ಮೌಂಟ್ ಮೌಂಗನುಯಿ, ನ.15- ತೀವ್ರ ಕುತೂಹಲ ಕೆರಳಿಸಿದ್ದ ಏಕದಿನ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ತಂಡ ರೋಚಕ ಹಣಾಹಣಿಯಲ್ಲಿ ಅತಿಥೇಯ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿದೆ.ಈ ಮೂಲಕ ಸರಣಿಯನ್ನು 3-1 ಅಂತರದಲ್ಲಿ ಟೀಮ್ ಇಂಡಿಯಾ ತನ್ನ ವಶಕ್ಕೆ ಪಡೆದಿದೆ. ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಕೇವಲ 42 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 209 ರನ್ಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು.
ಮತ್ತೊಮ್ಮೆ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಫಲ್ಯ ಕಂಡುಬಂದಿತು. ಅಕ್ಷರ್ ಪಟೇಲ್ ಮತ್ತು ಇಶಾನ್ ಕಿಶನ್ ಜವಾಬ್ದಾರಿಯುತ ಆಟ ಪ್ರದರ್ಶಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿದರು.
ಆದರೂ ನಿರ್ಣಾಯಕ ಹಂತದಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದಾಗ, ನಮಂದಿರ್ ಅವರ ತಾಳ್ಮೆಯ ಹೋರಾಟ ಭಾರತ ತಂಡವನ್ನು 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾಯಿತು.210 ರನ್ಗಳ ಗುರಿಯನ್ನು ಬೆನ್ನಟ್ಟಿದ ಅತಿಥೇಯ ನ್ಯೂಜಿಲೆಂಡ್ ಬ್ಯಾಟ್ಸ್ಮನ್ಗಳು ಉತ್ತಮ ಆರಂಭ ಕಂಡರೂ, ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್ ಅವರ ಉತ್ತಮ ಬೌಲಿಂಗ್ನಿಂದ ನ್ಯೂಜಿಲೆಂಡ್ ಬ್ಯಾಟ್ಸ್ಮನ್ಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದರು.
ಉತ್ತಮ ಲಯದಲ್ಲಿ ಕಂಡುಬಂದ ಭಾರತ ಬೌಲಿಂಗ್ ಪಡೆ, ನಿಗದಿತ ಸಮಯದಲ್ಲಿ ನ್ಯೂಜಿಲೆಂಡ್ ಬ್ಯಾಟ್ಸ್ಮನ್ಗಳನ್ನು ಪೆವಿಲಿಯನ್ಗೆ ಅಟ್ಟಿತು.ಸ್ಫೋಟಕ ಬ್ಯಾಟ್ಸ್ಮನ್ ಫಿನ್ ಅಲೆನ್ ಕೇವಲ ಒಂದು ರನ್ಗೆ ಔಟಾದರೆ, ಬ್ರೇಸ್ವೆಲ್ 19 ರನ್ಗಳಿಗೆ ಔಟಾದಾಗ ನ್ಯೂಜಿಲೆಂಡ್ ಪಾಳಯದಲ್ಲಿ ಸೋಲಿನ ಭೀತಿ ಆವರಿಸಿತು.
ಅಕ್ಷರ್ ಪಟೇಲ್ ಮತ್ತು ನಮನ್ ಧೀರ್ ಅವರ ಸ್ಪಿನ್ ಜುಗಲ್ಬಂದಿ ಕೂಡ ಇಂದು ಗಮನ ಸೆಳೆಯಿತು. 49ನೇ ಓವರ್ನಲ್ಲಿ ನ್ಯೂಜಿಲೆಂಡ್ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 187 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಅಂತಿಮವಾಗಿ ಭಾರತ 22 ರನ್ಗಳಿಂದ ಜಯಗಳಿಸುವ ಮೂಲಕ ಗೆದ್ದು ಬೀಗಿದೆ. ಅರ್ಶದೀಪ್ ಸಿಂಗ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರೆ, ಅಕ್ಷರ್ ಪಟೇಲ್ ಮತ್ತೊಮ್ಮೆ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚಿದ್ದಾರೆ .
