ಕಠಂಡು, ನ. 18 (ಪಿಟಿಐ): ಜಲವಿದ್ಯುತ್ ಉತ್ಪಾದನೆಯಲ್ಲಿನ ಇಳಿಕೆ ಮತ್ತು ಇತ್ತೀಚಿನ ಪ್ರವಾಹದಿಂದಾಗಿ ಹಲವಾರು ಯೋಜನೆಗಳಿಗೆ ಉಂಟಾದ ಹಾನಿಯ ಹಿನ್ನೆಲೆಯಲ್ಲಿ ಭಾರತದಿಂದ 350 ಮೆಗಾವ್ಯಾಟ್ ವಿದ್ಯುತ್ ಆಮದು ಮಾಡಿಕೊಳ್ಳಲು ನೇಪಾಳಕ್ಕೆ ಅನುಮತಿ ದೊರೆತಿದೆ.
ಭಾರತದ ವಿದ್ಯುತ್ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ವಿದ್ಯುತ್ ಪ್ರಾಧಿಕಾರವು ನೇಪಾಳದ ಸರ್ಕಾರಿ ಸ್ವಾಮ್ಯದ ವಿದ್ಯುತ್ ಸಂಸ್ಥೆಯಾದ ನೇಪಾಳ ವಿದ್ಯುತ್ ಪ್ರಾಧಿಕಾರಕ್ಕೆ ಭಾರತೀಯ ಇಂಧನ ವಿನಿಮಯ ಕೇಂದ್ರದಿಂದ ಸ್ಪರ್ಧಾತ್ಮಕ ದರಗಳಲ್ಲಿ ದಿನಕ್ಕೆ 17 ಗಂಟೆಗಳವರೆಗೆ ವಿದ್ಯುತ್ ಖರೀದಿಸಲು ಅನುಮತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ವಿದ್ಯುತ್ ಬೇಡಿಕೆ ಮತ್ತು ದೇಶೀಯ ಉತ್ಪಾದನೆಯ ನಡುವಿನ ಅಂತರವನ್ನು (ಋತುಮಾನಕ್ಕೆ ಅನುಗುಣವಾಗಿ ಉಂಟಾಗುವ ಕೊರತೆಯನ್ನು) ನಿರ್ವಹಿಸಲು ನೇಪಾಳಕ್ಕೆ ಸಹಾಯ ಮಾಡುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕ ದಿರ್ಘಾಯು ಕುಮಾರ್ ಶ್ರೇಷ್ಠ ಹೇಳಿದ್ದಾರೆ.
ಅನುಮೋದಿತ 350 ಮೆಗಾವ್ಯಾಟ್ ವಿದ್ಯುತ್ ಪೈಕಿ, ನೇಪಾಳವು ಕಟೈಯಾ-ಕುಶಾಹಾ, ರಾಮನಗರ-ಸುರಜ್ಪುರ ಮತ್ತು ರಕ್ಸೌಲ್-ಪರ್ವಾನಿಪುರ ಪ್ರಸರಣ ಮಾರ್ಗಗಳ ಮೂಲಕ 300 ಮೆಗಾವ್ಯಾಟ್ ವಿದ್ಯುತ್ ಅನ್ನು ಆಮದು ಮಾಡಿಕೊಳ್ಳಬಹುದು. ಉಳಿದ 50 ಮೆಗಾವ್ಯಾಟ್ ವಿದ್ಯುತ್ ಅನ್ನು ನ್ಯೂ ನೌತನ್ವಾ-ಮೈನಾಹಿಯಾ ಪ್ರಸರಣ ಮಾರ್ಗದ ಮೂಲಕ ಪಡೆಯಬಹುದು.
ನೇಪಾಳವು ನದಿ ಹರಿವಿನ ಆಧರಿತ ಜಲವಿದ್ಯುತ್ ಯೋಜನೆಗಳನ್ನು ಹೆಚ್ಚು ಅವಲಂಬಿಸಿರುವುದರಿಂದ, ಅಲ್ಲಿನ ವಿದ್ಯುತ್ ಉತ್ಪಾದನೆಯು ಋತುಮಾನದ ಮೇಲೆ ತೀವ್ರವಾಗಿ ಅವಲಂಬಿತವಾಗಿದೆ. ಬೇಸಿಗೆಯ ತಿಂಗಳುಗಳಲ್ಲಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾದಾಗ, ದೇಶವು ಹೆಚ್ಚುವರಿ ವಿದ್ಯುತ್ ಉತ್ಪಾದಿಸಿ ಭಾರತದಂತಹ ನೆರೆಯ ದೇಶಗಳಿಗೆ ರಫ್ತು ಮಾಡಲು ಸಾಧ್ಯವಾಗುತ್ತದೆ.
