ಮುಂಬೈ, ನ.17- ಕಚ್ಚಾ ತೈಲ ಬೆಲೆ ಇಳಿಕೆ, ವಿದೇಶಿ ಹೂಡಿಕೆದಾರರಿಂದ ಹೆಚ್ಚಿನ ಬಂಡವಾಳ ಹರಿವು ಹಾಗೂ ದೇಶೀಯ ಷೇರು ಮಾರುಕಟ್ಟೆಯಲ್ಲಿನ ಸಕಾರಾತ್ಮಕ ವಹಿವಾಟಿನ ಬೆಂಬಲದಿಂದ ಇಂದು ಆರಂಭಿಕ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ 31 ಪೈಸೆ ಏರಿಕೆಯಾಗಿ 93.63ಕ್ಕೆ ತಲುಪಿದೆ.
ಬ್ರೆಂಟ್ ಕಚ್ಚಾ ತೈಲ ಬೆಲೆ ಇಳಿಕೆಯಿಂದ ಭಾರತದ ಆಮದು ವೆಚ್ಚ ಹೆಚ್ಚಾಗುವ ಆತಂಕ ಕಡಿಮೆಯಾಗಿದೆ ಎಂದು ವಿದೇಶಿ ವಿನಿಮಯ ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ. ಇದರ ಜೊತೆಗೆ, ಈ ತಿಂಗಳಿನಲ್ಲಿ ಇದುವರೆಗೆ ಭಾರತೀಯ ಷೇರು ಮಾರುಕಟ್ಟೆಗೆ 8 ಬಿಲಿಯನ್ ಡಾಲರ್ಗೂ ಅಧಿಕ ವಿದೇಶಿ ಸಾಂಸ್ಥಿಕ ಹೂಡಿಕೆ ಹರಿದುಬಂದಿರುವುದು ಹಾಗೂ ದೇಶೀಯ ಷೇರು ಸೂಚ್ಯಂಕಗಳಲ್ಲಿನ ಏರಿಕೆ ಹೂಡಿಕೆದಾರರ ಉತ್ಸಾಹ ಹೆಚ್ಚಿಸಿದೆ.
ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯವು ಡಾಲರ್ ಎದುರು 93.72ರಲ್ಲಿ ವಹಿವಾಟು ಆರಂಭಿಸಿತು. ಬಳಿಕ ಚೇತರಿಕೆ ಕಂಡು 93.63ಕ್ಕೆ ತಲುಪಿತು. ಹಿಂದಿನ ವಹಿವಾಟಿನ ಮುಕ್ತಾಯದ ಮಟ್ಟಕ್ಕೆ ಹೋಲಿಸಿದರೆ ಇದು 31 ಪೈಸೆಯ ಏರಿಕೆಯಾಗಿದೆ.
ಮೀರೇ ಅಸೆಟ್ ಶೇರ್ಖಾನ್ನ ಸಂಶೋಧನಾ ವಿಶ್ಲೇಷಕ ಅನುಜ್ ಚೌಧರಿ ಮಾತನಾಡಿ, ಕಚ್ಚಾ ತೈಲ ಬೆಲೆ ಇಳಿಕೆಯಿಂದ ಹಣದುಬ್ಬರದ ಆತಂಕ ಕಡಿಮೆಯಾಗುತ್ತಿರುವುದು ಮತ್ತು ದೇಶೀಯ ಮಾರುಕಟ್ಟೆಯ ಬಲದಿಂದ ರೂಪಾಯಿ ಸಕಾರಾತ್ಮಕವಾಗಿ ವಹಿವಾಟು ನಡೆಸುವ ನಿರೀಕ್ಷೆಯಿದೆ. ವಿದೇಶಿ ಸಾಂಸ್ಥಿಕ ಹೂಡಿಕೆಗಳ ಹರಿವು ಹಾಗೂ ಅಮೆರಿಕ ಮತ್ತು ಇರಾನ್ ನಡುವಿನ ದೊಡ್ಡ ಪ್ರಮಾಣದ ದಾಳಿಗಳ ಆತಂಕ ಕಡಿಮೆಯಾಗಿರುವುದೂ ರೂಪಾಯಿಗೆ ಬೆಂಬಲ ನೀಡಬಹುದು. ಆದರೆ, ಡಾಲರ್ನ ಬಲವರ್ಧನೆ ಮತ್ತು ಅಮೆರಿಕದ ಟ್ರೆಷರಿ ಬಾಂಡ್ಗಳ ಇಳುವರಿಯಲ್ಲಿನ ಏರಿಕೆ ರೂಪಾಯಿಯ ಹೆಚ್ಚಿನ ಚೇತರಿಕೆಗೆ ಮಿತಿ ವಿಧಿಸಬಹುದು ಎಂದು ಹೇಳಿದರು.
ಇದೇ ವೇಳೆ, ಆರು ಪ್ರಮುಖ ಕರೆನ್ಸಿಗಳ ಎದುರು ಅಮೆರಿಕನ್ ಡಾಲರ್ನ ಬಲವನ್ನು ಅಳೆಯುವ ಡಾಲರ್ ಸೂಚ್ಯಂಕ ಶೇ.0.04ರಷ್ಟು ಏರಿಕೆಯಾಗಿ 103.50ಕ್ಕೆ ತಲುಪಿತ್ತು.
ಜಾಗತಿಕ ಕಚ್ಚಾ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ಭವಿಷ್ಯದ ವಹಿವಾಟಿನ ಬೆಲೆ ಶೇ.0.79ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್ಗೆ 91.71 ಡಾಲರ್ಗೆ ತಲುಪಿತ್ತು. ಜಾಗತಿಕವಾಗಿ ಕಚ್ಚಾ ತೈಲದ ಪೂರೈಕೆ ಬೇಡಿಕೆಗಿಂತ ಹೆಚ್ಚಾಗುವ ಆತಂಕದಿಂದ ಬ್ರೆಂಟ್ ತೈಲ ಬೆಲೆಯಲ್ಲಿ ತೀವ್ರ ಇಳಿಕೆ ಮುಂದುವರಿದಿದೆ ಎಂದು ಫಿನ್ರೆಕ್ಸ್ ಟ್ರೆಷರಿ ಅಡ್ವೈಸರ್ಸ್ ಎಲ್ಎಲ್ಪಿಯ ಖಜಾನೆ ವಿಭಾಗದ ಮುಖ್ಯಸ್ಥ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಭನ್ಸಾಲಿ ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಇಂಧನ ಸಂಸ್ಥೆಯ (IEA) ಅಂದಾಜಿನ ಪ್ರಕಾರ, ನಾಲ್ಕನೇ ತ್ರೈಮಾಸಿಕದಲ್ಲಿ ದಿನಕ್ಕೆ ಸುಮಾರು 20 ಲಕ್ಷ ಬ್ಯಾರೆಲ್ಗಳಷ್ಟು ಕಚ್ಚಾ ತೈಲದ ಹೆಚ್ಚುವರಿ ಪೂರೈಕೆಯಾಗುವ ಸಾಧ್ಯತೆಯಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಮಧ್ಯಪ್ರಾಚ್ಯದ ಕಚ್ಚಾ ತೈಲ ಸಾಗಣೆ ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿರುವುದು ಹಾಗೂ ಚೀನಾದಲ್ಲಿ ತೈಲ ಬೇಡಿಕೆ ದುರ್ಬಲಗೊಳ್ಳುತ್ತಿರುವ ಸೂಚನೆಗಳು ಬೆಲೆ ಇಳಿಕೆಗೆ ಕಾರಣವಾಗಿವೆ ಎಂದು ಅವರು ವಿವರಿಸಿದ್ದಾರೆ.
