ಬೆಂಗಳೂರು,ನ.15-ಅಪ್ಪ,ಅಮನ ಜಗಳ ಬಿಡಿಸಲು ಹೋದ ಮಗನನ್ನೇ ತಂದೆ ಹಾರೆಯಿಂದ ತಿವಿದು ಕೊಲೆ ಮಾಡಿರುವ ಹೃದಯವಿದ್ರಾವಿಕ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಚೌಡನಾಯಕನ ಪಾಳ್ಯದಲ್ಲಿ ನಡೆದಿದೆ.ಸುನಿಲ್ (16) ತಂದೆಯಿಂದ ಕೊಲೆಯಾದ ಬಾಲಕ.
ತಂದೆ ನಂಜೇಗೌಡ ಮದ್ಯವ್ಯಸನಿಯಾಗಿದ್ದು, ಪ್ರತಿದಿನ ಕುಡಿದು ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಎಂದು ತಿಳಿದು ಬಂದಿದೆ.ಈ ಹಿಂದೆಯೂ ಕೂಡ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜೈಲಿಗೆ ಹೋಗಿ ಬಂದಿದ್ದ. ಆದರೂ ಸಹ ತನ್ನ ಚಾಳಿ ಮುಂದುವರೆಸಿದ್ದು, ಇಂದು ಬೆಳಗ್ಗೆ ಪತ್ನಿಯೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದಿದ್ದಾನೆ.
ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಪುತ್ರ ಸುನಿಲ್ ಮಧ್ಯಪ್ರವೇಶಿಸಿ ಜಗಳ ಬಿಡಿಸಲು ಮುಂದಾಗಿದ್ದಾನೆ. ಮೊದಲೇ ಸಿಟ್ಟಿನಲ್ಲಿದ್ದ ನಂಜೇಗೌಡ ಮತ್ತಷ್ಟು ಕೋಪಗೊಂಡು ಪತ್ನಿಯನ್ನು ಮನೆಯಿಂದ ಹೊರತಳ್ಳಿ ಹಾರೆಯಿಂದ ಮಗನ ಮೇಲೆ ಮನಬಂದಂತೆ ಹಲ್ಲೆ ನಡೆಸಿ ತಿವಿದು ಹತ್ಯೆಗೈದಿದ್ದಾನೆ.
ಸುದ್ದಿ ತಿಳಿದ ಕೂಡಲೇ ಕುಣಿಗಲ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿ ದ್ದಾರೆ.
ಆಕ್ರಂದನ:ಅಪ್ಪ, ಅಮನ ಜಗಳದಲ್ಲಿ ಕೂಸು ಬಡವಾಯಿತು ಅನ್ನೋದು ಗಾದೆ ಮಾತು. ಆದರೆ ಇಲ್ಲಿ ಜಗಳ ಬಿಡಿಸಲು ಹೋದ ಪುತ್ರನೇ ದಾರುಣವಾಗಿ ತಂದೆಯಿಂದಲೇ ಹತ್ಯೆಯಾಗಿರುವುದು ಕರುಳು ಹಿಂಡುವಂತಿತ್ತು. ಪುತ್ರನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.
