Homeರಾಜ್ಯಕುಡಿದು ಕಿರಿಕ್ ಮಾಡುತ್ತಿದ್ದ ಪತಿಯನ್ನು ಇರಿದು ಕೊಂದ ಪತ್ನಿ

ಕುಡಿದು ಕಿರಿಕ್ ಮಾಡುತ್ತಿದ್ದ ಪತಿಯನ್ನು ಇರಿದು ಕೊಂದ ಪತ್ನಿ

ಬೆಂಗಳೂರು,ನ.12- ಪ್ರತಿನಿತ್ಯ ಕುಡಿದು ಬಂದು ಜಗಳವಾಡುತ್ತಿದ್ದ ಪತಿಯ ವರ್ತನೆಯಿಂದ ರೋಸಿ ಹೋಗಿದ್ದ ಪತ್ನಿ ಆತನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕೆಂಪೇಗೌಡ ನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ಜೀವನ ಸಂಗಾತಿ ಮಾಲಾಶ್ರೀ (39) ಯಿಂದಲೇ ಪತಿ ರಾಜಶೇಖರ್‌ (43) ಕೊಲೆಯಾದ ದುರ್ದೈವಿ. ಕೆಂಪೇಗೌಡ ನಗರದ ಲಕ್ಷ್ಮೀಪುರದ 1ನೇ ಕ್ರಾಸ್‌‍ನಲ್ಲಿ ವಾಸವಾಗಿದ್ದ ದಂಪತಿ ಅನ್ಯೋನ್ಯವಾಗಿಯೇ ಇದ್ದರು. ದಂಪತಿಗೆ ಮಕ್ಕಳಿಲ್ಲ. ರಾಜಶೇಖರ್‌ ಬ್ಯಾಂಕ್‌ವೊಂದರಲ್ಲಿ ಲೋನ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.

ಬೆಳಗ್ಗೆ ಹೊತ್ತು ಮಾತ್ರ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ರಾಜಶೇಖರ್‌ ರಾತ್ರಿಯಾದರೆ ಸಾಕು ಕುಡಿದು ಬಂದು ಪತ್ನಿಯೊಂದಿಗೆ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಜಗಳವಾಡುತ್ತಿದ್ದನು. ನಿನ್ನೆ ರಾತ್ರಿ ಸಹ ರಾಜಶೇಖರ ಮದ್ಯ ಸೇವಿಸಿ 10 ಗಂಟೆ ಸುಮಾರಿನಲ್ಲಿ ಮನೆಗೆ ಬಂದಿದ್ದು, ಅಡುಗೆ ಮಾಡದಿರುವುದನ್ನು ಕಂಡು ಪತ್ನಿಯೊಂದಿಗೆ ಏಕೆ ಅಡುಗೆ ಮಾಡಿಲ್ಲವೆಂದು ಗಲಾಟೆ ಮಾಡಿದಾಗ, ಪ್ರತಿನಿತ್ಯ ಈತನ ಕಿರುಕುಳದಿಂದ ಬೇಸತ್ತಿದ್ದ ಮಾಲಾಶ್ರೀ ತಾಳೆ ಕಳೆದುಕೊಂಡಿದ್ದಾಳೆ.

ದಂಪತಿ ಮಧ್ಯೆ ಜಗಳ ವಿಕೋಪಕ್ಕೆ ಹೋದಾಗ ಮಾಲಾಶ್ರೀ ಅಡುಗೆ ಮನೆಗೆ ಹೋಗಿ ಚಾಕು ತಂದು ಪತಿಯ ಎದೆಗೆ ಇರಿದಿದ್ದು, ತೀವ್ರ ರಕ್ತಸ್ರಾವದಿಂದ ರಾಜಶೇಖರ್‌ ಕುಸಿದು ಬಿದ್ದಿದ್ದಾನೆ. ತಕ್ಷಣ ಆಂಬ್ಯುಲೆನ್ಸ್ ಕರೆಸಿಕೊಂಡು ರಾಜಶೇಖರ್‌ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮಾರ್ಗಮಧ್ಯೆ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.

ಸುದ್ದಿ ತಿಳಿದು ಕೆಂಪೇಗೌಡ ನಗರ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
ಈ ಬಗ್ಗೆ ಮೃತನ ಅಣ್ಣ ನಂಜಪ್ಪ ಅವರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News