Homeರಾಜ್ಯನಾಳೆ ಕೆಎಎಸ್‌‍ ಪರೀಕ್ಷೆ : ಕೆಪಿಎಸ್‌‍ಸಿಯಿಂದ ಸಕಲ ಸಿದ್ಧತೆ

ನಾಳೆ ಕೆಎಎಸ್‌‍ ಪರೀಕ್ಷೆ : ಕೆಪಿಎಸ್‌‍ಸಿಯಿಂದ ಸಕಲ ಸಿದ್ಧತೆ

ಬೆಂಗಳೂರು,ನ.14- ಕರ್ನಾಟಕ ಲೋಕಸೇವಾ ಆಯೋಗವು 2026-27ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್ಸ್‌ (ಕೆಎಎಸ್‌‍) ಗ್ರೂಪ್‌ ಎ ಮತ್ತು ಗ್ರೂಪ್‌ ಬಿ ವೃಂದದ 319 ಹುದ್ದೆಗಳಿಗೆ ನಾಳೆ ಪೂರ್ವಭಾವಿ ಪರೀಕ್ಷೆ ನಡೆಸಲಿದ್ದು, ಸಕಲ ಸಿದ್ಧತೆ ಮಾಡಿಕೊಂಡಿದೆ.ಕೆಎಎಸ್‌‍ ಪೂರ್ವಭಾವಿ ಪರೀಕ್ಷೆಗೆ 1,47,067 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ರಾಜ್ಯದ 15 ಜಿಲ್ಲೆಗಳಲ್ಲಿ 345 ಪರೀಕ್ಷಾ ಉಪಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪರೀಕ್ಷೆ ಎರಡು ಅವಧಿಗಳಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಮಧ್ಯಾಹ್ನ 2ರಿಂದ 4ರವರೆಗೆ ನಡೆಯಲಿದೆ.

ಗ್ರೂಪ್‌ ಎ ಯ 117 ಮತ್ತು ಗ್ರೂಪ್‌ ಬಿ ಯ 202 ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಯಲ್ಲಿ ಐದು ಆಯ್ಕೆಗಳ ಒಎಂಆರ್‌ ಪದ್ಧತಿ, ತ್ರಿಪ್ರತಿ ಉತ್ತರ ಪತ್ರಿಕೆ, ಪರೀಕ್ಷೆ ನಡೆದ ದಿನವೇ ಸ್ಕ್ಯಾನ್‌ ಮಾಡಿದ ಒಎಂಆರ್‌ ಪ್ರತಿಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ವ್ಯವಸ್ಥೆ ಜಾರಿಗೊಳಿಸಲು ಆಯೋಗ ಸಿದ್ಧತೆ ಮಾಡಿಕೊಂಡಿದೆ.

ಕೆಪಿಎಸ್‌‍ಸಿ ಈಗಾಗಲೇ ನಡೆಸಿರುವ ನೇಮಕಾತಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಹಲವು ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ ಪರೀಕ್ಷೆಯನ್ನು ಚುನಾವಣೆ ಮಾದರಿಯಲ್ಲಿ ಕಟ್ಟುನಿಟ್ಟಿನ ಭದ್ರತೆಯೊಂದಿಗೆ ನಡೆಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇತ್ತೀಚೆಗೆ ಆಯೋಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಅವರು, ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶ ನೀಡಬಾರದು. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ, ಮೊಬೈಲ್‌ ಜಾಮರ್‌ ಹಾಗೂ ಸೂಕ್ತ ಪೊಲೀಸ್‌‍ ಭದ್ರತೆ ಕಲ್ಪಿಸಬೇಕು. ಅಭ್ಯರ್ಥಿಗಳು ಮೊಬೈಲ್‌ ಫೋನ್‌ನೊಂದಿಗೆ ಪರೀಕ್ಷಾ ಕೇಂದ್ರ ಪ್ರವೇಶಿಸುವಂತಿಲ್ಲ. ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶ ನಿರ್ಬಂಧಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಮೊದಲ ಬಾರಿಗೆ ಪ್ರತಿ ಪರೀಕ್ಷಾ ಕೊಠಡಿಗೆ ಇಬ್ಬರು ಮೇಲ್ವಿಚಾರಕರನ್ನು ನೇಮಿಸಲಾಗುತ್ತಿದ್ದು, ಅವರಲ್ಲಿ ಒಬ್ಬರು ಕಡ್ಡಾಯವಾಗಿ ಸರ್ಕಾರಿ ಕಾಲೇಜಿನ ಸಿಬ್ಬಂದಿಯಾಗಿರಬೇಕು. ನಕಲಿ ಅಭ್ಯರ್ಥಿಗಳ ಪ್ರವೇಶ ತಡೆಯಲು ಕಟ್ಟುನಿಟ್ಟಿನ ಪರಿಶೀಲನೆ ನಡೆಸಬೇಕು ಎಂದು ನಿರ್ದೇಶನ ನೀಡಿದ್ದಾರೆ.ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಪರೀಕ್ಷಾ ಅಕ್ರಮಗಳಿಗೆ ಅವಕಾಶ ನೀಡಿದರೆ ಅಂತಹ ಸಂಸ್ಥೆಗಳ ಪರವಾನಗಿ ರದ್ದುಪಡಿಸಲಾಗುವುದು. ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ.

RELATED ARTICLES

Latest News