ಬೆಂಗಳೂರು,ನ.11- ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅವರು ಮೂರು ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯ ಮುಂದಿನ ನಾಯಕತ್ವದ ಬಗ್ಗೆ ಕುತೂಹಲ ತೀವ್ರಗೊಂಡಿದೆ. 2023ರ ನವೆಂಬರ್ 10ರಂದು ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದ ವಿಜಯೇಂದ್ರ ಅವರ ಮೂರು ವರ್ಷದ ಅವಧಿ ಪೂರ್ಣಗೊಂಡಿದೆ.
ಸಾಮಾನ್ಯವಾಗಿ ಬಿಜೆಪಿಯ ಸಂಘಟನಾ ವ್ಯವಸ್ಥೆಯಲ್ಲಿ ರಾಜ್ಯಾಧ್ಯಕ್ಷರ ಅವಧಿ ಮೂರು ವರ್ಷಗಳದ್ದಾಗಿರುವ ಹಿನ್ನೆಲೆಯಲ್ಲಿ, ವಿಜಯೇಂದ್ರ ಅವರನ್ನೇ ಮುಂದುವರಿಸಲಾಗುತ್ತದೆಯೇ ಅಥವಾ ಹೊಸ ರಾಜ್ಯಾಧ್ಯಕ್ಷರನ್ನು ನೇಮಿಸಲಾಗುತ್ತದೆಯೇ ಎಂಬುದು ಈಗ ಹೈಕಮಾಂಡ್ನ ಪ್ರಮುಖ ನಿರ್ಧಾರವಾಗಿದೆ. ಆದರೆ ಮೂರು ವರ್ಷ ಪೂರ್ಣಗೊಂಡ ತಕ್ಷಣ ಅಧ್ಯಕ್ಷ ಸ್ಥಾನ ಸ್ವಯಂಚಾಲಿತವಾಗಿ ಖಾಲಿಯಾಗುತ್ತದೆ ಎಂಬ ಅರ್ಥವಿಲ್ಲ. ಪಕ್ಷದ ಸಂಘಟನಾ ಚುನಾವಣಾ ಪ್ರಕ್ರಿಯೆ ಮತ್ತು ಹೈಕಮಾಂಡ್ನ ನಿರ್ಧಾರವೇ ಅಂತಿಮ.
ಈ ಬಾರಿಯ ಬೆಳವಣಿಗೆಗೆ ವಿಶೇಷ ರಾಜಕೀಯ ಮಹತ್ವವಿದೆ. ಏಕೆಂದರೆ 2028ರ ವಿಧಾನಸಭಾ ಚುನಾವಣೆಗೆ ಒಂದೂವರೆ ವರ್ಷಕ್ಕೂ ಕಡಿಮೆ ಅವಧಿ ಮಾತ್ರ ಉಳಿದಿದೆ. ಅದರ ಮೊದಲು 2027ರಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳೂ ಎದುರಾಗಲಿವೆ. ಹೀಗಾಗಿ ಈಗ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಿದರೆ ಹೊಸ ನಾಯಕನಿಗೆ ಸಂಘಟನೆಯನ್ನು ಕಟ್ಟಿಕೊಳ್ಳಲು ಸಮಯ ಬೇಕಾಗುತ್ತದೆ. ಇದೇ ಕಾರಣದಿಂದ ಈ ಹಂತದಲ್ಲಿ ಬದಲಾವಣೆಗಿಂತ ವಿಜಯೇಂದ್ರ ಅವರನ್ನೇ ಮುಂದುವರಿಸುವುದು ಸೂಕ್ತ ಎಂಬ ವಾದ ಅವರ ಬೆಂಬಲಿಗರಲ್ಲಿದೆ.
ವಿಜಯೇಂದ್ರ ಅಧಿಕಾರ ವಹಿಸಿಕೊಂಡಾಗ ಬಿಜೆಪಿ ದೊಡ್ಡ ಸೋಲಿನ ನಂತರದ ಹಂತದಲ್ಲಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಪಕ್ಷದೊಳಗೆ ನಾಯಕತ್ವದ ಪ್ರಶ್ನೆ, ಯಡಿಯೂರಪ್ಪ ಅವರ ರಾಜಕೀಯ ಪ್ರಭಾವ, ಹಿರಿಯ ನಾಯಕರ ಅಸಮಾಧಾನ ಮತ್ತು ಸಂಘಟನೆಯೊಳಗಿನ ಗುಂಪುಗಾರಿಕೆಗಳು ಪ್ರಮುಖ ಸವಾಲುಗಳಾಗಿದ್ದವು.
ಈ ಹಿನ್ನೆಲೆಯಲ್ಲೇ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿತ್ತು. ಅವರ ನೇಮಕವೇ ಆಗ ಹಿರಿಯ ನಾಯಕರ ಒಂದು ವರ್ಗದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಯಡಿಯೂರಪ್ಪ ಕುಟುಂಬಕ್ಕೆ ಮತ್ತೆ ಮಣೆ ಹಾಕಲಾಗಿದೆ ಎಂಬ ಆಕ್ಷೇಪದೊಂದಿಗೆ ಬಸನಗೌಡ ಪಾಟೀಲ್ ಯತ್ನಾಳ್, ಕೆ.ಎಸ್.ಈಶ್ವರಪ್ಪ, ರಮೇಶ್ ಜಾರಕಿಹೊಳಿ, ಜಿ.ಎಂ. ಸಿದ್ದೇಶ್ವರ, ಪ್ರತಾಪ್ ಸಿಂಹ, ಮುರುಗೇಶ್ ನಿರಾಣಿ ಸೇರಿದಂತೆ ಹಲವು ನಾಯಕರು ವಿವಿಧ ಹಂತಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಮೂರು ವರ್ಷಗಳ ಅಂತ್ಯದ ವೇಳೆಗೆ ವಿಜಯೇಂದ್ರ ತಮ ಪರವಾಗಿ ಕೆಲವು ರಾಜಕೀಯ ಸಾಧನೆಗಳನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ.
