Homeಬೆಂಗಳೂರುಬೆಂಗಳೂರು ರಸ್ತೆಗಳಲ್ಲಿ ಪಟಾಕಿ ಕಸದ ರಾಶಿ

ಬೆಂಗಳೂರು ರಸ್ತೆಗಳಲ್ಲಿ ಪಟಾಕಿ ಕಸದ ರಾಶಿ

ಬೆಂಗಳೂರು, ನ.11- ದೀಪಾವಳಿ ಹಬ್ಬದ ಸಂಭ್ರಮದ ನಂತರ ಸಿಲಿಕಾನ್‌ ಸಿಟಿಯ ರಸ್ತೆಗಳಲ್ಲಿ ಕಸದ ರಾಶಿ ಕಂಡುಬಂದಿದೆ. ಪಟಾಕಿ ಸಿಡಿಸಿದ ಬಳಿಕ ಉಳಿದ ಅವಶೇಷಗಳು, ಖಾಲಿ ಪಟಾಕಿ ಬಾಕ್ಸ್ ಗಳು ಸೇರಿದಂತೆ ವಿವಿಧ ತ್ಯಾಜ್ಯಗಳು ರಸ್ತೆಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ನಗರದ ಸ್ವಚ್ಛತೆಗೆ ಸವಾಲಾಗಿ ಪರಿಣಮಿಸಿವೆ.

ನಗರದಲ್ಲಿ ಪ್ರತಿನಿತ್ಯ ಸುಮಾರು 6 ಸಾವಿರ ರಿಂದ 6.5 ಸಾವಿರ ಟನ್‌ಗಳಷ್ಟು ಕಸ ಸಂಗ್ರಹವಾಗುತ್ತಿತ್ತು. ಆದರೆ, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಸುಮಾರು 8 ಸಾವಿರ ಟನ್‌ಗಳಷ್ಟು ಕಸ ಸಂಗ್ರಹವಾಗಿದೆ. ಹಬ್ಬದ ಬಳಿಕ ಹೆಚ್ಚಾದ ತ್ಯಾಜ್ಯವನ್ನು ತೆರವುಗೊಳಿಸಲು ನಗರಪಾಲಿಕೆಗಳ ಪೌರಕಾರ್ಮಿಕರು ಕಾರ್ಯಪ್ರವೃತ್ತರಾಗಿದ್ದಾರೆ.

ಇಂದು ಬೆಳಗ್ಗೆಯಿಂದಲೇ ನಗರದ ವಿವಿಧ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ಆರಂಭವಾಗಿದ್ದು, ಪ್ರಮುಖ ರಸ್ತೆಗಳಲ್ಲಿ ಬಿದ್ದಿದ್ದ ಪಟಾಕಿ ಅವಶೇಷಗಳು ಹಾಗೂ ಖಾಲಿ ಬಾಕ್‌್ಸಗಳನ್ನು ತೆರವುಗೊಳಿಸಲಾಗುತ್ತಿದೆ. ಅದರಲ್ಲೂ ಚಿಕ್ಕಪೇಟೆ, ಬಳೆಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಕಸ ಸಂಗ್ರಹವಾಗಿದೆ.

ಈ ಹಿನ್ನೆಲೆಯಲ್ಲಿ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.ಇನ್ನು ದೀಪಾವಳಿ ಹಬ್ಬದ ವ್ಯಾಪಾರದ ಪರಿಣಾಮ ನಗರದ ಪ್ರಮುಖ ಮಾರುಕಟ್ಟೆಗಳಲ್ಲೂ ತ್ಯಾಜ್ಯ ಹೆಚ್ಚಾಗಿದೆ. ಕೆ.ಆರ್‌. ಮಾರುಕಟ್ಟೆ, ಮಲ್ಲೇಶ್ವರಂ ಮಾರುಕಟ್ಟೆ, ಯಶವಂತಪುರ ಸೇರಿದಂತೆ ಹಲವು ಮಾರುಕಟ್ಟೆ ಪ್ರದೇಶಗಳಲ್ಲಿ ಹಬ್ಬದ ವ್ಯಾಪಾರಕ್ಕಾಗಿ ತರಲಾಗಿದ್ದ ಬಾಳೆಗೊನೆ, ಮಾವಿನ ಎಲೆ, ಕುಂಬಳಕಾಯಿ ಹಾಗೂ ಮಾರಾಟವಾಗದೆ ಉಳಿದ ಹೂವುಗಳು ರಸ್ತೆಗಳ ಬದಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.

ಮಾರುಕಟ್ಟೆಗಳಲ್ಲಿ ಸಂಗ್ರಹವಾಗಿರುವ ಈ ತ್ಯಾಜ್ಯವನ್ನೂ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಹಬ್ಬದ ಸಂದರ್ಭದಲ್ಲಿ ಹೆಚ್ಚಾಗಿರುವ ಕಸವನ್ನು ಆದಷ್ಟು ಬೇಗ ತೆರವುಗೊಳಿಸಿ, ನಗರದ ರಸ್ತೆಗಳನ್ನು ಸ್ವಚ್ಛವಾಗಿಡಲು ನಗರಪಾಲಿಕೆಗಳು ಕ್ರಮ ಕೈಗೊಂಡಿವೆ. ಒಟ್ಟಿನಲ್ಲಿ, ದೀಪಾವಳಿ ಹಬ್ಬದ ಸಂಭ್ರಮ ಮುಗಿದ ಬೆನ್ನಲ್ಲೇ ನಗರದಲ್ಲಿ ಸ್ವಚ್ಛತಾ ಕಾರ್ಯಕ್ಕೆ ವೇಗ ನೀಡಲಾಗಿದ್ದು, ಪಟಾಕಿ ತ್ಯಾಜ್ಯ ಹಾಗೂ ಮಾರುಕಟ್ಟೆ ಕಸವನ್ನು ತೆರವುಗೊಳಿಸುವ ಮೂಲಕ ರಸ್ತೆಗಳನ್ನು ಸ್ವಚ್ಛಗೊಳಿಸಲು ಪೌರಕಾರ್ಮಿಕರು ಶ್ರಮಿಸುತ್ತಿದ್ದಾರೆ.

RELATED ARTICLES

Latest News