ಬೆಂಗಳೂರು,ನ.11- ಗೌರಿ ಲಂಕೇಶ್, ಪೊ. ಎಂ.ಎಂ. ಕಲ್ಬುರ್ಗಿ ಸೇರಿದಂತೆ ವಿಚಾರವಾದಿಗಳ ಹತ್ಯೆ ಪ್ರಕರಣಗಳಲ್ಲಿ ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರಕ್ಕೆ ಸಂಬಂಧಿಸಿದವರ ಪಾತ್ರವಿದೆ ಎಂಬ ಗೃಹಸಚಿವ ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಆಕ್ಷೇಪಿಸಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಆರೋಪಕ್ಕೆ ಸೂಕ್ತ ಸಾಕ್ಷ್ಯ ಒದಗಿಸಬೇಕು; ಸಾಧ್ಯವಾಗದಿದ್ದರೆ ಮೂರು ದಿನಗಳೊಳಗೆ ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸವಾಲು ಹಾಕಿದ್ದಾರೆ.
ಈ ವಿಚಾರವಾಗಿ ಪ್ರಿಯಾಂಕ್ ಖರ್ಗೆ ಹಾಗೂ ತೇಜಸ್ವಿ ಸೂರ್ಯ ನಡುವೆ ಸಾಮಾಜಿಕ ಜಾಲತಾಣದ ಮೂಲಕ ವಾಗ್ವಾದ ನಡೆದಿದ್ದು, ಖರ್ಗೆ ಆರೋಪಗಳಿಗೆ ಪ್ರತಿಕ್ರಿಯಿಸಿರುವ ತೇಜಸ್ವಿ, ಗೌರಿ ಲಂಕೇಶ್ ಮತ್ತು ಪೊ. ಕಲ್ಬುರ್ಗಿ ಅವರಿಗೆ ನ್ಯಾಯ ದೊರಕಿಸುವುದು ಅತ್ಯಂತ ಗಂಭೀರ ವಿಚಾರವಾಗಿದ್ದು, ರಾಜಕೀಯ ವೇದಿಕೆಗಳಲ್ಲಿ ನೀಡುವ ಆರೋಪ-ಪ್ರತ್ಯಾರೋಪಗಳಿಗಿಂತ ಪ್ರಕರಣಗಳ ನಿಷ್ಪಕ್ಷಪಾತ ತನಿಖೆ ಮುಖ್ಯ ಎಂದು ಹೇಳಿದ್ದಾರೆ.
ಕರ್ನಾಟಕದ ಗೃಹಸಚಿವರಾಗಿ ಕಾನೂನಿನ ಆಳ್ವಿಕೆಯನ್ನು ಕಾಪಾಡುವುದು ಖರ್ಗೆ ಅವರ ಜವಾಬ್ದಾರಿ. ತನಿಖೆ ಪೂರ್ಣಗೊಳ್ಳುವ ಮುನ್ನವೇ ಪ್ರಕರಣದಲ್ಲಿ ಭಾಗಿಯಾದವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಹೇಳುವುದು ನ್ಯಾಯಾಂಗದ ತೀರ್ಪಿನ ಮೇಲೆ ಪೂರ್ವಗ್ರಹದ ಪರಿಣಾಮ ಬೀರುವ ಸಾಧ್ಯತೆಯಿದೆ ಆಕ್ಷೇಪಿಸಿದ್ದಾರೆ.
ಇತ್ತೀಚೆಗೆ ಕೇರಳದ ಕೊಚ್ಚಿಯಲ್ಲಿ ನಡೆದ ಮುಸ್ಲಿಂ ಯೂತ್ ಲೀಗ್ ರಾಜ್ಯ ಸಮೇಳನದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಿಯಾಂಕ್ ಖರ್ಗೆ, ಗೌರಿ ಲಂಕೇಶ್, ಎಂ.ಎಂ. ಕಲ್ಬುರ್ಗಿ ಹಾಗೂ ನರೇಂದ್ರ ದಾಭೋಲ್ಕರ್ ಅವರ ಹತ್ಯೆ ಪ್ರಕರಣಗಳ ತನಿಖೆ ನಡೆಯುತ್ತಿದ್ದು, ಪ್ರಕರಣಗಳಲ್ಲಿ ಭಾಗಿಯಾದವರು ಆರು ತಿಂಗಳೊಳಗೆ ಜೈಲು ಸೇರುತ್ತಾರೆ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಉಲ್ಲೇಖಿಸಿರುವ ಅವರು, ತನಿಖೆ ನಡೆಯುತ್ತಿರುವ ಪ್ರಕರಣದಲ್ಲಿ ಆರೋಪಿಗಳ ಕುರಿತು ಅಂತಿಮ ತೀರ್ಪಿನ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಅಲ್ಲದೆ, ಹತ್ಯೆ ಪ್ರಕರಣಗಳಲ್ಲಿ ಸಂಘದ ಪಾತ್ರವಿದೆ ಎಂಬ ಆರೋಪಕ್ಕೆ ಸಾಕ್ಷ್ಯ ನೀಡುವಂತೆ ತೇಜಸ್ವಿ ಸೂರ್ಯ ಒತ್ತಾಯಿಸಿದ್ದಾರೆ. ಸಾಕ್ಷ್ಯ ನೀಡಲು ಸಾಧ್ಯವಾಗದಿದ್ದರೆ ಮೂರು ದಿನಗಳೊಳಗೆ ರಾಜೀನಾಮೆ ನೀಡಬೇಕು ಎಂದು ಸವಾಲು ಹಾಕಿದ್ದಾರೆ.
ಗೌರಿ ಲಂಕೇಶ್, ಕಲ್ಬುರ್ಗಿ, ದಾಭೋಲ್ಕರ್ ಹಾಗೂ ಗೋವಿಂದ ಪನ್ಸಾರೆ ಅವರ ಹತ್ಯೆ ಪ್ರಕರಣಗಳು ಹಲವು ವರ್ಷಗಳಿಂದ ರಾಜಕೀಯವಾಗಿ ಸೂಕ್ಷ್ಮ ವಿಷಯವಾಗಿವೆ. ಈ ಪ್ರಕರಣಗಳ ತನಿಖೆ ಮತ್ತು ಆರೋಪಿಗಳ ಹಿನ್ನೆಲೆ ಕುರಿತು ವಿವಿಧ ಹಂತಗಳಲ್ಲಿ ಹಲವು ಆರೋಪ-ಪ್ರತ್ಯಾರೋಪಗಳು ಕೇಳಿಬಂದಿವೆ.
ಇದೀಗ ಪ್ರಿಯಾಂಕ್ ಖರ್ಗೆ ಅವರ ಇತ್ತೀಚಿನ ಹೇಳಿಕೆ ಮತ್ತು ಅದಕ್ಕೆ ತೇಜಸ್ವಿ ಸೂರ್ಯ ನೀಡಿರುವ ಪ್ರತಿಕ್ರಿಯೆಯಿಂದ ಈ ವಿಚಾರ ಮತ್ತೆ ರಾಜಕೀಯ ವಾಗ್ವಾದದ ಕೇಂದ್ರಕ್ಕೆ ಬಂದಿದೆ. ಒಂದು ಕಡೆ ಹತ್ಯೆ ಪ್ರಕರಣಗಳ ತನಿಖೆಯನ್ನು ಆಧರಿಸಿ ಸಂಘ ಪರಿವಾರದ ಸಂಪರ್ಕದ ಬಗ್ಗೆ ಖರ್ಗೆ ಪ್ರಶ್ನೆ ಎತ್ತಿದ್ದರೆ, ಮತ್ತೊಂದೆಡೆ ತನಿಖೆ ಪೂರ್ಣಗೊಳ್ಳುವ ಮುನ್ನವೇ ರಾಜಕೀಯ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದೆ.
ಹೀಗಾಗಿ ಪ್ರಕರಣಗಳ ತನಿಖೆ ಯಾವ ಹಂತದಲ್ಲಿದೆ, ತನಿಖೆಯಿಂದ ಇದುವರೆಗೆ ಯಾವ ಸಾಕ್ಷ್ಯಗಳು ಲಭ್ಯವಾಗಿವೆ? ಮತ್ತು ಆರೋಪಗಳಿಗೆ ಕಾನೂನುಬದ್ಧ ಆಧಾರವೇನು? ಎಂಬುದರ ಕುರಿತು ಮುಂದಿನ ದಿನಗಳಲ್ಲಿ ಸ್ಪಷ್ಟತೆ ದೊರೆಯುವ ನಿರೀಕ್ಷೆಯಿದೆ.
