Homeರಾಜ್ಯಪತ್ನಿ ಎದುರೇ ರಿಯಲ್‌ ಎಸ್ಟೇಟ್‌ ಉದ್ಯಮಿ ಕೊಲೆ ಪ್ರಕರಣ : ಸುಪಾರಿ ಹಂತಕರು ಸೇರಿ 5...

ಪತ್ನಿ ಎದುರೇ ರಿಯಲ್‌ ಎಸ್ಟೇಟ್‌ ಉದ್ಯಮಿ ಕೊಲೆ ಪ್ರಕರಣ : ಸುಪಾರಿ ಹಂತಕರು ಸೇರಿ 5 ಮಂದಿ ಅರೆಸ್ಟ್

ಬೆಂಗಳೂರು,ನ.16- ಹಾಡಹಗಲೇ ರಿಯಲ್‌ ಎಸ್ಟೇಟ್‌ ಉದ್ಯಮಿಯನ್ನು ಪತ್ನಿ ಎದುರೇ ಭೀಕರವಾಗಿ ಕೊಲೆಗೈದು ಪರಾರಿಯಾಗಿದ್ದ ಸುಪಾರಿ ಹಂತಕರು ಸೇರಿದಂತೆ ಐದು ಮಂದಿಯನ್ನು ಯಲಹಂಕ ನ್ಯೂ ಟೌನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಿಯಲ್‌ ಎಸ್ಟೇಟ್‌ ವ್ಯವಹಾರದ ಪೈಪೋಟಿಯಲ್ಲಿ ಈ ಕೊಲೆ ನಡೆದಿದ್ದು, ಕಿರಣ್‌ಗೌಡ ಎಂಬಾತನೇ 30 ಲಕ್ಷಕ್ಕೆ ಸುಪಾರಿ ನೀಡಿ ಈ ಕೊಲೆ ಮಾಡಿಸಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ಸುಪಾರಿ ನೀಡಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ಕಿರಣ್‌ಗೌಡ(24), ಸುಪಾರಿ ಪಡೆದಿದ್ದ ರುದ್ರೇಶ್‌ (39), ಆತನೊಂದಿಗೆ ಕೈ ಜೋಡಿಸಿದ್ದ ಸ್ನೇಹಿತ ಲೋಕೇಶ್‌(47) ಮತ್ತು ಕೃತ್ಯ ಎಸಗಲು ನಿಯೋಜನೆಗೊಂಡಿದ್ದ ಆಕಾಶ್‌ (19) ಹಾಗೂ ಕಿರಣ್‌ಕುಮಾರ್‌(40) ಬಂಧಿತರು.

ಆರೋಪಿ ಲೋಕೇಶ್‌ ಹಾಗೂ ಕಿರಣ್‌ಗೌಡ ಅಪ್ಪ-ಮಗ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.ಗೌರಿಬಿದನೂರಿನಲ್ಲಿ ಚರಣ್‌ ರಿಯಲ್‌ ಎಸ್ಟೇಟ್‌ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಕಿರಣ್‌ಕುಮಾರ್‌ ಎಂಬಾತನ ಪರಿಚಯವಾಗಿದೆ. ಆತನೂ ಸಹ ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುತ್ತಿದ್ದಾನೆ.

ಕಿರಣ್‌ಕುಮಾರ್‌ ಯಾವುದಾದರೂ ಆಸ್ತಿ ಖರೀದಿಸಲು ಮುಂದಾದರೆ, ಚರಣ್‌ ಆ ಆಸ್ತಿಯನ್ನು ಹೆಚ್ಚಿನ ಹಣ ಕೊಟ್ಟು ಖರೀದಿಸುತ್ತಿದ್ದರು. ಇದರಿಂದ ತನ್ನ ವ್ಯವಹಾರದಲ್ಲಿ ನಷ್ಟ ಉಂಟಾಗುತ್ತಿದೆ ಎಂದು ಕಿರಣ್‌ಕುಮಾರ್‌ ಆತನ ಮೇಲೆ ದ್ವೇಷ ಸಾಧಿಸುತ್ತಿದ್ದನು.

ಹೇಗಾದರೂ ಮಾಡಿ ಚರಣ್‌ನನ್ನು ಮುಗಿಸಬೇಕೆಂದು ಎರಡು ವರ್ಷದ ಹಿಂದೆಯೇ ರುದ್ರೇಶ್‌ ಎಂಬಾತನಿಗೆ 15 ಲಕ್ಷ ಸುಪಾರಿ ಕೊಟ್ಟಿದ್ದ. ಆದರೆ ಅದು ಸಾಧ್ಯವಾಗಿರಲಿಲ್ಲ. ದಿನದಿಂದ ದಿನಕ್ಕೆ ಲಾಸ್‌‍ ಆಗುತ್ತಿದೆ ಎಂದು ಭಾವಿಸಿದ ಕಿರಣ್‌ಕುಮಾರ್‌ ಮತ್ತೆ ರುದ್ರೇಶ್‌ನನ್ನು ಸಂಪರ್ಕಿಸಿದ್ದಾನೆ. ಹಣ ಪಡೆದುಕೊಂಡರೂ ಚರಣ್‌ನನ್ನು ಮುಗಿಸಲಿಲ್ಲವೇಕೆ ಎಂದು ಪ್ರಶ್ನಿಸಿದಾಗ ಈಗ ಮುಗಿಸುತ್ತೇವೆ ಎಂದು ಹೇಳಿದ್ದಾನೆ. ಅದರಂತೆ ರುದ್ರೇಶ್‌ 30 ಲಕ್ಷಕ್ಕೆ ಸುಪಾರಿ ಪಡೆದಿದ್ದಾನೆ.

ಈ ಡೀಲ್‌ ಪಡೆದ ರುದ್ರೇಶ್‌ ಸ್ನೇಹಿತ ಲೋಕೇಶ್‌ ಜೊತೆ ಮಾತುಕತೆ ನಡೆಸಿದ್ದಾನೆ. ನಂತರ ಲೋಕೇಶ್‌ ತನ್ನ ಮಗ ಕಿರಣ್‌ಗೌಡ ಜೊತೆ ವಿಷಯ ತಿಳಿಸಿದ ನಂತರ ಕಿರಣ್‌ ಮತ್ತು ಆಕಾಶ್‌ ಎಂಬುವವರ ಮೂಲಕ ಚರಣ್‌ನನ್ನು ಹತ್ಯೆ ಮಾಡಿಸಲು ಸಂಚು ರೂಪಿಸಿದ್ದಾರೆ.

ಚರಣ್‌ ಚಲನವಲನಗಳನ್ನು ಗಮನಿಸಿದ್ದ ಹಂತಕರು ಅವರು ಕಚೇರಿಗೆ ಬರುವ ಸಮಯ, ಹೋಗುವ ಮಾರ್ಗ ಎಲ್ಲವನ್ನೂ ಕೂಲಂಕುಷವಾಗಿ ತಿಳಿದುಕೊಂಡಿದ್ದಾರೆ.ಅದರಂತೆ ನ.13 ರಂದು ಚರಣ್‌ ಪತ್ನಿಯೊಂದಿಗೆ ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ಕಚೇರಿ ಬಳಿ ಬಂದು ಕಾರು ನಿಲ್ಲಿಸಿ ಹೊರಬರುತ್ತಿದ್ದಂತೆ ಬೈಕ್‌ನಲ್ಲಿ ಬಂದು ಹೊಂಚು ಹಾಕಿ ಕುಳಿತಿದ್ದ ಹಂತಕರು ಏಕಾಏಕಿ ದಾಳಿ ಮಾಡಿ ತಲೆಗೆ ಮಾರಕಾಸ್ತ್ರಗಳಿಂದ ಬಲವಾಗಿ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು.

ಹಾಡಹಗಲೇ ನಡುರಸ್ತೆಯಲ್ಲಿಯೇ ರಿಯಲ್‌ ಎಸ್ಟೇಟ್‌ ಉದ್ಯಮಿಯ ಕೊಲೆ ನಡೆದಿರುವುದು ಯಲಹಂಕದ ಜನರನ್ನು ಬೆಚ್ಚಿಬೀಳಿಸಿತ್ತು.ಹಂತಕರ ಪತ್ತೆಗಾಗಿ ನಾಲ್ಕು ವಿಶೇಷ ತಂಡಗಳನ್ನು ಡಿಸಿಪಿ ಮಿಥುನ್‌ಕುಮಾರ್‌ರವರು ರಚಿಸಿದ್ದರು. ಈ ತಂಡಗಳು ಹಂತಕರ ಬಗ್ಗೆ ಹಲವು ಮಾಹಿತಿಗಳನ್ನು ಕಲೆ ಹಾಕಿವೆ.ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿನ ಸಿಸಿ ಕ್ಯಾಮೆರಾಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಅದರಲ್ಲಿರುವ ದೃಶ್ಯಾವಳಿಗಳನ್ನು ಆಧರಿಸಿ ಹಂತಕರ ಪತ್ತೆಗೆ ಬಲೆ ಬೀಸಲಾಗಿತ್ತು.

ಚರಣ್‌ ಅವರ ಉದ್ಯಮದ ವ್ಯವಹಾರಗಳ ಬಗ್ಗೆ, ಅವರು ಯಾರೊಂದಿಗೆ ಸಂಪರ್ಕದಲ್ಲಿದ್ದರು, ಯಾರೊಂದಿಗೆ ಮನಸ್ತಾಪ ಹೊಂದಿದ್ದರು ಎಂಬಿತ್ಯಾದಿ ಮಾಹಿತಿಗಳನ್ನು ಸಂಪೂರ್ಣವಾಗಿ ತನಿಖಾ ತಂಡ ಕಲೆ ಹಾಕಿ ಕೊನೆಗೂ ಸುಪಾರಿ ಕೊಟ್ಟ ಪ್ರಮುಖ ಆರೋಪಿ, ಡೀಲ್‌ ಪಡೆದ ಆರೋಪಿ, ಹಣಕ್ಕಾಗಿ ಈ ಕೃತ್ಯವೆಸಗಿದ ಆರೋಪಿಗಳೂ ಸೇರಿದಂತೆ ಒಟ್ಟು ಐದು ಮಂದಿಯನ್ನು ಬಂಧಿಸುವಲ್ಲಿ ಯಲಹಂಕ ನ್ಯೂಟೌನ್‌ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

RELATED ARTICLES

Latest News