ.