ಬೆಂಗಳೂರು, ನ.12-ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಗೆ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು 2.50 ಲಕ್ಷ ರೂ. ಮೌಲ್ಯದ ಆ್ಯಕ್ಸಿಜನ್ ಕಾನ್ಸೆಂಟ್ರೇಟರ್ ಅನ್ನು ಕೊಡಿಸಿದ್ದಾರೆ.
ಹಾರೋಹಳ್ಳಿ ತಾಲೂಕಿನ ಮರಳವಾಡಿ ಹೋಬಳಿಯ ಸುಂಡಘಟ್ಟ ಗ್ರಾಮದ ರಾಜಲಕ್ಷಿ ಚಂದ್ರು ಅವರ ಪುತ್ರಿಯಾದ 14 ವರ್ಷದ ನವ್ಯಶ್ರೀ ಅವರನ್ನು ಇಂದು ಬೆಳಗ್ಗೆ ಬೆಂಗಳೂರಿನ ಜೆಪಿ ನಗರದ ತಮ ನಿವಾಸಕ್ಕೆ ಕರೆಸಿಕೊಂಡ ಅವರು, ಆ ಬಾಲಕಿಗೆ ಆ್ಯಕ್ಸಿಜನ್ ಕಾನ್ಸೆಂಟ್ರೇಟರ್ ಅನ್ನು ಹಸ್ತಾಂತರಿಸಿದರು.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಾಲಕಿಗೆ ಅತ್ಯುತ್ತಮ ಗುಣಮಟ್ಟದ ಆ್ಯಕ್ಸಿಜನ್ ಕಾನ್ಸಂಟ್ರೇಟರ್ ಅನ್ನು ಬಳಸಬೇಕು ಎಂದು ವೈದ್ಯರು ಸಲಹೆ ಮಾಡಿದರು. ದುಬಾರಿಯಾದ ಈ ಉಪಕರಣವನ್ನು ಖರೀದಿಸಲು ಸಾಧ್ಯವಾಗದೆ ಬಾಲಕಿಯ ಪೋಷಕರು ಕುಮಾರಸ್ವಾಮಿಯವರ ನೆರವನ್ನು ಕೇಳಿದ್ದರು. ಕಳೆದ ಆಗಸ್ಟ್ 30ರಂದು ಸಚಿವರನ್ನು ಭೇಟಿಯಾಗಿದ್ದ ಬಾಲಕಿಯ ಪೋಷಕರು ಈ ಬಗ್ಗೆ ತಮ ಅಳಲನ್ನು ತೋಡಿಕೊಂಡಿದ್ದರು.
ತಮ ಮಗಳು ಈಗ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿಭಾವಂತೆಯಾದ ಆಕೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಬಡವರಾದ ನಮಗೆ ಅಷ್ಟು ಹಣವನ್ನು ಖರ್ಚು ಮಾಡಿ ಆ್ಯಕ್ಸಿಜನ್ ಕಾನ್ಸೆಂಟ್ರೇಟರ್ ಕೊಡಿಸಲು ಅಸಾಧ್ಯ. ತಾವು ನಮಗೆ ನೆರವಾಗಿ ಮಗುವಿನ ಜೀವ ರಕ್ಷಣೆ ಮಾಡಬೇಕು ಎಂದು ಕೋರಿದ್ದರು. ಬಾಲಕಿಯ ಪೋಷಕರ ಮನವಿಗೆ ಓಗೊಟ್ಟ ಕುಮಾರಸ್ವಾಮಿ ತಕ್ಷಣವೇ ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯರಿಂದ ಮಾಹಿತಿಯನ್ನು ಪಡೆದುಕೊಂದು ತಮ ಸ್ವಂತ ಖರ್ಚಿನಲ್ಲಿ ಬಾಲಕಿಗೆ ಅತ್ಯಗತ್ಯವಾಗಿ ಬೇಕಾಗಿದ್ದ ಇಗೋಜೆನ್ ರೋವ್ 6 ಪೋರ್ಟಬಲ್ ಆ್ಯಕ್ಸಿಜನ್ ಕಾನ್ಸೆಂಟ್ರೇಟರ್ ಅನ್ನು ಖರೀದಿಸಿ ಆಕೆಯ ಪೋಷಕರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬಾಲಕಿಯ ಜೊತೆ ಕೆಲಕಾಲ ಮಾತನಾಡಿದ ಸಚಿವರು, ವೈದ್ಯರು ನೀಡುವ ಚಿಕಿತ್ಸೆಯನ್ನು ಚಾಚೂ ತಪ್ಪದಂತೆ ಪಡೆದುಕೊಳ್ಳಬೇಕು ಎಂದು ಸೂಚಿಸಿದರು. ಹಾಗೆಯೆ ಮಗುವಿನ ಆರೋಗ್ಯದ ಬಗ್ಗೆ ನಿರ್ಲಕ್ಷ ಮಾಡದೆ ಕಾಲಕಾಲಕ್ಕೆ ಸರಿಯಾದ ಚಿಕಿತ್ಸೆ ಕೊಡಿಸಿ, ಆ ಬಗ್ಗೆ ನನಗೆ ಮಾಹಿತಿ ನೀಡುತ್ತೀರಿ ಎಂದು ಪೋಷಕರಿಗೆ ತಿಳಿಸಿದರು.
ತನ್ನ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರಿಗೆ ಕೃತಜ್ಞತೆಯನ್ನು ಸಲ್ಲಿಸಿದ ಬಾಲಕಿ ನವ್ಯಶ್ರೀ, ನಿಮ ಆಶೀರ್ವಾದದಿಂದ ನನ್ನ ಆರೋಗ್ಯ ಚೆನ್ನಾಗಿ ಆಗುತ್ತದೆ ಎಂದು ಬಾವುಕಳಾಗಿ ಹೇಳಿದರು. ಸಂದರ್ಭದಲ್ಲಿ ಸಚಿವರು ಕೂಡ ಭಾವೋದ್ವೇಗಕ್ಕೆ ಒಳಗಾದರು.
