ಬೆಂಗಳೂರು,ನ.12- ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಿಂದ ಮಹಿಳೆಯರ ಸಂಚಾರ ಸ್ವಾತಂತ್ರ್ಯ ಹೆಚ್ಚಿದ್ದು, ಧಾರ್ಮಿಕ ಕ್ಷೇತ್ರಗಳ ಭೇಟಿಗೂ ಹೆಚ್ಚಿನ ಉತ್ತೇಜನ ದೊರೆತಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
2022ರಲ್ಲಿ ಸುಮಾರು 6 ಲಕ್ಷವಿದ್ದ ಹಾಸನಾಂಬೆ ದರ್ಶನ ಪಡೆದ ಭಕ್ತರ ಸಂಖ್ಯೆ 2026ರಲ್ಲಿ 30 ಲಕ್ಷ ದಾಟಿದ್ದು, ಐದು ಪಟ್ಟು ಹೆಚ್ಚಳವಾಗಿದೆ. 2023ರಲ್ಲಿ 14.40 ಲಕ್ಷ, 2024ರಲ್ಲಿ 17.47 ಲಕ್ಷ ಹಾಗೂ 2025ರಲ್ಲಿ 26.13 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದರು. ಕೇವಲ 11 ದಿನಗಳ ಜಾತ್ರೆಯಲ್ಲಿ 30 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿರುವುದು ವಿಶೇಷವಾಗಿದೆ ಎಂದಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿರುವ ಶಕ್ತಿ ಯೋಜನೆಯು ಗ್ರಾಮೀಣ ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಕುಟುಂಬಗಳಿಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲು ಅನುಕೂಲ ಮಾಡಿಕೊಟ್ಟಿದೆ. ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಗೆ ಈ ಯೋಜನೆಯ ಕೊಡುಗೆಯೂ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಸರ್ಕಾರದ ಶಕ್ತಿ ಯೋಜನೆ ಆರಂಭವಾದಾಗಿನಿಂದ 2026ರ ನವೆಂಬರ್ 10ರವರೆಗೆ ಒಟ್ಟು 875.89 ಕೋಟಿ ಮಹಿಳಾ ಪ್ರಯಾಣಿಕರು ಈ ಯೋಜನೆಯಡಿ ಉಚಿತ ಬಸ್ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ ಈವರೆಗೆ 23,202.22 ಕೋಟಿ ರೂ. ವೆಚ್ಚ ಭರಿಸಿದೆ. ಕೋಟ್ಯಂತರ ಮಹಿಳೆಯರಿಗೆ ಪ್ರಯಾಣದ ವೆಚ್ಚದ ಹೊರೆಯಿಂದ ಮುಕ್ತಿ ನೀಡಿರುವ ಈ ಯೋಜನೆಯು ಮಹಿಳೆಯರ ಸಂಚಾರ ಸ್ವಾತಂತ್ರ್ಯ ಹಾಗೂ ಆರ್ಥಿಕ ಸಬಲೀಕರಣಕ್ಕೆ ನೀಡಿರುವ ಕೊಡುಗೆಗೆ ಈ ಅಂಕಿಅಂಶಗಳೇ ಸಾಕ್ಷಿಯಾಗಿವೆ.
ನ10ರವರೆಗೆ 875.89 ಕೋಟಿ ಉಚಿತ ಪ್ರಯಾಣಗಳು ದಾಖಲಾಗಿದ್ದು, ಸರ್ಕಾರ 23,202.22 ಕೋಟಿ ರೂ. ವೆಚ್ಚ ಭರಿಸಿದೆ. ಚುನಾವಣಾ ಪೂರ್ವ ಭರವಸೆಯನ್ನು ಈಡೇರಿಸಿ ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡಿದ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಮಹಿಳೆಯರ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
