ಮೈಸೂರು,ನ.14- ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆಯ ಹೆಲಿಕಾಪ್ಟರ್ ಅನ್ನು ದುರಸ್ತಿ ಮಾಡಿ ಬೆಂಗಳೂರಿಗೆ ಕೊಂಡೊಯ್ಯಲಾಯಿತು. ನಿನ್ನೆ ಮಧ್ಯಾಹ್ನ 3 ಗಂಟೆ 20 ನಿಮಿಷಕ್ಕೆ ಪ್ರಧಾನಿ ಮೋದಿ ಅವರು ಲಲಿತಮಹಲ್ ಹೆಲಿಪ್ಯಾಡ್ಗೆ ಆಗಮಿಸಿದ್ದರು. ಈ ವೇಳೆ ಒಂದು ಹೆಲಿಕಾಪ್ಟರ್ನಲ್ಲಿ ಮೋದಿ ಆಗಮಿಸಿದ್ದರು. ಪ್ರಧಾನಿ ಮೋದಿ ಅವರ ಬೆಂಗಾವಲಿಗೆ ಒಟ್ಟು ಎರಡು ಹೆಲಿಕಾಪ್ಟರ್ಗಳಿದ್ದವು.
ಪ್ರಧಾನಿ ಮೋದಿ ಲ್ಯಾಂಡಿಂಗ್ ಆದ ನಂತರ ಟೇಕ್ ಆಫ್ ಆಗಬೇಕಿದ್ದ 3 ಹೆಲಿಕಾಪ್ಟರ್ಗಳಲ್ಲಿ 2 ಹೆಲಿಕಾಪ್ಟರ್ಗಳು ಟೇಕ್ ಆಫ್ ಆಗಿದ್ದವು. ಆದರೆ ಒಂದು ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಮೈಸೂರಿನಲ್ಲೇ ಉಳಿದುಕೊಂಡಿತ್ತು.ಇಂಡಿಯನ್ ಏರ್ ಫೋರ್ಸ್ಗೆ ಸೇರಿದ ಈ ಹೆಲಿಕಾಪ್ಟರ್ ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ನಲ್ಲೇ ನಿಲ್ಲಿಸಲಾಗಿತ್ತು.
ಕೆಳಗಿಳಿದ ಹೆಲಿಕಾಪ್ಟರ್ ಮೇಲೆ ಹಾರಲೇ ಇಲ್ಲ :
ಬೆಂಗಳೂರಿನಿಂದ ಮೈಸೂರಿಗೆ ಬಂದ ಬಳಿಕ ಈ ವಿಶೇಷ ಹೆಲಿಕಾಪ್ಟರ್ ಮತ್ತೆ ಹಾರಲೇ ಇಲ್ಲ. ನಿಂತಲ್ಲೇ ನಿಂತುಬಿಟ್ಟಿತು. ನಿನ್ನೆಯಿಂದಲೂ ನಿಂತಿದ್ದ ಹೆಲಿಕಾಪ್ಟರ್ ಅನ್ನು ಅಧಿಕಾರಿಗಳು ರಿಪೇರಿ ಮಾಡಿದರು. ಕೆಟ್ಟು ನಿಂತಿದ್ದ ಹೆಲಿಕಾಪ್ಟರ್ ಅನ್ನು ಪೈಲಟ್ ಇಂದು ಬೆಳಗ್ಗೆ ಮೈಸೂರಿನಿಂದ ಬೆಂಗಳೂರಿಗೆ ತೆಗೆದುಕೊಂಡು ಹೋದರು.
