Homeರಾಜ್ಯಮತ್ತಷ್ಟು ಕುಸಿದ ಚಿನ್ನ-ಬೆಳ್ಳಿ ದರಗಳು

ಮತ್ತಷ್ಟು ಕುಸಿದ ಚಿನ್ನ-ಬೆಳ್ಳಿ ದರಗಳು

ಬೆಂಗಳೂರು, ನ.16-ದೀಪಾವಳಿ ಹಬ್ಬದ ಬೆನ್ನಲ್ಲೇ ಚಿನ್ನ-ಬೆಳ್ಳಿ ದರಗಳು ಮತ್ತೆ ಕುಸಿತದ ಹಾದಿ ಹಿಡಿದಿದ್ದು, ಆಭರಣ ಪ್ರಿಯರು ಸಮಾಧಾನಪಡುವಂತಾಗಿದೆ. ದೀಪಾವಳಿಗೂ ಮುನ್ನ ಏರಿಕೆಯಾಗಿ ಆಭರಣ ಪ್ರಿಯರಿಗೆ ನಿರಾಸೆಯುಂಟು ಮಾಡಿದ್ದವು. ಆದರೆ ಹಬ್ಬದ ನಂತರ ಚಿನ್ನ-ಬೆಳ್ಳಿ ದರಗಳು ಇಳಿಮುಖವಾಗಿವೆ.ನ.10ರ ನಂತರ ಶುದ್ಧ ಚಿನ್ನ ಒಂದು ಗ್ರಾಂಗೆ 807 ರೂ. ಇಳಿಕೆಯಾಗಿದ್ದರೆ, ಕೇವಲ 27 ರೂ. ಮಾತ್ರ ಏರಿಕೆಯಾಗಿದೆ. ಬೆಳ್ಳಿ ಒಂದು ಕೆ.ಜಿ.ಗೆ 15 ಸಾವಿರ ರೂ. ಕಡಿಮೆಯಾಗಿದೆ.

ಆಭರಣ ಮಾರಾಟಗಾರರ ಪ್ರಕಾರ ಚಿನ್ನ-ಬೆಳ್ಳಿ ದರಗಳು ಸದ್ಯಕ್ಕೆ ಮತ್ತೆ ದುಬಾರಿ ದರದತ್ತ ಗಗನಮುಖಿಯಾಗಿ ನಾಗಾಲೋಟದಲ್ಲಿ ಓಡುವ ಸಾಧ್ಯತೆ ವಿರಳ. ಏರಿಳಿತವಾಗುತ್ತಾ ಇದೇ ದರ ಮುಂದುವರೆಯಬಹುದು. ಇಲ್ಲವೇ ಇನ್ನಷ್ಟು ಇಳಿಕೆಯಾಗಬಹುದು. ಎಲ್ಲದಕ್ಕೂ ಜಾಗತಿಕವಾಗಿ ನಡೆಯುವ ವಿದ್ಯಮಾನಗಳ ಮೇಲೆ ಚಿನಿವಾರಪೇಟೆ ಅವಲಂಬಿತವಾಗಿದೆ ಎಂಬುದು ವರ್ತಕರ ಅಭಿಪ್ರಾಯ.

ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ ಕಳೆದ ಆರು ತಿಂಗಳಲ್ಲೇ ಚಿನ್ನ ಇಂದು ಕನಿಷ್ಠ ದರಕ್ಕೆ ಕುಸಿದಿದೆ. 24 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ ಇಂದು 82 ರೂ. ಕಡಿಮೆಯಾಗಿದ್ದು, ಪ್ರಸ್ತುತ 13, 680 ರೂ. ನಷ್ಟಿದೆ. 22 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ ಇಂದು 75 ರೂ ಇಳಿಕೆಯಾಗಿದ್ದು, 12,540 ರೂ. ನಷ್ಟಿದೆ. 18 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 62 ರೂ. ಕಡಿಮೆಯಾಗಿ 10,260 ರೂ.ಗೆ ಇಳಿದಿದೆ.

ಚಿನ್ನದಂತೆ ಪ್ಲಾಟಿನಮ್‌ ಆಭರಣವೂ ಕುಸಿತವಾಗಿದ್ದು, 10 ಗ್ರಾಂಗೆ 440 ರೂ. ಕಡಿಮೆಯಾಗಿ 44,620 ರೂ.ನಷ್ಟಿದೆ. ಇನ್ನು ಬೆಳ್ಳಿ ದರವು ಒಂದು ಕೆ.ಜಿ.ಗೆ ಇಂದು 5 ಸಾವಿರ ರೂ. ಕುಸಿತವಾಗಿದ್ದು, 1.90 ಲಕ್ಷ ರೂ. ನಷ್ಟಿದೆ. ನ.10ರ ನಂತರ ಮೂರು ಬಾರಿ ಒಟ್ಟು 15 ಸಾವಿರ ರೂ.ನಷ್ಟು ಒಂದು ಕೆ.ಜಿ.ಬೆಳ್ಳಿಗೆ ಕಡಿಮೆಯಾಗಿದೆ.

RELATED ARTICLES

Latest News