Homeರಾಜ್ಯಕನ್ನಡಿಗರ ಬದುಕಿನ ರಕ್ಷಣೆ ಇಲ್ಲದೆ ವಿಶ್ವ ಕನ್ನಡ ಸಮ್ಮೇಳನ ಅರ್ಥಹೀನ : ಟಿ.ಎ. ನಾರಾಯಣಗೌಡ

ಕನ್ನಡಿಗರ ಬದುಕಿನ ರಕ್ಷಣೆ ಇಲ್ಲದೆ ವಿಶ್ವ ಕನ್ನಡ ಸಮ್ಮೇಳನ ಅರ್ಥಹೀನ : ಟಿ.ಎ. ನಾರಾಯಣಗೌಡ

ಬೆಂಗಳೂರು, ನ.12- ಕನ್ನಡಿಗರ ಉದ್ಯೋಗ, ಶಿಕ್ಷಣ ಮತ್ತು ಭಾಷೆಯ ರಕ್ಷಣೆಗೆ ಅಗತ್ಯವಾದ ಕಾಯ್ದೆಗಳನ್ನು ಜಾರಿಗೆ ತರದೆ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವುದು ಅರ್ಥಹೀನ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದಿನ ವರ್ಷ ವಿಶ್ವ ಕನ್ನಡ ಸಮ್ಮೇಳನ ನಡೆಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿರುವುದನ್ನು ಪ್ರಶ್ನಿಸಿರುವ ಅವರು, ಕನ್ನಡಿಗರ ಬದುಕು ಸಂಕಷ್ಟದಲ್ಲಿರುವಾಗ ಸಮ್ಮೇಳನದ ಹೆಸರಿನಲ್ಲಿ ಸಂಭ್ರಮಾಚರಣೆ ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯೋಗಗಳಲ್ಲಿ ಶೇ.80ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡುವ ಭರವಸೆ ನೀಡಿತ್ತು. ಆದರೆ, ಅಧಿಕಾರಕ್ಕೆ ಬಂದ ಬಳಿಕ ಅದನ್ನು ಈಡೇರಿಸಿಲ್ಲ. ಕಾರ್ಪೊರೇಟ್ ಸಂಸ್ಥೆಗಳ ಒತ್ತಡಕ್ಕೆ ಮಣಿಯದೆ ಕನ್ನಡಿಗರ ಉದ್ಯೋಗ ರಕ್ಷಣೆಗೆ ಸರ್ಕಾರ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ತ್ರಿಭಾಷಾ ನೀತಿಯ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಕನ್ನಡಿಗರ ಮಕ್ಕಳ ಮೇಲೆ ಮೂರನೇ ಭಾಷೆಯ ಹೊರೆ ಹೇರುವ ಬದಲು ತಾಂತ್ರಿಕ ಕೌಶಲ್ಯ ಮತ್ತು ಭವಿಷ್ಯಕ್ಕೆ ಪೂರಕವಾದ ಶಿಕ್ಷಣ ನೀಡಬೇಕು ಎಂದಿದ್ದಾರೆ.

ರಾಜ್ಯದ ಎಂಜಿನಿಯರಿಂಗ್ ಪದವೀಧರರಲ್ಲಿ ಕೇವಲ ಶೇ.17ರಷ್ಟು ಮಂದಿಗೆ ಮಾತ್ರ ಉದ್ಯೋಗ ದೊರೆತಿರುವುದನ್ನು ಉಲ್ಲೇಖಿಸಿ, ಉಳಿದವರ ಭವಿಷ್ಯದ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಐಟಿ-ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಎಷ್ಟು ಉದ್ಯೋಗ ದೊರೆತಿದೆ ಎಂಬ ಕುರಿತು ಸಮೀಕ್ಷೆ ನಡೆಸಲೂ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದ್ದಾರೆ.

ಇದಲ್ಲದೆ, ಕೆಪಿಎಸ್‌ಸಿ ಪರೀಕ್ಷೆಗಳಲ್ಲಿನ ವಿಳಂಬ, ಕನ್ನಡ ಶಾಲೆಗಳ ಮುಚ್ಚುವಿಕೆ ಹಾಗೂ ಸರ್ಕಾರಿ ಶಿಕ್ಷಣ ವ್ಯವಸ್ಥೆಯ ದುಸ್ಥಿತಿಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. ವಿಶ್ವ ಕನ್ನಡ ಸಮ್ಮೇಳನವನ್ನು ರಾಜಕೀಯ ಪ್ರಚಾರದ ವೇದಿಕೆಯನ್ನಾಗಿ ಮಾಡದೆ, ಕನ್ನಡಿಗರ ಉದ್ಯೋಗ, ಭಾಷೆ ಮತ್ತು ಬದುಕಿನ ರಕ್ಷಣೆಗೆ ಆದ್ಯತೆ ನೀಡಬೇಕು. ಇಲ್ಲದಿದ್ದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಜನರ ಮುಂದೆ ಯಾವ ನೈತಿಕತೆಯಿಂದ ಮತ ಕೇಳುತ್ತೀರಿ ಎಂದು ನಾರಾಯಣಗೌಡ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

RELATED ARTICLES

Latest News