Homeರಾಜ್ಯಕೇಂದ್ರ ಅನುದಾನ ಕೊಡುತ್ತಿಲ್ಲ ಎಂದು ಆರೋಪಿಸುವ ಮೊದಲು ಬಂದ ಅನ್ನದಾನದ ಬಗ್ಗೆ ಮಾತನಾಡಿ : ಛಲವಾದಿ...

ಕೇಂದ್ರ ಅನುದಾನ ಕೊಡುತ್ತಿಲ್ಲ ಎಂದು ಆರೋಪಿಸುವ ಮೊದಲು ಬಂದ ಅನ್ನದಾನದ ಬಗ್ಗೆ ಮಾತನಾಡಿ : ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು,ನ.12- ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ಬರುತ್ತಿಲ್ಲ ಎಂದು ರಾಜ್ಯ ಸರ್ಕಾರ ಆರೋಪಿಸುತ್ತಿರುವುದನ್ನು ಪ್ರಶ್ನಿಸಿರುವ ಬಿಜೆಪಿ ವಿಧಾನ ಪರಿಷತ್‌ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಕೇಂದ್ರದಿಂದ ಬಂದಿರುವ ಅನುದಾನದ ಬಗ್ಗೆ ರಾಜ್ಯ ಸರ್ಕಾರ ಯಾಕೆ ಮಾತನಾಡುತ್ತಿಲ್ಲ ಎಂದು ತರಾಟೆಗೆತೆಗೆದುಕೊಂಡರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರದಿಂದ ಹಣ ಬರುತ್ತಿಲ್ಲ ಎಂದು ಆರೋಪಿಸುತ್ತೀರಿ. ಆದರೆ ಕೇಂದ್ರದಿಂದ ಬಂದಿರುವ ನಾಲ್ಕು ಸಾವಿರ ಕೋಟಿ ರೂಪಾಯಿ ಅನುದಾನದ ಬಗ್ಗೆ ಯಾಕೆ ಹೇಳುತ್ತಿಲ್ಲ? ರಾಜ್ಯದಲ್ಲಿ ಕಾಂಗ್ರೆಸ್‌‍ ಸರ್ಕಾರ ಇದೆ ಎಂಬ ಕಾರಣಕ್ಕೆ ರಾಜ್ಯಕ್ಕೆ ಹಣ ಕೊಡಬೇಡಿ ಎಂದು ನಾವು ಹೇಳಲು ಸಾಧ್ಯವೇ? ರಾಜ್ಯಕ್ಕೆ ಏನು ಕೊಡಬೇಕು? ಏನು ಬರಬೇಕು ಎಂಬುದು ಬರುತ್ತಲೇ ಇರುತ್ತದೆ. ಆದರೆ ಕೇಂದ್ರದಿಂದ ಬಂದಿರುವ ಹಣದ ಬಗ್ಗೆ ರಾಜ್ಯ ಸರ್ಕಾರ ಮಾತನಾಡಬೇಕು ಎಂದು ಅವರು ಹೇಳಿದರು.

ಭಗವಾನ್‌ ಬಿರ್ಸಾ ಮುಂಡಾ ಅವರ ಜನದಿನದ ಹಿನ್ನೆಲೆಯಲ್ಲಿ ಬಿಜೆಪಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು. ನ.15ರಂದು ಬಿರ್ಸಾ ಮುಂಡಾ ಅವರ ಜನದಿನ ಆಚರಿಸಲಾಗುತ್ತಿದ್ದು, ಅವರು ಮಹಾನ್‌ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂದು ಹೇಳಿದರು.

ಬುಡಕಟ್ಟು ಸಮುದಾಯಕ್ಕೆ ಸೇರಿದ ಬಿರ್ಸಾ ಮುಂಡಾ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಮುಖ ನಾಯಕರಲ್ಲಿ ಒಬ್ಬರು. ಆದರೆ ಕಾಂಗ್ರೆಸ್‌‍ ಪಕ್ಷ ಅವರಿಗೆ ಸೂಕ್ತ ಗೌರವ ನೀಡಿಲ್ಲ ಎಂದು ಅವರು ಆರೋಪಿಸಿದರು.ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್‌‍ನವರು ಮಾತ್ರ ಹೋರಾಡಿದರು ಎಂಬ ರೀತಿಯಲ್ಲಿ ಮಾತನಾಡಲಾಗುತ್ತದೆ. ಆದರೆ ಬಿರ್ಸಾ ಮುಂಡಾ ಅವರಂತಹ ಅನೇಕರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಕಾಂಗ್ರೆಸ್‌‍ಗೆ ಅವರ ಬಗ್ಗೆ ಕಾಳಜಿ ಇಲ್ಲವೇ? ಅವರ ಬಗ್ಗೆ ಮಾಹಿತಿ ಇಲ್ಲವೇ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌‍ ಪಕ್ಷದ ಇತಿಹಾಸವನ್ನು ಉಲ್ಲೇಖಿಸಿದ ಅವರು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಾಂಗ್ರೆಸ್‌‍ ಒಂದು ಸಂಘಟನೆಯಾಗಿ ವಿವಿಧ ಜಾತಿ, ಧರ್ಮದ ಜನರನ್ನು ಒಗ್ಗೂಡಿಸಿತ್ತು. ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್‌‍ ಅನ್ನು ವಿಸರ್ಜಿಸಿ, ಅಗತ್ಯವಿದ್ದವರು ಬೇರೆ ರಾಜಕೀಯ ಪಕ್ಷಗಳನ್ನು ರಚಿಸಬೇಕು ಎಂದು ಮಹಾತ ಗಾಂಧೀಜಿ ಹೇಳಿದ್ದರು ಎಂದು ಅವರು ಹೇಳಿದರು.

ಬುಡಕಟ್ಟು ಸಮುದಾಯಕ್ಕೆ ಬಿಜೆಪಿ ನೀಡಿರುವ ಪ್ರಾತಿನಿಧ್ಯದ ಕುರಿತು ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಇದೇ ಸಮುದಾಯದ ಮಹಿಳೆ ದ್ರೌಪದಿ ಮುರ್ಮು ಅವರನ್ನು ದೇಶದ ರಾಷ್ಟ್ರಪತಿಯಾಗಿ ಮಾಡಲಾಗಿದೆ ಎಂದು ಹೇಳಿದರು. ಎಸ್‌‍ಟಿ ಸಮುದಾಯದ ಮಹಿಳೆಯನ್ನು ದೇಶದ ಮೊದಲ ಪ್ರಜೆಯನ್ನಾಗಿ ಮಾಡಲಾಗಿದೆ. ಮಹಿಳೆ ಎಂದರೆ ಕಾಂಗ್ರೆಸ್‌‍ಗೆ ಸೋನಿಯಾ ಗಾಂಧಿ ಮಾತ್ರವೇ? ನಮ ಪಕ್ಷ ಎಲ್ಲಾ ಸಮುದಾಯಗಳನ್ನೂ ಗುರುತಿಸಿ ಗೌರವಿಸುತ್ತದೆ ಎಂದು ಅವರು ಹೇಳಿದರು.

ಕರ್ನಾಟಕದ ರಾಜ್ಯಪಾಲರು ಕೂಡ ಎಸ್‌‍ಟಿ ಸಮುದಾಯಕ್ಕೆ ಸೇರಿದ ಗೊಲ್ಲ ಸಮುದಾಯದವರು ಎಂದು ಉಲ್ಲೇಖಿಸಿದ ಅವರು, ಜನಜಾತಿ ಹಾಗೂ ಬುಡಕಟ್ಟು ಸಮುದಾಯದ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಿ ಗೌರವಿಸುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದರು.

ಎಸ್‌‍ಸಿಪಿ ಮತ್ತು ಟಿಎಸ್‌‍ಪಿ ಹಣದ ಬಗ್ಗೆ
ರಾಜ್ಯ ಸರ್ಕಾರದ ಎಸ್‌‍ಸಿಪಿ ಮತ್ತು ಟಿಎಸ್‌‍ಪಿ ಯೋಜನೆಗೆ ಸಂಬಂಧಿಸಿದ ಸಭೆ ಕುರಿತು ಪ್ರತಿಕ್ರಿಯಿಸಿದ ಛಲವಾದಿ ನಾರಾಯಣಸ್ವಾಮಿ, ಈ ಸಭೆ ಬಹಳ ಹಿಂದೆಯೇ ನಡೆಯಬೇಕಿತ್ತು. ಸರ್ಕಾರಕ್ಕೆ ಮೂರುವರೆ ವರ್ಷಗಳಾಗಿವೆ. ಇದುವರೆಗೂ ಕಾಂಗ್ರೆಸ್‌‍ ಪಕ್ಷದ ಶಾಸಕರು ಈ ವಿಚಾರವನ್ನು ಪ್ರಸ್ತಾಪಿಸಿಲ್ಲ. ನಮ ಪಕ್ಷದ ಶಾಸಕರು ಮಾತ್ರ ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ 42 ಸಾವಿರ ಕೋಟಿ ನೀಡಿದ್ದೇವೆ ಎಂದು ಹೇಳುತ್ತಿದೆ. ಆದರೆ ಆ ಹಣದಲ್ಲಿ ಎಷ್ಟು ಮೊತ್ತ ನಿಜವಾಗಿ ಫಲಾನುಭವಿಗಳಿಗೆ ತಲುಪಿದೆ ಎಂಬುದನ್ನು ಯಾರೂ ಪ್ರಶ್ನಿಸುತ್ತಿಲ್ಲ ಎಂದು ಅವರು ಹೇಳಿದರು.
21 ಸಾವಿರ ಕೋಟಿಯಲ್ಲಿ 14 ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿದರೆ, 7 ಸಾವಿರ ಕೋಟಿ ಮಾತ್ರ ಉಳಿಯುತ್ತದೆ. ಅದರಲ್ಲಿ ಸುಮಾರು 3 ಸಾವಿರ ಕೋಟಿ ಮಾತ್ರ ಸಿಕ್ಕಿರಬಹುದು. ಉಳಿದ ಹಣ ಏನಾಯಿತು ಎಂಬುದು ಗೊತ್ತಿಲ್ಲ ಎಂದು ಅವರು ಆರೋಪಿಸಿದರು.

ಪರಿಶಿಷ್ಟ ಜಾತಿ ಸಮುದಾಯದ ಶಾಸಕರು ಈ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ದಲಿತ ಸಮುದಾಯಕ್ಕೆ ನ್ಯಾಯ ಸಿಗಲಿದೆ ಎಂಬ ಭರವಸೆ ನನಗಿಲ್ಲ ಎಂದರು. ಈಗ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸಾಧ್ಯವೇ ಇಲ್ಲ. ದಲಿತ ಸಮುದಾಯದ ಶ್ರೇಯೋಭಿವೃದ್ಧಿಗೆ ನಿಜವಾದ ಪ್ರಯತ್ನ ನಮ ಸರ್ಕಾರ ಬಂದ ಬಳಿಕ ನಡೆಯಲಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಕರ್ನಾಟಕ ಭೇಟಿ ಕುರಿತು ಮಾತನಾಡಿದ ಅವರು, ಪ್ರಧಾನಿಯವರ ಕಾರ್ಯಕ್ರಮ ಸಂಪೂರ್ಣ ಸರ್ಕಾರಿ ಕಾರ್ಯಕ್ರಮವಾಗಿದೆ ಎಂದು ಸ್ಪಷ್ಟಪಡಿಸಿದರು.ಪ್ರಧಾನಿ ಮೋದಿ ಅವರನ್ನು ನಾವು ಭೇಟಿ ಮಾಡುತ್ತೇವೆ. ಅವರು ಮೆಟ್ರೋ ಕಾರ್ಯಕ್ರಮ ಮುಗಿಸಿ ಮೈಸೂರಿಗೆ ತೆರಳಲಿದ್ದಾರೆ. ಪಕ್ಷದ ವತಿಯಿಂದ ಯಾವುದೇ ಕಾರ್ಯಕ್ರಮ ಇಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

RELATED ARTICLES

Latest News