ಬೆಂಗಳೂರು, ನ.12- ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಕಂದಾಯ ಇಲಾಖೆಯಲ್ಲಿ ನಕಲಿ ದಾಖಲೆಗಳನ್ನು ಬಳಸಿ ಅಕ್ರಮವಾಗಿ ಇ-ಖಾತಾ ಮಾಡಿಕೊಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್ಗಳಿಂದ ಹರಾಜಾಗುವ ಅಡಮಾನ ಆಸ್ತಿಗಳಿಗೆ ಇ-ಖಾತಾ ಸೃಷ್ಟಿಸಲು ರೂಪಿಸಿರುವ ಮಾಡ್ಯೂಲ್ ಅನ್ನು ದುರ್ಬಳಕೆ ಮಾಡಿಕೊಂಡು, ಹೊಸದಾಗಿ ನಿರ್ಮಿಸಲಾದ ಫ್ಲ್ಯಾಟ್ಗಳಿಗೆ ಅಕ್ರಮವಾಗಿ ಇ-ಖಾತಾ ಮಂಜೂರು ಮಾಡಿರುವ ಆರೋಪ ಕೇಳಿಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಇನ್ಚಾರ್ಜ್ ಕಂದಾಯ ಅಧಿಕಾರಿಗಳಾದ ಬಸವರಾಜ್ ಮಗ್ಗಿ ಮತ್ತು ಲೋಕಮಾತಾ ಡಿ.ಎಸ್. ಸೇರಿದಂತೆ ಖಾಸಗಿ ಬಿಲ್ಡರ್ಗಳು ಹಾಗೂ ಅರ್ಜಿದಾರರ ವಿರುದ್ಧ ಎರಡು ಎಫ್ಐಆರ್ಗಳು ದಾಖಲಾಗಿವೆ.
ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ನೀಡಿದ ದೂರಿನ ಆಧಾರದ ಮೇಲೆ ಹಲಸೂರು ಗೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದ್ದು, ಪ್ರಕರಣದಲ್ಲಿ 35 ಖಾತೆದಾರರ ಪಾತ್ರದ ಬಗ್ಗೆಯೂ ತನಿಖೆ ನಡೆಯುವ ಸಾಧ್ಯತೆಯಿದೆ. ಖಾತಾ ಅಕ್ರಮಕ್ಕೆ ಸಂಬಂಧಿಸಿದಂತೆ ಖಾತೆದಾರರ ವಿರುದ್ಧವೂ ಎಫ್ಐಆರ್ ದಾಖಲಾಗಿರುವುದು ಗಮನಾರ್ಹವಾಗಿದೆ.
ಮಾಡ್ಯೂಲ್ ದುರ್ಬಳಕೆ: ಬ್ಯಾಂಕ್ಗಳು ಅಥವಾ ಹಣಕಾಸು ಸಂಸ್ಥೆಗಳು ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿರುವ ಅಡಮಾನ ಆಸ್ತಿಗಳನ್ನು ಹರಾಜು ಮಾಡುವ ಪ್ರಕ್ರಿಯೆಯಲ್ಲಿ ಇ-ಖಾತಾ ಸೃಷ್ಟಿಸಲು ಇ-ಆಸ್ತಿ ತಂತ್ರಾಂಶದಲ್ಲಿ ಮಾಡ್ಯೂಲ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಈ ಸೌಲಭ್ಯವನ್ನು ನಿಯಮಬಾಹಿರವಾಗಿ ಬಳಸಿಕೊಂಡು ಅರ್ಹತೆ ಇಲ್ಲದ ಹೊಸ ಫ್ಲ್ಯಾಟ್ಗಳಿಗೆ ಇ-ಖಾತಾ ಮಂಜೂರು ಮಾಡಲಾಗಿದೆ ಎಂಬುದು ದೂರಿನ ಪ್ರಮುಖ ಆರೋಪವಾಗಿದೆ.
ಪ್ರಕ್ರಿಯೆಗೆ ಸಂಬಂಧಿಸಿದ ಅಧಿಕೃತ ಮಾರಾಟ ಪ್ರಮಾಣಪತ್ರ ಅಥವಾ ಅಗತ್ಯ ದಾಖಲೆಗಳ ಬದಲಿಗೆ ಜಂಟಿ ಅಭಿವೃದ್ಧಿ ಒಪ್ಪಂದಗಳು, ಮೂಲ ನಿವೇಶನದ ಕ್ರಯಪತ್ರಗಳು, ಕಟ್ಟಡ ಪರವಾನಗಿ ಹಾಗೂ ಇತರ ದಾಖಲೆಗಳನ್ನು ಅಪ್ಲೋಡ್ ಮಾಡಲಾಗಿದೆ. ಈ ದಾಖಲೆಗಳು ಮಾಡ್ಯೂಲ್ನ ಕಡ್ಡಾಯ ಮಾನದಂಡಗಳನ್ನು ಪೂರೈಸದಿದ್ದರೂ ಅಧಿಕಾರಿಗಳು ಇ-ಖಾತಾಗಳಿಗೆ ಅನುಮೋದನೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
110 ಇ-ಖಾತಾಗಳಿಗೆ ಅಕ್ರಮ ಅನುಮೋದನೆ?ತಾಂತ್ರಿಕ ಪರಿಶೀಲನೆ ವೇಳೆ ಸೂಕ್ತ ದಾಖಲೆಗಳಿಲ್ಲದ ಅನರ್ಹ ಆಸ್ತಿಗಳಿಗೆ ಮಾಡ್ಯೂಲ್ ಮೂಲಕ ಒಟ್ಟು 110 ಹೊಸ ಇ-ಖಾತಾಗಳನ್ನು ಅಕ್ರಮವಾಗಿ ಅನುಮೋದಿಸಿರುವುದು ಪತ್ತೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 2025ರ ಡಿಸೆಂಬರ್ 29ರಿಂದ 2026ರ ಜೂನ್ 15ರವರೆಗಿನ ಅವಧಿಯಲ್ಲಿ ಈ ಅಕ್ರಮಗಳು ನಡೆದಿರುವ ಆರೋಪವಿದೆ.
ಲೋಕಮಾತಾ ಡಿ.ಎಸ್. ಅವರ ಲಾಗಿನ್ ಐಡಿ ಮೂಲಕ ಹಲವು ಆಸ್ತಿಗಳಿಗೆ ಇ-ಖಾತಾ ಮಂಜೂರು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಳೆಯ ವಾರ್ಡ್ ಸಂಖ್ಯೆ 130 ಮತ್ತು 198ಕ್ಕೆ ಸೇರಿದ ಕೆಲವು ಆಸ್ತಿಗಳ ಅರ್ಜಿದಾರರು ಅಧಿಕಾರಿಯೊಂದಿಗೆ ಶಾಮೀಲಾಗಿ ನಿಯಮಬಾಹಿರವಾಗಿ ಇ-ಖಾತಾ ಪಡೆದುಕೊಂಡಿದ್ದಾರೆ ಎಂಬ ಆರೋಪವೂ ಇದೆ.
ಕಾಯ್ದೆ ಉಲ್ಲಂಘನೆ ಆರೋಪ:ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, 2024ರ ಸೆಕ್ಷನ್ 147 ಹಾಗೂ ಸಂಬಂಧಿತ ಸರ್ಕಾರಿ ಆದೇಶಗಳು ಮತ್ತು ಸುತ್ತೋಲೆಗಳ ಪ್ರಕಾರ, ನಿಗದಿತ ದಿನಾಂಕದ ನಂತರ ನಿರ್ಮಿಸಲಾದ ಅನಧಿಕೃತ ಕಟ್ಟಡಗಳು ಅಥವಾ ಫ್ಲ್ಯಾಟ್ಗಳಿಗೆ ಖಾತಾ ನೀಡುವ ವಿಚಾರದಲ್ಲಿ ನಿರ್ಬಂಧಗಳಿವೆ ಎಂದು ದೂರಿನಲ್ಲಿ ವಿವರಿಸಲಾಗಿದೆ.ನಿಯಮಗಳನ್ನು ಉಲ್ಲಂಘಿಸಿ, ಸಂಬಂಧವಿಲ್ಲದ ದಾಖಲೆಗಳನ್ನು ತಂತ್ರಾಂಶಕ್ಕೆ ಅಪ್ಲೋಡ್ ಮಾಡಿ ಇ-ಖಾತಾ ಮಂಜೂರು ಮಾಡಿರುವುದು ಕರ್ತವ್ಯಲೋಪ ಮಾತ್ರವಲ್ಲದೆ, ಅಧಿಕಾರ ದುರುಪಯೋಗ, ವಂಚನೆ ಮತ್ತು ಅಪರಾಧಿಕ ನಂಬಿಕೆದ್ರೋಹದ ಸ್ವರೂಪದ್ದಾಗಿದೆ ಎಂದು ಮುನೀಶ್ ಮೌದ್ಗಿಲ್ ಆರೋಪಿಸಿದ್ದಾರೆ.
