Homeರಾಜ್ಯಅಮಾನ್ಯೀಕರಣದ ನಂತರವೂ ನಕಲಿ ನೋಟುಗಳ ಹಾವಳಿ ನಿಂತಿಲ್ಲ ಏಕೆ..? : ಪ್ರಿಯಾಂಕ್‌ ಖರ್ಗೆ

ಅಮಾನ್ಯೀಕರಣದ ನಂತರವೂ ನಕಲಿ ನೋಟುಗಳ ಹಾವಳಿ ನಿಂತಿಲ್ಲ ಏಕೆ..? : ಪ್ರಿಯಾಂಕ್‌ ಖರ್ಗೆ

ಬೆಂಗಳೂರು, ನ.15- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ನೋಟು ಅಮಾನ್ಯೀಕರಣದ ನಿರ್ಧಾರಕ್ಕೆ ಹತ್ತು ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನೋಟು ಅಮಾನ್ಯೀಕರಣ ವನ್ನು ಐತಿಹಾಸಿಕ ಸಾಧನೆ ಎಂದು ಬಣ್ಣಿಸಿದ್ದ ಪ್ರಧಾನಿ ಮೋದಿ, ಈ ನಿರ್ಧಾರದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮೌನವಾಗಿರುವುದು ಅಚ್ಚರಿ ಮೂಡಿಸಿದೆ ಎಂದು ಅವರು ಟೀಕಿಸಿದ್ದಾರೆ. ಕಪ್ಪುಹಣ ಮತ್ತು ನಕಲಿ ನೋಟುಗಳ ಹಾವಳಿ ತಡೆಗಟ್ಟುವ ಉದ್ದೇಶದಿಂದ ಜಾರಿಗೆ ತಂದಿದ್ದ ನೋಟು ಅಮಾನ್ಯೀಕರಣದ ಪರಿಣಾಮವಾಗಿ ನಿರೀಕ್ಷಿತ ಫಲಿತಾಂಶ ದೊರೆತಿಲ್ಲ ಎಂದು ಆರೋಪಿಸಿದ್ದಾರೆ.

ಆರ್‌ಬಿಐ ಬಿಡುಗಡೆ ಮಾಡಿರುವ ಅಂಕಿಅಂಶಗಳನ್ನು ಉಲ್ಲೇಖಿಸಿರುವ ಪ್ರಿಯಾಂಕ್‌ ಖರ್ಗೆ, 2025-26ನೇ ಹಣಕಾಸು ವರ್ಷದಲ್ಲಿ ಪತ್ತೆಯಾದ ನಕಲಿ 500 ರೂಪಾಯಿ ನೋಟುಗಳ ಸಂಖ್ಯೆ ಶೇ.20.5ರಷ್ಟು ಹೆಚ್ಚಾಗಿ 1,41,907ಕ್ಕೆ ತಲುಪಿದೆ. ಪ್ರತಿ ಒಂದು ಕೋಟಿ 500 ರೂಪಾಯಿ ನೋಟುಗಳ ಪೈಕಿ ಪತ್ತೆಯಾಗುತ್ತಿರುವ ನಕಲಿ ನೋಟುಗಳ ಪ್ರಮಾಣ 2016-17ರಲ್ಲಿ 0.3ರಷ್ಟಿದ್ದರೆ, 2025-26ರಲ್ಲಿ 20.1ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ನೋಟು ಅಮಾನ್ಯೀಕರಣಕ್ಕೂ ಮುನ್ನ ಸುಮಾರು 18 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದ ಚಲಾವಣೆಯಲ್ಲಿನ ನಗದು ಪ್ರಮಾಣ ಇದೀಗ 43 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಅಮಾನ್ಯಗೊಳಿಸಿದ್ದ ಒಟ್ಟು 15.31 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳಲ್ಲಿ ಶೇ.99.3ರಷ್ಟು ಹಣ ಬ್ಯಾಂಕಿಂಗ್‌ ವ್ಯವಸ್ಥೆಗೆ ಮರಳಿದೆ. ಹೀಗಾಗಿ ಕಪ್ಪುಹಣ ನಿರ್ಮೂಲನೆ ಹಾಗೂ ನಕಲಿ ನೋಟುಗಳ ನಿಯಂತ್ರಣದ ಉದ್ದೇಶ ಎಷ್ಟರಮಟ್ಟಿಗೆ ಈಡೇರಿದೆ ಎಂಬ ಪ್ರಶ್ನೆ ಎದುರಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ಲಕ್ಷಾಂತರ ಜನರು ತೊಂದರೆ ಅನುಭವಿಸಿದರು. ಜನಸಾಮಾನ್ಯರ ಜೀವನೋಪಾಯಕ್ಕೆ ಅಡ್ಡಿಯಾಯಿತು. ಆದರೆ ಕಪ್ಪುಹಣ ನಿರ್ಮೂಲನೆಯ ಭರವಸೆ ಸಾಕಾರಗೊಳ್ಳಲಿಲ್ಲ ಎಂದು ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ಸರ್ಕಾರದ ನೋಟು ಅಮಾನ್ಯೀಕರಣದ ನಿರ್ಧಾರವನ್ನು ದೇಶದ ಇತಿಹಾಸದಲ್ಲಿನ ದೊಡ್ಡ ನೀತಿ ವೈಫಲ್ಯಗಳಲ್ಲಿ ಒಂದೆಂದು ಟೀಕಿಸಿರುವ ಅವರು, ಜನರಿಗೆ ಅದನ್ನು ಮಹತ್ವದ ಸಾಧನೆ ಎಂದು ಬಿಂಬಿಸಲಾಗಿತ್ತು ಎಂದು ಹೇಳಿದ್ದಾರೆ.

ಆದರೆ, ನೋಟು ಅಮಾನ್ಯೀಕರಣದ ಪರಿಣಾಮಗಳ ಕುರಿತು ಆರ್‌ಬಿಐ ಅಂಕಿಅಂಶಗಳು ಮತ್ತು ಆರ್ಥಿಕ ವಿಶ್ಲೇಷಣೆಗಳಲ್ಲಿ ವಿಭಿನ್ನ ಆಯಾಮಗಳೂ ಚರ್ಚೆಯಾಗುತ್ತಿವೆ. ನಕಲಿ ನೋಟುಗಳ ಪತ್ತೆ ಪ್ರಮಾಣ ಹೆಚ್ಚಳವು ನಕಲಿ ನೋಟುಗಳ ಚಲಾವಣೆ ಹೆಚ್ಚಳವನ್ನೇ ಸೂಚಿಸುತ್ತದೆಯೇ ಅಥವಾ ಪತ್ತೆಹಚ್ಚುವ ಸಾಮರ್ಥ್ಯದ ಸುಧಾರಣೆಯ ಪರಿಣಾಮವೇ ಎಂಬುದನ್ನು ಅಂಕಿಅಂಶಗಳು ಮಾತ್ರದಿಂದ ನಿರ್ಧರಿಸಲಾಗದು ಎಂದಿದ್ದಾರೆ.

RELATED ARTICLES

Latest News