ಸೂರತ್,ನ.9-ಸಾಮಾನ್ಯವಾಗಿ ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ಎಂದರೆ ಹೆಚ್ಚುವರಿ ಒಂದು ತಿಂಗಳ ವೇತನ, ಸಿಹಿತಿಂಡಿ ಬಾಕ್ಸ್ ಅಥವಾ ಡ್ರೈಫ್ರೂಟ್ಸ್ ಉಡುಗೊರೆ. ಆದರೆ ಇಲ್ಲಿನ ಜವಳಿ ಉದ್ಯಮಿಯೊಬ್ಬರು ತಮ್ಮ ಉದ್ಯೋಗಿಗಳಿಗೆ ಈ ಬಾರಿ ನೀಡಿರುವ ದೀಪಾವಳಿ ಉಡುಗೊರೆ ಎಲ್ಲರ ಗಮನ ಸೆಳೆದಿದೆ.
ಸೂರತ್ನ ಜವಳಿ ಉದ್ಯಮಿ ರಾಮ್ಸ್ವರೂಪ್ ಮುಂಡೆ ಅವರು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ 20 ಉದ್ಯೋಗಿಗಳಿಗೆ ತಲಾ 1 ಲಕ್ಷ ರೂ.ಗೂ ಅಧಿಕ ನಗದು ಹಣವನ್ನು ದೀಪಾವಳಿ ಉಡುಗೊರೆಯಾಗಿ ನೀಡಿದ್ದಾರೆ. ಈ ವಿಶಿಷ್ಟ ಬೋನಸ್ ವಿತರಣೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಉಡುಗೊರೆಯ ವಿಶೇಷತೆಯೆಂದರೆ ಹಣವನ್ನು ಸಾಮಾನ್ಯವಾಗಿ ಲಕೋಟೆಯಲ್ಲಿ ನೀಡುವ ಬದಲು, ಅಲಂಕೃತ ಪೂಜಾ ತಟ್ಟೆಗಳಲ್ಲಿ ನಗದು ರೂಪದಲ್ಲಿ ನೀಡಲಾಗಿದೆ.ಬೆಳ್ಳಿ ಬಣ್ಣದ ಪೂಜಾ ತಟ್ಟೆಗಳಲ್ಲಿ 10 ರೂ.ನಿಂದ 500 ರೂ.ವರೆಗಿನ ವಿವಿಧ ಮುಖಬೆಲೆಯ ಹೊಸ ನೋಟುಗಳ ಕಂತೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಉದ್ಯೋಗಿಗಳಿಗೆ ನೀಡಲಾಗಿದೆ.
ಇನ್ನೊಂದು ವಿಶೇಷವೆಂದರೆ, ಉದ್ಯೋಗಿಗಳ ಪತ್ನಿಯರೇ ಹಣ ತುಂಬಿದ ಈ ತಟ್ಟೆಗಳನ್ನು ತಮ ಪತಿಯರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದರಿಂದ ದೀಪಾವಳಿ ಸಂಭ್ರಮ ಕುಟುಂಬದ ಸದಸ್ಯರ ನಡುವಿನ ಭಾವನಾತ್ಮಕ ಕ್ಷಣಕ್ಕೂ ಸಾಕ್ಷಿಯಾಗಿದೆ.
