Homeರಾಜ್ಯರಾಜ್ಯದ 345 ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್‌ ಬಿಗಿ ಭದ್ರತೆಯಲ್ಲಿ ನಡೆದ ಕೆಎಎಸ್‌ ಪರೀಕ್ಷೆ

ರಾಜ್ಯದ 345 ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್‌ ಬಿಗಿ ಭದ್ರತೆಯಲ್ಲಿ ನಡೆದ ಕೆಎಎಸ್‌ ಪರೀಕ್ಷೆ

ಬೆಂಗಳೂರು,ನ.15- ಸದಾ ಒಂದಿಲ್ಲೊಂದು ವಿವಾದಕ್ಕೆ ಒಳಗಾಗುತ್ತಾ ಬಂದಿರುವ ಕರ್ನಾಟಕ ಲೋಕಸೇವಾ ಆಯೋಗವು 2026-27ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್ಸ್‌ (ಕೆಎಎಸ್‌‍) ಗ್ರೂಪ್‌ ಎ ಮತ್ತು ಗ್ರೂಪ್‌ ಬಿ ವೃಂದದ 319 ಹುದ್ದೆಗಳಿಗೆ ರಾಜ್ಯದ 15 ಜಿಲ್ಲೆಗಳಲ್ಲಿ 345 ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತೆಯೊಂದಿಗೆ ಪೂರ್ವಭಾವಿ ಪರೀಕ್ಷೆ ನಡೆಸಲಾಯಿತು.

ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕೆಲವೊಂದು ಸಣ್ಣ-ಪುಟ್ಟ ತೊಂದರೆಗಳನ್ನು ಹೊರತುಪಡಿಸಿದರೆ, ಬಹುತೇಕ ಸುಸೂತ್ರವಾಗಿ ಪರೀಕ್ಷೆ ನಡೆಸಲಾಗುತ್ತಿದೆ.
ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಇ.ಡಿ. ಈಗಾಗಲೇ ಚಾರ್ಜ್‌ಶೀಟ್‌ ಸಲ್ಲಿಸಿದೆ, ಮತ್ತೊಂದೆಡೆ ಎಸ್‌‍ಐಟಿ ತನಿಖೆ ನಡೆಸುತ್ತಿದೆ. ಈ ನಡುವೆ ಕೆಪಿಎಸ್‌‍ಸಿ ಕೆಎಎಸ್‌‍ ಪೂರ್ವಭಾವಿ ಪರೀಕ್ಷೆ ನಡೆಸಿದೆ.

ಇಂದು ನಡೆದ ಪೂರ್ವಭಾವಿ ಪರೀಕ್ಷೆಗೆ ಒಟ್ಟು, 1,47,067 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಒಂದು ಪರೀಕ್ಷೆ-1 ನಡೆದಿದ್ದು, ಮಧ್ಯಾಹ್ನ 2ರಿಂದ 4ರವರೆಗೆ ಪರೀಕ್ಷೆ-2 ನಡೆಯಲಿದೆ. ಗ್ರೂಪ್‌ ಎ ಯ 117 ಮತ್ತು ಗ್ರೂಪ್‌ ಬಿ ಯ 202 ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆಸಲಾಗುತ್ತಿದೆ.

ಬೆಂಗಳೂರು ನಗರ, ತುಮಕೂರು, ಮೈಸೂರು, ಕಲಬುರಗಿ, ರಾಯಚೂರು, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ಹಾಸನ, ದಾವಣಗೆರೆ ಜಿಲ್ಲೆಗಳಲ್ಲಿ ಸ್ಥಾಪಿಸಿರುವ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ.

ಪರೀಕ್ಷೆಯಲ್ಲಿ ಐದು ಆಯ್ಕೆಗಳ ಒಎಂಆರ್‌ ಪದ್ಧತಿ ಇದ್ದು, ತ್ರಿಪ್ರತಿ ಉತ್ತರ ಪತ್ರಿಕೆ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆ ನಡೆದ ದಿನವೇ ಸ್ಕ್ಯಾನ್‌ ಮಾಡಿದ ಒಎಂಆರ್‌ ಪ್ರತಿಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ವ್ಯವಸ್ಥೆ ಜಾರಿಗೊಳಿಸಲು ಆಯೋಗ ಸಿದ್ಧತೆ ಮಾಡಿಕೊಂಡಿದೆ. ಒಂದು ಪ್ರತಿ ಅಭ್ಯರ್ಥಿಗೆ, ಇನ್ನೊಂದು ಕೆಪಿಎಸ್‌‍ಸಿ ಮೌಲ್ಯಮಾಪನಕ್ಕೆ ಮತ್ತೊಂದು ಜಿಲ್ಲಾಧಿಕಾರಿ/ಕೆಪಿಎಸ್‌‍ಸಿ ಸ್ಟ್ರಾಂಗ್‌ ರೂಮ್‌ನಲ್ಲಿ ಸುರಕ್ಷಿತವಾಗಿಡಲಾಗುತ್ತದೆ.

ಇದೇ ಮೊದಲ ಬಾರಿಗೆ ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಇಬ್ಬರು ಮೇಲ್ವಿಚಾರಕರ ನಿಯೋಜಿಸಲಾಗಿದ್ದು, ನಕಲಿ ಅಭ್ಯರ್ಥಿಗಳ ಭಾಗವಹಿಸುವಿಕೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅಕ್ರಮಕ್ಕೆ ಆಸ್ಪದ ನೀಡುವ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ ಸಂದೇಶ ನೀಡಿದ್ದು, ಪರೀಕ್ಷಾ ಅಕ್ರಮಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಎಲ್ಲಾ ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಮತ್ತು ಮೊಬೈಲ್‌ ಜಾಮರ್‌ಗಳನ್ನು ಅಳವಡಿಸಲಾಗಿದೆ.

ವಸ್ತ್ರ ಸಂಹಿತೆ: ಅಭ್ಯರ್ಥಿಗಳು ಸರಳ ಉಡುಪು ಧರಿಸಿ ಪರೀಕ್ಷೆಗೆ ಹಾಜರಾಗಬೇಕು. ತುಂಬು ತೋಳಿನ ಶರ್ಟ್‌, ಟಿ-ಶರ್ಟ್‌, ಫ್ರಿಲ್‌ ಹಾಗೂ ಪದರಗಳಿರುವ ವಿನ್ಯಾಸದ ಉಡುಪುಗಳ ನಿಷೇಧವಿದ್ದು, ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಲೋಹ ಅಥವಾ ಲೋಹವಲ್ಲದ ಯಾವುದೇ ಆಭರಣ ಧರಿಸಲು ಅವಕಾಶವಿಲ್ಲ. ಶೂ ಮತ್ತು ಸಾಕ್ಸ್ ಬದಲಿಗೆ ಸರಳ ಚಪ್ಪಲಿ ಧರಿಸಿ ಬರಬೇಕು. ಧಾರ್ಮಿಕ ಆಚರಣೆಗೆ ಸಂಬಂಧಿಸಿದ ವಸ್ತ್ರಗಳನ್ನು ಧರಿಸುವವರು ಹಾಗೂ ಶ್ರವಣ ಸಾಧನ ಬಳಸುವವರು ಪರೀಕ್ಷೆ ಆರಂಭವಾಗುವುದಕ್ಕಿಂತ ಎರಡು ಗಂಟೆ ಮುಂಚಿತವಾಗಿ ವಿಶೇಷ ತಪಾಸಣೆಗೆ ಒಳಪಡಬೇಕಾಗಿತ್ತು. ಶ್ರವಣ ಸಾಧನ ಬಳಸುವವರು ವೈದ್ಯಕೀಯ ದಾಖಲೆಗಳ ಪ್ರದರ್ಶನ ಕಡ್ಡಾಯಗೊಳಿಸಲಾಗಿತ್ತು.

ಎಲ್ಲ ಅಭ್ಯರ್ಥಿಗಳು ಕೈಯಲ್ಲಿ ಹಿಡಿಯುವ ಲೋಹಶೋಧಕ ಸಾಧನದ ತಪಾಸಣೆಗೆ ಒಳಪಡುವುದು ಕಡ್ಡಾಯ. ಗುರುತು ಪತ್ತೆಗೆ ಅಡ್ಡಿಯಾಗುವ ರೀತಿಯ ವಸ್ತ್ರ ಧರಿಸಿರುವವರು ತಪಾಸಣಾ ಸಿಬ್ಬಂದಿ ಹಾಗೂ ಕೊಠಡಿ ಸಂವೀಕ್ಷಕರಿಗೆ ಸಹಕರಿಸಬೇಕು, ತಪಾಸಣೆ ನಿರಾಕರಿಸಿದರೆ ಪರೀಕ್ಷೆಗೆ ಅವಕಾಶವಿಲ್ಲ. ಪರೀಕ್ಷೆ ವೇಳೆ ಶೌಚಾಲಯಕ್ಕೆ ಹೋಗಿ ಬಂದರೂ ಮರು ತಪಾಸಣೆ ಬಳಿಕವೇ ಕೊಠಡಿಗೆ ಪ್ರವೇಶ.

ಲೋಹದ ಅಥವಾ ಪಾರದರ್ಶಕವಲ್ಲದ ನೀರಿನ ಬಾಟಲಿಗಳನ್ನು ಪರೀಕ್ಷಾ ಕೊಠಡಿಗೆ ತರಲು ಅವಕಾಶವಿಲ್ಲ. ಕಿವಿ ಮತ್ತು ಬಾಯಿಯನ್ನು ಮುಚ್ಚುವ ಅಥವಾ ಯಾವುದೇ ರೀತಿಯ ಫಿಲ್ಟರ್‌ ಹೊಂದಿರುವ ಫೇಸ್‌‍ ಮಾಸ್ಕ್‌ ಧರಿಸಿ ಪ್ರವೇಶ ನಿಷೇಧ ವಿಧಿಸಲಾಗಿತ್ತು. ಅಲ್ಲದೆ, ಮೊಬೈಲ್‌, ಟ್ಯಾಬ್ಲೆಟ್‌, ಪೆನ್‌ಡ್ರೈವ್‌, ಬ್ಲೂಟೂತ್‌ ಸಾಧನ, ಸಾರ್ಟ್‌ವಾಚ್‌, ಕ್ಯಾಲ್ಕುಲೇಟರ್‌ ಸೇರಿದಂತೆ ಎಲೆಕ್ಟ್ರಾನಿಕ್‌ ಉಪಕರಣಗಳು ಹಾಗೂ ಪುಸ್ತಕ, ಚೀಟಿ, ನೋಟ್‌್ಸಗೆ ಅವಕಾಶವಿರಲಿಲ್ಲ.

ಹೈಟೆಕ್‌ ಕಾಪಿ ತಡೆಯಲು ಒಟ್ಟು 13 ಸೂಕ್ಷ್ಮ ಕೇಂದ್ರಗಳಲ್ಲಿ ಇಎನ್‌ಟಿ ವೈದ್ಯರ ನಿಯೋಜನೆ ಮಾಡಲಾಗಿದೆ. ಪರೀಕ್ಷಾ ಕೇಂದ್ರದ 200 ಮೀಟರ್‌ ಸುತ್ತಮುತ್ತ ನಿಷೇಧಾಜ್ಞೆ ವಿಧಿಸಲಾಗಿದ್ದು, 1 ಕಿ.ಮೀ. ವ್ಯಾಪ್ತಿಯಲ್ಲಿ ಜೆರಾಕ್‌್ಸ, ಸೈಬರ್‌ ಸೆಂಟರ್‌ ಬಂದ್‌ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೆಯೂ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ. ಚುನಾವಣೆ ಮಾದರಿಯಲ್ಲಿ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಡಿ.ಕೆ.ಶಿವಕುಮಾರ್‌ ಈಗಾಗಲೇ ಖಡಕ್‌ ಸೂಚನೆ ನೀಡಿದ್ದರು.

RELATED ARTICLES

Latest News