Homeರಾಷ್ಟ್ರೀಯಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : ನ.17ರ ವೇಳೆಗೆ ಚಂಡಮಾರುತ ಸಾಧ್ಯತೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : ನ.17ರ ವೇಳೆಗೆ ಚಂಡಮಾರುತ ಸಾಧ್ಯತೆ

ಚೆನ್ನೈ, ನ. 15- ಆಗ್ನೇಯ ಮತ್ತು ಅದಕ್ಕೆ ಹೊಂದಿಕೊಂಡ ನೈಋತ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ನ.17ರ ವೇಳೆಗೆ ತೀವ್ರ ಚಂಡಮಾರುತವಾಗಿ ಬಲಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇದರ ಪರಿಣಾಮವಾಗಿ ತಮಿಳುನಾಡಿನ ಉತ್ತರ ಕರಾವಳಿ ಜಿಲ್ಲೆಗಳು, ಪುದುಚೇರಿ ಮತ್ತು ಕಾರೈಕಲ್‌ ಪ್ರದೇಶಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯ ಇತ್ತೀಚಿನ ವರದಿ ಪ್ರಕಾರ, ಶನಿವಾರ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಗುರುತಿಸಲಾದ ವಾಯುಭಾರ ಕುಸಿತವು ವಾಯವ್ಯ ದಿಕ್ಕಿನತ್ತ ಚಲಿಸಿ ಮತ್ತಷ್ಟು ತೀವ್ರಗೊಂಡಿದೆ.

ಈ ಹವಾಮಾನ ವ್ಯವಸ್ಥೆಯು ವಾಯವ್ಯ ದಿಕ್ಕಿನತ್ತ ತನ್ನ ಚಲನೆ ಮುಂದುವರಿಸಲಿದ್ದು, ನ. 16ರಂದು ದಕ್ಷಿಣ ಬಂಗಾಳಕೊಲ್ಲಿಯ ಮಧ್ಯಭಾಗ ಮತ್ತು ಅದಕ್ಕೆ ಹೊಂದಿಕೊಂಡ ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತವಾಗಿ ಬಲಗೊಳ್ಳುವ ಸಾಧ್ಯತೆಯಿದೆ. ನ. 17ರ ವೇಳೆಗೆ ಇದು ತೀವ್ರ ಚಂಡಮಾರುತವಾಗಿ ರೂಪುಗೊಳ್ಳುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ತಮಿಳುನಾಡಿನ ಜಿಲ್ಲೆಗಳಲ್ಲದೆ, ರಾಜ್ಯದ ಪಶ್ಚಿಮ ಘಟ್ಟ ಪ್ರದೇಶಗಳು ಹಾಗೂ ದಕ್ಷಿಣ ಜಿಲ್ಲೆಗಳ ಕೆಲವು ಪ್ರತ್ಯೇಕ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇಂದು ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಚೆಂಗಲ್ಪಟ್ಟು, ಚೆನ್ನೈ, ಕಾಂಚೀಪುರಂ ಮತ್ತು ಕನ್ಯಾಕುಮಾರಿ ಸೇರಿದಂತೆ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

RELATED ARTICLES

Latest News