ಬೆಂಗಳೂರು, ನ.12- ಪಿಂಕ್ ಮೆಟ್ರೋ ಮಾರ್ಗದ ಎಲಿವೇಟೆಡ್ ವಿಭಾಗದಲ್ಲಿರುವ ಮೂರು ಮೆಟ್ರೋ ನಿಲ್ದಾಣಗಳ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಸ್ಥಳೀಯ ನಿವಾಸಿಗಳ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ, ನಿಲ್ದಾಣಗಳ ಹೆಸರು ಬದಲಾವಣೆಗೆ ಒಪ್ಪಿಗೆ ಸೂಚಿಸಿದೆ.
ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು ನವೆಂಬರ್ 10ರಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ಸಂಬಂಧಿಸಿದಂತೆ, ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಉಪ ಕಾರ್ಯದರ್ಶಿ ಸೂರ್ಯ ನಾರಾಯಣ ಝಾ ಅವರು ನವೆಂಬರ್ 11ರಂದು ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ನಿಲ್ದಾಣಗಳ ಹೆಸರು ಬದಲಾವಣೆಯ ಪ್ರಸ್ತಾವನೆಯನ್ನು ಸಚಿವಾಲಯದ ಸಮರ್ಥ ಪ್ರಾಧಿಕಾರ ಅನುಮೋದಿಸಿದೆ. ಸೂಕ್ತ ಸಮಯದಲ್ಲಿ ಅಧಿಕೃತ ಅಧಿಸೂಚನೆ ಹೊರಡಿಸಲಾಗುವುದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಅನುಮೋದನೆ ದೊರೆತಿರುವ ಮೂರು ನಿಲ್ದಾಣಗಳ ಪರಿಷ್ಕೃತ ಹೆಸರುಗಳ ಪೈಕಿ, ಐಐಎಂಬಿ ಮೆಟ್ರೋ ನಿಲ್ದಾಣ: ಬಿಳೇಕಹಳ್ಳಿ ಐಐಎಂಬಿ ಎಂದು ಮರುನಾಮಕರಣ ಮಾಡಲಾಗುತ್ತದೆ. ಈ ಭಾಗದ ಕಂದಾಯ ಗ್ರಾಮವಾದ ಬಿಳೇಕಹಳ್ಳಿಯ ಹೆಸರನ್ನು ನಿಲ್ದಾಣದ ಹೆಸರಿನೊಂದಿಗೆ ಸೇರಿಸಲು ನಿರ್ಧರಿಸಲಾಗಿದೆ.
ಜೆ.ಪಿ. ನಗರ 4ನೇ ಹಂತದ ಮೆಟ್ರೋ ನಿಲ್ದಾಣ: ಎನ್.ಎಸ್. ಪಾಳ್ಯ ಜೆ.ಪಿ. ನಗರ 4ನೇ ಹಂತ ಎಂದು ಹೆಸರು ಬದಲಾಯಿಸಲಾಗುತ್ತದೆ. ಈ ಪ್ರದೇಶದ ಕಂದಾಯ ಗ್ರಾಮದ ಹೆಸರಾದ ಎನ್.ಎಸ್. ಪಾಳ್ಯವನ್ನು ಈಗಿರುವ ಹೆಸರಿನೊಂದಿಗೆ ಸೇರಿಸಲಾಗಿದೆ.
ತಾವರೆಕೆರೆ ಮೆಟ್ರೋ ನಿಲ್ದಾಣ: ಎಸ್.ಜಿ. ಪಾಳ್ಯ (ಸುಡ್ಡಗುಂಟೆ ಪಾಳ್ಯ) ಎಂದು ಮರುನಾಮಕರಣ ಮಾಡಲಾಗುತ್ತದೆ. ತಾವರೆಕೆರೆ ಕಂದಾಯ ಗ್ರಾಮವು ನಿಲ್ದಾಣದಿಂದ ಸ್ವಲ್ಪ ದೂರದಲ್ಲಿರುವುದರಿಂದ, ಸ್ಥಳೀಯವಾಗಿ ಹೆಚ್ಚು ಜನಪ್ರಿಯವಾಗಿರುವ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಹೆಸರಾದ ಎಸ್.ಜಿ. ಪಾಳ್ಯವನ್ನು ನಿಲ್ದಾಣಕ್ಕೆ ಇಡಲು ಶಿಫಾರಸು ಮಾಡಲಾಗಿತ್ತು.
ಈ ಹಿಂದೆ ರಾಜ್ಯ ಸರ್ಕಾರ ರಚಿಸಿದ್ದ ಸಮಿತಿಯು ವಿವಿಧ ಸಾರ್ವಜನಿಕ ಮನವಿಗಳನ್ನು ಪರಿಶೀಲಿಸಿ ನಿಲ್ದಾಣಗಳ ಹೆಸರು ಬದಲಾವಣೆಗೆ ಶಿಫಾರಸು ಮಾಡಿತ್ತು. ಅದರಂತೆ ಬಿಳೇಕಹಳ್ಳಿ, ಎನ್.ಎಸ್. ಪಾಳ್ಯ ಮತ್ತು ಎಸ್.ಜಿ. ಪಾಳ್ಯ ಹೆಸರುಗಳನ್ನು ಸೇರಿಸುವ ಪ್ರಸ್ತಾವನೆ ಅಂತಿಮಗೊಂಡಿತ್ತು.
ಈ ಪ್ರಕ್ರಿಯೆಯಲ್ಲಿ ಸಚಿವ ರಾಮಲಿಂಗಾ ರೆಡ್ಡಿ, ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕರಾದ ಸತೀಶ್ ರೆಡ್ಡಿ ಮತ್ತು ಉದಯ್ ಗರುಡಾಚಾರ್ ಅವರ ಸಮುಖದಲ್ಲಿ ಸ್ಥಳೀಯರ ಬೇಡಿಕೆಗಳ ಕುರಿತು ಚರ್ಚಿಸಿ ಪ್ರಸ್ತಾವನೆಗಳನ್ನು ಅಂತಿಮಗೊಳಿಸಲಾಗಿತ್ತು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಅನುಮೋದನೆಯಿಂದ ಸ್ಥಳೀಯ ಪ್ರದೇಶಗಳ ಹೆಸರು ಮತ್ತು ಜನರ ಪ್ರಾದೇಶಿಕ ಗುರುತಿಗೆ ಆದ್ಯತೆ ದೊರೆತಂತಾಗಿದೆ. ಅಧಿಕೃತ ಅಧಿಸೂಚನೆ ಹೊರಬಿದ್ದ ಬಳಿಕ ಈ ಮೂರು ಮೆಟ್ರೋ ನಿಲ್ದಾಣಗಳು ಹೊಸ ಹೆಸರುಗಳೊಂದಿಗೆ ಗುರುತಿಸಿಕೊಳ್ಳಲಿವೆ.
