ನವದೆಹಲಿ,ನ.14- ಮಹಿಳಾ ಮೀಸಲಾತಿ ಕಾಯ್ದೆ-2023 ಜಾರಿಗೆ ಅಗತ್ಯವಾಗಿರುವ ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಶನ್) ಮಸೂದೆ- 2026 ಅನ್ನು ಅಂಗೀಕ
ರಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಮಸೂದೆ ಅಂಗೀಕಾರಕ್ಕೆ ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತಕ್ಕಿಂತ ಸರ್ಕಾರದ ಬಳಿ ಕನಿಷ್ಠ 15ರಿಂದ 16 ಮತಗಳು ಹೆಚ್ಚುವರಿಯಾಗಿ ಇವೆ ಎಂಬ ವಿಶ್ವಾಸದಲ್ಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಆದರೆ, ವಿಶೇಷ ಅಧಿವೇಶನ ಯಾವಾಗ ನಡೆಯಲಿದೆ ಮತ್ತು ಎಷ್ಟು ದಿನಗಳ ಕಾಲ ನಡೆಯಲಿದೆ ಎಂಬುದರ ಕುರಿತು ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಅಗತ್ಯವಿದ್ದು, ಪ್ರಸ್ತುತ ಮೂರು ಸ್ಥಾನಗಳು ಖಾಲಿ ಇರುವ 543 ಸದಸ್ಯ ಬಲದ ಸದನದಲ್ಲಿ 361 ಮತಗಳ ಅಗತ್ಯವಿದೆ.
ಪ್ರಸ್ತಾವಿತ ಡಿಲಿಮಿಟೇಶನ್ ಮಸೂದೆಯ ಮೂಲಕ ಲೋಕಸಭೆಯ ಸದಸ್ಯರ ಸಂಖ್ಯೆಯನ್ನು ಈಗಿರುವ 543ರಿಂದ ಗರಿಷ್ಠ 850ಕ್ಕೆ ಹೆಚ್ಚಿಸುವ ಉದ್ದೇಶವಿದೆ ಎನ್ನಲಾಗಿದೆ. ಇದರೊಂದಿಗೆ ಸಂಸತ್ತು ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಜಾರಿಗೆ ತರಲು ದಾರಿ ಸುಗಮವಾಗಲಿದೆ. ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಗೆ 2011ರ ಜನಗಣತಿಯನ್ನು ಆಧಾರವಾಗಿಸಿಕೊಳ್ಳುವ ಪ್ರಸ್ತಾಪವಿದೆ.
ಏಪ್ರಿಲ್ನ ಸೋಲಿನ ಬಳಿಕ ಹೊಸ ಪ್ರಯತ್ನ
ಏಪ್ರಿಲ್ 17ರಂದು ನಡೆದ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಕಾನೂನಿಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಗತ್ಯ ಬೆಂಬಲ ಪಡೆಯಲು ವಿಫಲವಾಗಿತ್ತು. ಇದೀಗ ಅದೇ ಉದ್ದೇಶವನ್ನು ಈಡೇರಿಸಲು ಹೊಸ ರೂಪದಲ್ಲಿ ಡಿಲಿಮಿಟೇಶನ್ ಮಸೂದೆ ತರಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ಆಗಸ್ಟ್ 13ರಂದು ಮುಕ್ತಾಯಗೊಂಡ ಮುಂಗಾರು ಅಧಿವೇಶನವನ್ನು ಇನ್ನೂ ಅಧಿಕೃತವಾಗಿ ಅಂತ್ಯಗೊಳಿಸಿಲ್ಲ. ಹೀಗಾಗಿ ಅಲ್ಪಾವಧಿಯಲ್ಲೇ ಸಂಸತ್ತನ್ನು ಮತ್ತೆ ಕರೆಯುವ ಸಾಧ್ಯತೆ ಇದೆ. ಪ್ರಸ್ತುತ ಅಧಿವೇಶನವು 91 ದಿನಗಳಿಂದ ಅಧಿಕೃತವಾಗಿ ಮುಕ್ತಾಯಗೊಳ್ಳದೆ ಉಳಿದಿದ್ದು, 2008ರಲ್ಲಿ ದಾಖಲಾಗಿದ್ದ 87 ದಿನಗಳ ಹಿಂದಿನ ದಾಖಲೆಯನ್ನೂ ಮೀರಿದೆ.
ದಕ್ಷಿಣ ರಾಜ್ಯಗಳ ಆತಂಕಕ್ಕೆ ಪರಿಹಾರ ಹುಡುಕಾಟ
ಡಿಲಿಮಿಟೇಶನ್ ವಿಚಾರದಲ್ಲಿ ದಕ್ಷಿಣ ರಾಜ್ಯಗಳು ವ್ಯಕ್ತಪಡಿಸುತ್ತಿರುವ ಆತಂಕಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಏಪ್ರಿಲ್ನಲ್ಲಿ ವಿರೋಧ ಪಕ್ಷಗಳೊಂದಿಗೆ, ವಿಶೇಷವಾಗಿ ದಕ್ಷಿಣ ಭಾರತದ ಪಕ್ಷಗಳೊಂದಿಗೆ ಚರ್ಚೆ ನಡೆಸಿತ್ತು. 1971ರ ಜನಗಣತಿಯ ಆಧಾರದ ಮೇಲೆ ರಾಜ್ಯಗಳ ನಡುವಿನ ಪ್ರಸ್ತುತ ಲೋಕಸಭಾ ಸ್ಥಾನಗಳ ಅನುಪಾತವನ್ನು ಕಾಯ್ದುಕೊಂಡು, ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸುವ ಪ್ರಸ್ತಾಪವನ್ನೂ ಸರ್ಕಾರ ಮುಂದಿಟ್ಟಿತ್ತು ಎನ್ನಲಾಗಿದೆ.
2029ರ ಲೋಕಸಭಾ ಚುನಾವಣೆಗೆ ಮುನ್ನ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರುವ ಉದ್ದೇಶದಿಂದ ಈ ಸೂತ್ರವನ್ನು ಮುಂದಿಟ್ಟಿದ್ದರೂ, ಏಪ್ರಿಲ್ನಲ್ಲಿ ಹಂಚಿಕೆಯಾಗಿದ್ದ ಡಿಲಿಮಿಟೇಶನ್ ಮಸೂದೆಯಲ್ಲಿ ಈ ತಿದ್ದುಪಡಿ ಇರಲಿಲ್ಲ. ಇದೀಗ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸುವ ಅಂಶವನ್ನು ಮಸೂದೆಗೆ ಸೇರಿಸುವ ಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದೆ.
ಬೂಟಾಟಿಕೆ ಎಂದು ಕಾಂಗ್ರೆಸ್ ಟೀಕೆ
ವಿಶೇಷ ಅಧಿವೇಶನದ ಸಾಧ್ಯತೆ ಕುರಿತು ಕಾಂಗ್ರೆಸ್ ತೀವ್ರವಾಗಿ ಪ್ರತಿಕ್ರಿಯಿಸಿದೆ. ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕ್ಷೇತ್ರ ಮರುವಿಂಗಡಣೆ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ. ಮಸೂದೆಗಳು 15ರಿಂದ 18 ಮತಗಳ ಅಂತರದಲ್ಲಿ ಅಂಗೀಕಾರವಾಗಲಿವೆ ಎಂಬ ಸರ್ಕಾರದ ವಿಶ್ವಾಸವನ್ನು ತಳ್ಳಿಹಾಕಿದ ಜೈರಾಮ್ ರಮೇಶ್, ಏಪ್ರಿಲ್ 17ರಂದು ಲೋಕಸಭೆಯಲ್ಲಿ ಇದೇ ವಿಚಾರದಲ್ಲಿ ಸರ್ಕಾರವು 50ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲು ಕಂಡಿತ್ತು ಎಂದು ಹೇಳಿದ್ದಾರೆ.
ಸರ್ಕಾರದ ಈ ನಡೆ ಱಬ್ಲಫ್ ಮತ್ತು ಬ್ಲಸ್ಟರಿಂಗ್ೞ ಎಂದು ಟೀಕಿಸಿರುವ ಅವರು, ಹಿಂದೆ ಬಳಸಿದ ಬುಲ್ಡೋಜರ್ ತಂತ್ರ ಯಶಸ್ವಿಯಾಗಲಿಲ್ಲ, ಈಗಲೂ ಯಶಸ್ವಿಯಾಗುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.ಒಟ್ಟಾರೆ, ಡಿಲಿಮಿಟೇಶನ್, ಲೋಕಸಭಾ ಸ್ಥಾನಗಳ ಹೆಚ್ಚಳ ಹಾಗೂ ಮಹಿಳಾ ಮೀಸಲಾತಿ ಜಾರಿಗೆ ಸಂಬಂಧಿಸಿದ ಕೇಂದ್ರದ ಹೊಸ ಪ್ರಯತ್ನವು ಮತ್ತೆ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದೆ. ವಿಶೇಷವಾಗಿ ದಕ್ಷಿಣ ರಾಜ್ಯಗಳ ಸ್ಥಾನಮಾನ ಮತ್ತು ರಾಜಕೀಯ ಪ್ರಾತಿನಿಧ್ಯದ ಮೇಲೆ ಕ್ಷೇತ್ರ ಮರುವಿಂಗಡಣೆಯ ಪರಿಣಾಮದ ಬಗ್ಗೆ ವಿರೋಧ ಪಕ್ಷಗಳು ಎತ್ತಿರುವ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಯಾವ ರೀತಿಯ ಉತ್ತರ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.
