ಬೆಂಗಳೂರು. ನ.12, 2026: ವಿಶ್ವದ ಪ್ರಮುಖ ಚಿಪ್ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಎನ್‌ವಿಡಿಯಾ (Nvidia) ಸಂಸ್ಥೆಯಲ್ಲಿ ಮಹತ್ವದ ನಾಯಕತ್ವ ಬದಲಾವಣೆಯಾಗಿದೆ. ಕಂಪನಿಯ ದೀರ್ಘಕಾಲದ ಸಿಇಒ ಹಾಗೂ ಸಹ-ಸ್ಥಾಪಕ ಜೆನ್ಸನ್ ಹುವಾಂಗ್ ತಮ್ಮ ಸಿಇಒ ಸ್ಥಾನಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದಾರೆ. ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ (CFO) ಕೊಲೆಟ್ ಕ್ರೆಸ್ ಅವರನ್ನು ಹಂಗಾಮಿ ಸಿಇಒ ಆಗಿ ನೇಮಕ ಮಾಡಲಾಗಿದೆ. ಗುರುವಾರ ಎನ್‌ವಿಡಿಯಾ ನಿರ್ದೇಶಕ ಮಂಡಳಿ ಈ ನಿರ್ಧಾರವನ್ನು ಪ್ರಕಟಿಸಿದೆ. ಶಾಶ್ವತ ಉತ್ತರಾಧಿಕಾರಿಯನ್ನು ನೇಮಕ ಮಾಡುವವರೆಗೆ ಕೊಲೆಟ್ ಕ್ರೆಸ್ ಕಂಪನಿಯ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ
ಜೆನ್ಸನ್ ಹುವಾಂಗ್ ರಾಜೀನಾಮೆ ಸುದ್ದಿ ಹೊರಬೀಳುತ್ತಿದ್ದಂತೆ ಎನ್‌ವಿಡಿಯಾ ಷೇರುಗಳು ಭಾರಿ ಒತ್ತಡಕ್ಕೆ ಒಳಗಾಗಿವೆ. ಪ್ರೀ-ಮಾರ್ಕೆಟ್ ವಹಿವಾಟಿನಲ್ಲಿ ಕಂಪನಿಯ ಷೇರು ಮೌಲ್ಯ ಸುಮಾರು ಶೇ.10ರಷ್ಟು ಕುಸಿದಿದೆ. ಈ ಬೆಳವಣಿಗೆಯಿಂದ ಹೂಡಿಕೆದಾರರಲ್ಲಿ ಆತಂಕ ಮೂಡಿದೆ. ಹೂಡಿಕೆ ಸಂಸ್ಥೆ ಯಾರ್ಕ್‌ವಿಲ್ಲೆಯ ಡ್ಯಾನ್ ಐವ್ಸ್ ಅವರು ಎನ್‌ವಿಡಿಯಾ ಷೇರಿನ ಗುರಿ ಬೆಲೆಯನ್ನು 300 ಡಾಲರ್‌ನಿಂದ 225 ಡಾಲರ್‌ಗೆ ಇಳಿಸಿದ್ದಾರೆ.
ಎರಡು ಅಕ್ರಮ ಸಂಬಂಧಗಳ ಆರೋಪ :
ಜೆನ್ಸನ್ ಹುವಾಂಗ್ ವಿರುದ್ಧ ಕೇಳಿಬಂದಿರುವ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಆರೋಪಗಳು ಈ ಬೆಳವಣಿಗೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಚೀನಾದ ಗೂಢಚಾರಿಕೆ ಜಾಲದೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಆರೋಪಿಸಲಾದ ಆಲಿಸ್ ಹುವಾಂಗ್ ಎಂಬ ಮಹಿಳೆಯೊಂದಿಗೆ ಜೆನ್ಸನ್ ಹುವಾಂಗ್ ಸಂಬಂಧ ಹೊಂದಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಇದರ ಬೆನ್ನಲ್ಲೇ ಎನ್‌ವಿಡಿಯಾದ ಕಾರ್ಯನಿರ್ವಾಹಕ ಅಧಿಕಾರಿ ಕಿಂಬರ್ಲಿ ಪೊವೆಲ್ ಅವರೊಂದಿಗೂ ಹುವಾಂಗ್ ಸಂಬಂಧ ಹೊಂದಿದ್ದರು ಎಂಬ ಮತ್ತೊಂದು ಆರೋಪ ವರದಿಯಾಗಿದೆ. ಕಂಪನಿಯ ಸಮಾವೇಶವೊಂದರ ಸಂದರ್ಭದಲ್ಲಿ ಹೋಟೆಲ್‌ನಲ್ಲಿ ಇಬ್ಬರೂ ಆತ್ಮೀಯವಾಗಿ ವರ್ತಿಸುತ್ತಿರುವುದು ಕಂಡುಬಂದಿತ್ತು ಎಂದು ವರದಿ ಹೇಳಿದೆ.
ಈ ಆರೋಪಗಳ ಹಿನ್ನೆಲೆಯಲ್ಲಿ ಕಂಪನಿಯ ನಿರ್ದೇಶಕ ಮಂಡಳಿ ಸಭೆ ನಡೆಸಿ ನಾಯಕತ್ವ ಬದಲಾವಣೆಯ ಕುರಿತು ನಿರ್ಧಾರ ಕೈಗೊಂಡಿದೆ ಎಂದು ವರದಿಯಾಗಿದೆ. ಪತ್ನಿ ಮತ್ತು ಮಕ್ಕಳಲ್ಲಿ ಕ್ಷಮೆಯಾಚಿಸಿದ್ದ ಹುವಾಂಗ್ ತಮ್ಮ ವೈಯಕ್ತಿಕ ಜೀವನದ ವಿವಾದದ ಕುರಿತು ಜೆನ್ಸನ್ ಹುವಾಂಗ್ ಕಂಪನಿಯ ಉದ್ಯೋಗಿಗಳಿಗೆ ಕಳುಹಿಸಿದ ಸಂದೇಶದಲ್ಲಿ ತಪ್ಪೊಪ್ಪಿಕೊಂಡಿದ್ದರು.
“ನಾನು ನನ್ನ ಪತ್ನಿಗೆ ನಿಷ್ಠೆ ತೋರಿಲ್ಲ. ನನ್ನ ನಡೆ ನನ್ನ ಪತ್ನಿ ಮತ್ತು ಮಕ್ಕಳಿಗೆ ನೋವುಂಟುಮಾಡಿದೆ. ಇದಕ್ಕೆ ಯಾವುದೇ ಸಮರ್ಥನೆ ಇಲ್ಲ. ನನ್ನ ತಪ್ಪಿಗೆ ನಾನು ಆಳವಾಗಿ ವಿಷಾದಿಸುತ್ತೇನೆ” ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.
ಚೀನಾ ಚಿಪ್ ವ್ಯವಹಾರದ ಬಗ್ಗೆಯೂ ತನಿಖೆ?
ಮತ್ತೊಂದೆಡೆ, ಆಲಿಸ್ ಹುವಾಂಗ್ ಅವರು ಚೀನಾದ ಕೆಲವು ಕಂಪನಿಗಳ ಜಾಲದೊಂದಿಗೆ ಸಂಪರ್ಕ ಹೊಂದಿದ್ದು, ಚೀನಾಕ್ಕೆ ಸುಮಾರು 7.5 ಬಿಲಿಯನ್ ಡಾಲರ್ ಮೌಲ್ಯದ ಚಿಪ್‌ಗಳ ಸಾಗಣೆಗೆ ನೆರವಾಗಿರುವ ಸಾಧ್ಯತೆಯಿದೆ ಎಂದು ದಿ ಇನ್ಫರ್ಮೇಷನ್ ವರದಿ ಮಾಡಿದೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಪ್ರತಿಕ್ರಿಯಿಸಿದ್ದರು. ಜೆನ್ಸನ್ ಹುವಾಂಗ್ ಅವರನ್ನು ಗೌರವಾನ್ವಿತ ವ್ಯಕ್ತಿ ಎಂದು ಬಣ್ಣಿಸಿದ್ದ ಟ್ರಂಪ್, ಅವರೊಂದಿಗಿನ ಸಂಬಂಧದ ಕುರಿತು ಎಫ್‌ಬಿಐ ಪರಿಶೀಲನೆ ನಡೆಸುತ್ತಿದೆ ಎಂದೂ ಹೇಳಿರುವುದಾಗಿ ವರದಿಯಾಗಿದೆ.
ಜೆನ್ಸನ್ ಹುವಾಂಗ್ ನಿರ್ಗಮನದ ನಡುವೆಯೂ ಎನ್‌ವಿಡಿಯಾ ತನ್ನ ತ್ರೈಮಾಸಿಕ ಹಣಕಾಸು ಫಲಿತಾಂಶಗಳನ್ನು ನವೆಂಬರ್ 17ರಂದು ಪ್ರಕಟಿಸಲು ನಿರ್ಧರಿಸಿದೆ. 1993ರಲ್ಲಿ ಕಂಪನಿಯನ್ನು ಸ್ಥಾಪಿಸಿದ ಜೆನ್ಸನ್ ಹುವಾಂಗ್ ಅವರ ನಾಯಕತ್ವದಲ್ಲಿ ಎನ್‌ವಿಡಿಯಾ ಕೃತಕ ಬುದ್ಧಿಮತ್ತೆ (AI) ಮತ್ತು ವೇಗವರ್ಧಿತ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಜಾಗತಿಕ ಪ್ರಮುಖ ಸಂಸ್ಥೆಯಾಗಿ ಬೆಳೆದಿತ್ತು. ಇದೀಗ ಅವರ ನಿರ್ಗಮನದ ಬಳಿಕ ಕಂಪನಿಯ ಮುಂದಿನ ನಾಯಕತ್ವ, ವ್ಯವಹಾರ ತಂತ್ರ ಮತ್ತು ಷೇರು ಮಾರುಕಟ್ಟೆಯ ಮೇಲಿನ ಪರಿಣಾಮಗಳ ಕುರಿತು ಕುತೂಹಲ ಮೂಡಿದೆ.
