Homeರಾಜ್ಯಗಾಣಗಾಪುರದ ದತ್ತ ದೇಗುಲದ ಸಮಗ್ರ ಅಭಿವೃದ್ಧಿಗೆ 250 ಕೋಟಿ ರೂ.ಗಳ ಯೋಜನೆ

ಗಾಣಗಾಪುರದ ದತ್ತ ದೇಗುಲದ ಸಮಗ್ರ ಅಭಿವೃದ್ಧಿಗೆ 250 ಕೋಟಿ ರೂ.ಗಳ ಯೋಜನೆ

ಬೆಂಗಳೂರು, ನ.9- ಕಲಬುರಗಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ 250 ಕೋಟಿ ರೂಪಾಯಿ ವೆಚ್ಚದ ಮಹತ್ವಾಕಾಂಕ್ಷಿ ಯೋಜನೆ ರೂಪಿಸಲಾಗಿದೆ. ಕಲ್ಯಾಣ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರವನ್ನು ಪ್ರವಾಸೋದ್ಯಮದ ಪ್ರಮುಖ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ ಹೆಜ್ಜೆಯಾಗಲಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಒಟ್ಟು 250 ಕೋಟಿ ರೂಪಾಯಿ ವೆಚ್ಚದ ಯೋಜನೆಯ ಮೊದಲ ಹಂತದಲ್ಲಿ 50 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ವಿವರವಾದ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಸಚಿವ ಸಂಪುಟದ ಅನುಮೋದನೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಶೀಘ್ರದಲ್ಲೇ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಮೊದಲ ಹಂತದಲ್ಲಿ ಆರು ಪ್ರಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಸಂಗಮ ಘಾಟ್‌ ಅಭಿವೃದ್ಧಿಗೆ 17.12 ಕೋಟಿ ರೂಪಾಯಿ, ಪಾಪವಿನಾಶ ತೀರ್ಥ ಅಭಿವೃದ್ಧಿಗೆ 12.50 ಕೋಟಿ ರೂಪಾಯಿ, ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ನಡಿಗೆ ಮಾರ್ಗಕ್ಕೆ 6.50 ಕೋಟಿ ರೂಪಾಯಿ, ವಾಹನ ನಿಲುಗಡೆ ಮತ್ತು ಸಾರಿಗೆ ವ್ಯವಸ್ಥೆಗೆ 9.10 ಕೋಟಿ ರೂಪಾಯಿ, ಬಸ್‌‍ ನಿಲ್ದಾಣದಿಂದ ದೇವಸ್ಥಾನದವರೆಗಿನ ಪಾದಚಾರಿ ಮಾರ್ಗಕ್ಕೆ 52 ಲಕ್ಷ ರೂಪಾಯಿ ಹಾಗೂ ದೇವಸ್ಥಾನ ಸಂಕೀರ್ಣದ ಅಭಿವೃದ್ಧಿಗೆ 4.25 ಕೋಟಿ ರೂಪಾಯಿ ಮೀಸಲಿಡಲಾಗಿದೆ.

ಯೋಜನೆಯಡಿ 860 ಕಾರುಗಳು ಮತ್ತು 500 ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಸುಸಜ್ಜಿತ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸಂಗಮ ಘಾಟ್‌ನಲ್ಲಿ 40 ಅಂಗಡಿಗಳನ್ನು ನಿರ್ಮಿಸಲಾಗುವುದು. ಪಾಪವಿನಾಶ ತೀರ್ಥದಲ್ಲಿ ತೇಲುವ ದೋಣಿ ನಿಲ್ದಾಣ ಹಾಗೂ ಭಕ್ತರು ಸುರಕ್ಷಿತವಾಗಿ ಸ್ನಾನ ಮಾಡಲು ಅಗತ್ಯ ವ್ಯವಸ್ಥೆ ಮಾಡಲಾಗುತ್ತದೆ.

ದೇವಸ್ಥಾನದ ಮಾರ್ಗದಲ್ಲಿ 30 ಅಂಗಡಿಗಳು, ಮಾಹಿತಿ ಕೇಂದ್ರ ಮತ್ತು ವಿದ್ಯುತ್‌ ದೀಪಗಳ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಉದ್ಯಾನವನ, ಶೌಚಾಲಯ, ವಿಶ್ರಾಂತಿ ತಾಣಗಳು ಸೇರಿದಂತೆ ಯಾತ್ರಾರ್ಥಿಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಶೇಷಚೇತನರಿಗೆ ಅನುಕೂಲವಾಗುವ ಪ್ರವೇಶ ವ್ಯವಸ್ಥೆ ಹಾಗೂ ದೇವರ ದರ್ಶನಕ್ಕೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನು ನಿರ್ಮಿಸಲಾಗುತ್ತದೆ.

ನದಿ ತೀರದ ಸೌಂದರ್ಯೀಕರಣ, ಸುಸಜ್ಜಿತ ವಾಹನ ನಿಲುಗಡೆ ವ್ಯವಸ್ಥೆ ಮತ್ತು ಆಧುನಿಕ ಮೂಲ ಸೌಕರ್ಯಗಳ ಮೂಲಕ ಗಾಣಗಾಪುರವನ್ನು ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣವನ್ನಾಗಿ ರೂಪಿಸುವುದು ಯೋಜನೆಯ ಉದ್ದೇಶವಾಗಿದೆ. ಇದರಿಂದ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಮತ್ತು ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗುವುದರ ಜೊತೆಗೆ ಕಲಬುರಗಿ ಜಿಲ್ಲೆಯ ಪ್ರವಾಸೋದ್ಯಮ ಹಾಗೂ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ದೊರೆಯಲಿದೆ ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

RELATED ARTICLES

Latest News