Homeರಾಜ್ಯನ.15ರಂದು ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆ : ಅಕ್ರಮ ತಡೆಗೆ ಸಿಎಂ ಸೂಚನೆ

ನ.15ರಂದು ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆ : ಅಕ್ರಮ ತಡೆಗೆ ಸಿಎಂ ಸೂಚನೆ

ಬೆಂಗಳೂರು, ನ.12- ಕರ್ನಾಟಕ ಲೋಕಸೇವಾ ಆಯೋಗದಿಂದ 319 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ಇದೇ ತಿಂಗಳ 15ರಂದು ನಡೆಯಲಿರುವ ಪರೀಕ್ಷೆಯಲ್ಲಿ, ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಕಟ್ಟೆಚ್ಚರ ವಹಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಕೆಪಿಎಸ್‌‍ಸಿ ಪರೀಕ್ಷೆಗಳ ಸಿದ್ಧತೆ, ಪಾರದರ್ಶಕತೆ ಮತ್ತು ಸುಗಮ ನಿರ್ವಹಣೆ ಕುರಿತು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿಗಳೊಂದಿಗೆ ಮುಖ್ಯಮಂತ್ರಿಯವರು ವರ್ಚುವಲ್‌ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸಚಿವರಾದ ಪ್ರಿಯಾಂಕ್‌ ಖರ್ಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿರಜನೀಶ್‌, ಪೊಲೀಸ್‌‍ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ, ನಗರ ಪೊಲೀಸ್‌‍ ಅಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎ.ಎಸ್‌‍. ಪೊನ್ನಣ್ಣ, ಕೆಪಿಎಸ್‌‍ಸಿಯ ಪರೀಕ್ಷಾ ನಿಯಂತ್ರಕ ಪ್ರಸನ್ನ ಕುಮಾರ್‌, ಗೃಹ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಟಾರಿಯ, ಕೆಪಿಎಸ್‌‍ಸಿ ಕಾರ್ಯದರ್ಶಿ ಕೆ.ಜ್ಯೋತಿ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು, ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಹಾಗೂ ಅಗತ್ಯ ಸುಧಾರಣೆಗಳನ್ನು ಜಾರಿಗೊಳಿಸುವ ಕುರಿತು ಚರ್ಚೆ ನಡೆಸಲಾಗಿದೆ. ಆಯೋಗದಿಂದ ಸಾಕಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೂ ಇಬ್ಬರು ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಪ್ರಶ್ನೆ ಪತ್ರಿಕೆಗಳು, ಇತರ ಪತ್ರಿಕೆಗಳನ್ನು ವಿತರಿಸುವುದು, ಸಂಗ್ರಹಿಸುವುದು, ಸಮಯ ಪಾಲನೆ, ಒಬ್ಬರು ಮೇಲ್ವಿಚಾರಕರ ಜವಾಬ್ದಾರಿಯಾಗಿದ್ದರೆ, ಮತ್ತೊಬ್ಬರು ಮೇಲ್ವಿಚಾರಕರು ಪ್ರತಿಯೊಬ್ಬ ವಿದ್ಯಾರ್ಥಿಯ ಮುಖ ಗುರುತಿಸುವಿಕೆ ಮತ್ತು ಅಭ್ಯರ್ಥಿಗಳು ಯಾವುದೇ ಅಕ್ರಮಗಳನ್ನು ನಡೆಸದಂತೆ ಗಮನ ಹರಿಸಲಿದ್ದಾರೆ ಎಂದು ವಿವರಿಸಲಾಗಿದೆ.

ಪ್ರತಿ ಅಭ್ಯರ್ಥಿಗೂ ಮೂಲ ಹಾಗೂ ಎರಡು ಕಾರ್ಬನ್‌ ಶೀಟ್‌ಗಳನ್ನೊಂದಿರುವ ಒಎಂಆರ್‌ ಶೀಟ್‌ಗಳನ್ನು ಒದಗಿಸಲಾಗುತ್ತದೆ. ಒಂದು ಒಎಂಆರ್‌ ಶೀಟ್‌ ಅನ್ನು ಕೆಪಿಎಸ್‌‍ಸಿ ಕೇಂದ್ರ ಕಚೇರಿಗೆ ಮೌಲ್ಯಮಾಪನಕ್ಕಾಗಿ ರವಾನೆ ಮಾಡಲಾಗುತ್ತದೆ. ಮತ್ತೊಂದು ಶೀಟ್‌ ಅನ್ನು ಸ್ಕ್ಯಾನ್‌ ಮಾಡಿ ತಕ್ಷಣವೇ ಅಪ್‌ಲೋಡ್‌ ಮಾಡಲು ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಕಾಯ್ದಿರಿಸಲಾಗುತ್ತದೆ. ಮೂರನೇ ಒಎಂಆರ್‌ ಶೀಟ್‌ ಅನ್ನು ಅಭ್ಯರ್ಥಿಗಳು ತಮ ಬಳಿಯೇ ಇರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಪ್ರಶ್ನೆ ಪತ್ರಿಕೆಗಳನ್ನು ಸಾಗಾಣಿಕೆ ಮಾಡಲು ಬಿಗಿ ಬಂದೋಬಸ್ತ್‌ ಆಯೋಜಿಸಲಾಗಿದ್ದು, ಅಧಿಕಾರಿಗಳ ತಂಡ ನಿಯೋಜಿಸಲಾಗಿದೆ ಎಂದು ಕೆಪಿಎಸ್‌‍ಸಿಯ ಅಧಿಕಾರಿಗಳು ವಿವರಿಸಿದ್ದಾರೆ.
ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರ್‌ ಅವರು ಪ್ರತಿ ಹಂತದಲ್ಲೂ ನಿಗಾವಹಿಸಬೇಕು. ಈ ಹಿಂದೆ ಪ್ರಶ್ನೆ ಪತ್ರಿಕೆ ಸೋರಿಕೆ, ಒಎಂಆರ್‌ ಶೀಟ್‌ಗಳನ್ನು ತಿದ್ದುವಿಕೆ, ಡಿಜಿಟಲ್‌ ಸಲಕರಣೆಗಳನ್ನು ಬಳಸಿ ಪರೀಕ್ಷಾ ಅಕ್ರಮ ನಡೆಸಿರುವುದು ಸೇರಿದಂತೆ ನಾನಾ ರೀತಿಯ ಅದ್ವಾನಗಳಾಗಿವೆ. ಅದಕ್ಕಾಗಿ ಹಿಂದಿನ ಎಲ್ಲಾ ಅನುಭವಗಳನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಮುಖ್ಯಮಂತ್ರಿಯವರು ಆದೇಶಿಸಿದ್ದಾರೆ.

ಇತ್ತೀಚೆಗೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಆಯ್ಕೆಗೆ ನಡೆದಿದ್ದ ಪರೀಕ್ಷೆಯಲ್ಲಿ ಸಾಕಷ್ಟು ಬಿಗಿ ಕ್ರಮಗಳನ್ನು ಕೈಗೊಂಡ ಹೊರತಾಗಿಯೂ ಅಭ್ಯರ್ಥಿಯೊಬ್ಬ ಅಕ್ರಮ ನಡೆಸಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಗೆಜೆಟೆಡ್‌ ಪ್ರೊಬೇಷನರಿ ಪರೀಕ್ಷೆಯಲ್ಲಿ ಯಾವುದೇ ತೊಂದರೆಗಳಾಗದಂತೆ ಜಾಗ್ರತೆವಹಿಸಬೇಕೆಂದು ಮುಖ್ಯಮಂತ್ರಿಯವರು ಸೂಚಿಸಿದ್ದಾರೆ.
ಪರೀಕ್ಷಾ ಅಕ್ರಮಗಳಿಗೆ ಈ ಬಾರಿ ಜಿಲ್ಲೆ ಮತ್ತು ತಾಲ್ಲೂಕು ಆಡಳಿತವನ್ನು ಹೊಣೆ ಮಾಡಲಾಗುತ್ತದೆ. ಅಧಿಕಾರಿಗಳು ಪ್ರತಿಯೊಂದು ಹಂತದಲ್ಲೂ ಕಟ್ಟೆಚ್ಚರ ವಹಿಸಬೇಕೆಂದು ಡಿ.ಕೆ.ಶಿವಕುಮಾರ್‌ ಒತ್ತಿ ಹೇಳಿದ್ದಾರೆ.

ಪೊಲೀಸ್‌‍ ಇಲಾಖೆ ಪ್ರಶ್ನೆಪತ್ರಿಕೆ, ಉತ್ತರ ಪತ್ರಿಕೆಗಳ ಸಾಗಾಣಿಕೆ ಪರೀಕ್ಷಾ ಕೇಂದ್ರಗಳ ಸುತ್ತಾಮುತ್ತ ಬಿಗಿ ಬಂದೋಬಸ್ತ್‌ ಕುರಿತಂತೆ ತೆಗೆದುಕೊಳ್ಳಲಾದ ಕ್ರಮಗಳ ಕುರಿತು ಮುಖ್ಯಮಂತ್ರಿಯವರು ಮಾಹಿತಿ ಪಡೆದುಕೊಂಡಿದ್ದಾರೆ. ಜಿಲ್ಲಾಡಳಿತ ಮತ್ತು ಪೊಲೀಸ್‌‍ ಇಲಾಖೆಗಳ ನಡುವೆ ಸಮನ್ವಯತೆ ಅಗತ್ಯ ಎಂದು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ, ಇ-ಆಡಳಿತ ಇಲಾಖೆ ವತಿಯಿಂದ ಪ್ರಶ್ನೆಪತ್ರಿಕೆ ಸಿದ್ಧಪಡಿಸುವಿಕೆ ಹಾಗೂ ಸುರಕ್ಷಿತ ವಿತರಣೆಯಿಂದ ಹಿಡಿದು ಮೌಲ್ಯ ಮಾಪನಾ, ಫಲಿತಾಂಶ ಪ್ರಕಟಣೆವರೆಗಿನ ಎಲ್ಲಾ ಪ್ರಕ್ರಿಯೆ ಮೇಲೆ ಕಟ್ಟೆಚ್ಚರ ವಹಿಸಲಾಗಿದೆ. ವಿಶೇಷವಾಗಿ ದಾಖಲಾತಿ ಮತ್ತು ಮಾಹಿತಿಗಳು ಕೈ ಬದಲಾಗುವ ಹಂತಗಳಲ್ಲಿ ಎದುರಾಗುವ ಲೋಪದೋಷಗಳನ್ನು ಗುರುತಿಸಲಾಗಿದೆ ಎಂದಿದ್ದಾರೆ.

ಸಂಪೂರ್ಣ ಪರೀಕ್ಷಾ ಪ್ರಕ್ರಿಯೆಯಲ್ಲಿ ಮಾನವ ಹಸ್ತಕ್ಷೇಪವನ್ನು ತಗ್ಗಿಸಲು ಭದ್ರತೆಯನ್ನು ಬಿಗಿಗೊಳಿಸಲು ಪಾರದರ್ಶಕತೆ ತೆಗೆದುಕೊಳ್ಳಲಾಗಿದೆ. ತಂತ್ರಜ್ಞಾನ ಆಧರಿತ ಸುಧಾರಿತ ಕ್ರಮಗಳ ಜೊತೆಗೆ ಹೊಣೆಗಾರಿಕೆಯನ್ನು ನಿಗದಿ ಪಡಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

RELATED ARTICLES

Latest News