ಬೆಂಗಳೂರು, ನ.16- ಸೈಬರ್ ವಂಚನೆಗಳ ಸ್ವರೂಪ ದಿನೇ ದಿನೇ ಬದಲಾಗುತ್ತಿದ್ದು, ಇತ್ತೀಚೆಗೆ ಗೇಮ್ವೊಂದರ ಹೆಸರಿನಲ್ಲಿ ಅಮಾಯಕರನ್ನು ವಂಚಿಸಲು ಸಂಚು ನಡೆಸಿರುವುದು ಕಂಡು ಬರುತ್ತಿದೆ. ಸೈಬರ್ ವಂಚಕರು ನಕಲಿ ಖಾತೆಗಳನ್ನು ಸೃಷ್ಟಿಸಿ, ಉದ್ದುದ್ದ ಲೇಖನ ಬರೆದು ಪೋಸ್ಟ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮಾರುಕಟ್ಟೆ ವ್ಯವಸ್ಥೆ ಮೂಲಕ ಈ ಲೇಖನಗಳು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವವರಿಗೆ ಪದೇ ಪದೇ ಗೋಚರಿಸುತ್ತವೆ. ಪರಿಚಿತ ಹೆಸರಿನಲ್ಲಿರುವ ಖಾತೆಯಲ್ಲಿಯೇ ಈ ರೀತಿಯ ಲೇಖನ ಇರುವುದರಿಂದ ಸಹಜವಾದ ಕುತೂಹಲ ಹೆಚ್ಚುತ್ತದೆ ಮತ್ತು ಓದುವಂತೆ ಮಾಡುತ್ತದೆ.
ಆ ಲೇಖನದಲ್ಲಿ ಹುಡುಗಿಯೊಬ್ಬಳು ಹೊಟ್ಟೆಯ ಮೇಲೆ ನಾಣ್ಯ ವೊಂದಕ್ಕೆ ಮಿಂಚು ಹೊಡೆದ ಚಿತ್ರದ ಟ್ಯಾಟೂ ಹಾಕಿಸಿಕೊಂಡಿರುವ ಫೋಟೊವೊಂದನ್ನು ಲಗತ್ತಿಸಲಾಗಿರುತ್ತದೆ. ಬೇರೆ ಬೇರೆ ಪ್ರಮುಖ ವೃತ್ತಿಯಲ್ಲಿರುವರ ಹೆಸರಿನಲ್ಲಿ ಈ ಲೇಖನಗಳು ಪ್ರಕಟಗೊಳ್ಳುತ್ತಿವೆ.,ಕೆಲವರ ಖಾತೆಯಲ್ಲಿ ಹುಡುಗಿಯ ಸಪೂರ ಹೊಟ್ಟೆಯ ಮೇಲೆ ಟ್ಯಾಟೂ ಹಾಕಿಸಿದ್ದರೆ, ವೈದ್ಯರ ಹೆಸರಿನ ಖಾತೆಗಳಲ್ಲಿ ತುಂಬು ಗರ್ಭಿಣಿಯ ಹೊಟ್ಟೆಯ ಮೇಲೆ ಟ್ಯಾಟೂ ಹಾಕಿಸಿರುವ ಫೋಟೋ ಇರುತ್ತದೆ. ಇದರೊಂದಿಗಿರುವ ಲೇಖನವನ್ನು ಓದಿದರೆ, ನೈಜ ಘಟನೆ ಎಂಬಂತೆ ಭಾಸವಾಗುತ್ತದೆ.
ಟ್ಯಾಟೂ ಹಾಕಿಸಿಕೊಂಡ ಯುವತಿ ಅಥವಾ ಮಹಿಳೆ ಕಷ್ಟದಲ್ಲಿದ್ದ ಸಂದರ್ಭದಲ್ಲಿ ಬಂದಂತಹ ಲಿಂಕ್ ಅನ್ನು ಕ್ಲಿಕ್ ಮಾಡಿ, ಹಣ ಠೇವಣಿ ಮಾಡಿ, ಆಟವಾಡಿದ್ದರಿಂದ ಲಕ್ಷಾಂತರ ರೂ. ಗಳನ್ನು ಕೆಲವೇ ಗಂಟೆಗಳಲ್ಲಿ ಗಳಿಸಿದ ಅನುಭವವನ್ನು ಹಂಚಿಕೊಳ್ಳಲಾಗಿದೆ.
ಲಕ್ಷಾಂತರ ರೂ. ಹಣ ಬಂದ ಮೇಲೆ ವೈದ್ಯ ವೃತ್ತಿಗೆ ರಾಜೀನಾಮೆ ನೀಡಿದ್ದಾಗಿಯೂ ಬರೆದುಕೊಳ್ಳಲಾಗಿರುತ್ತದೆ. ಎಂಜಿನಿಯರ್ಗಳು, ವೈದ್ಯರು, ಕಲಾವಿದರ ಹೆಸರಿನ ಖಾತೆಗಳಲ್ಲಿ ಈ ಲೇಖನಗಳು ಹರಿದಾಡುತ್ತಿವೆ.
ಒಂದಷ್ಟು ಜನ ಪರಿಚಿತರ ಹೆಸರಿನಲ್ಲೇ ಅದಕ್ಕೆ ಕಾಮೆಂಟ್ಗಳನ್ನು ಹಾಕಲಾಗುತ್ತಿದ್ದು, ತಾವು ಲಕ್ಷಾಂತರ ರೂ. ಗಳಿಸಿದ್ದೇವೆ ಎಂದು ಹೇಳಿಕೊಂಡಿರುತ್ತಾರೆ. ಕಾಮೆಂಟ್ ಬಾಕ್್ಸನಲ್ಲಿ ಲಿಂಕ್ ಇರುತ್ತದೆ. ಅದರ ಮೂಲಕ ನೀವು ಸಂಪಾದನೆ ಮಾಡಿ ಎಂದು ಪ್ರಚೋದಿಸಲಾಗುತ್ತಿದೆ.
ಈ ರೀತಿ ಲೇಖನಗಳ ಮೂಲಕ ಜನರನ್ನು ವಂಚಿಸುವ ಹೊಸ ಪರಿಪಾಠ ಆರಂಭವಾಗಿದೆ. ಪರಿಚಿತರು ಮತ್ತು ಖ್ಯಾತನಾಮರ ಹೆಸರಿನಲ್ಲೇ ಖಾತೆ ಇರುವುದರಿಂದ ಈ ಲೇಖನ ಬಹುಶಃ ಸತ್ಯ ಇರಬಹುದು ಎಂದು ಬಹಳಷ್ಟು ಜನ ನಂಬಿ ಮೋಸಹೋಗುತ್ತಿದ್ದಾರೆ. ಲಿಂಕ್ ಕ್ಲಿಕ್ ಮಾಡಿ ಆಟವಾಡಲು ಹೋಗಿ ಹಣ ಕಳೆದುಕೊಳ್ಳುತ್ತಿದ್ದಾರೆ. ಎಷ್ಟೇ ಜಾಗೃತಿ ಮೂಡಿಸಿದರೂ ಸೈಬರ್ ವಂಚಕರು ರಂಗೋಲಿ ಕೆಳಗೆ ನುಸುಳಿ ಜನರನ್ನು ಯಾಮಾರಿಸುತ್ತಲೇ ಇರುವುದು ದೊಡ್ಡ ಸವಾಲಾಗಿದೆ.
