Homeರಾಜ್ಯಬೆಂಗಳೂರಲ್ಲಿ ಫ್ರಾನ್ಸ್ ವಿಮಾನ ಉತ್ಪಾದನಾ ಘಟಕ ಸ್ಥಾಪನೆ

ಬೆಂಗಳೂರಲ್ಲಿ ಫ್ರಾನ್ಸ್ ವಿಮಾನ ಉತ್ಪಾದನಾ ಘಟಕ ಸ್ಥಾಪನೆ

ಬೆಂಗಳೂರು, ನ.18- ಜಾಗತಿಕ ವಿಮಾನಯಾನ ಮತ್ತು ರಕ್ಷಣಾ ಕ್ಷೇತ್ರದ ಪ್ರಮುಖ ಫ್ರಾನ್‌್ಸ ಮೂಲದ ಸಫ್ರಾನ್‌ ಸಂಸ್ಥೆಯು ಫ್ರಾನ್ಸ್ ಹೊರಗೆ ತನ್ನ ಮೊದಲ ವಿಮಾನಯಾನ ವಿದ್ಯುನಾನ ಉತ್ಪಾದನಾ ಘಟಕ ಸ್ಥಾಪಿಸಲು ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿದೆ.

ನಗರದ ಕೆಐಎಡಿಬಿ ಏರೋಸ್ಪೇಸ್‌‍ ಪಾರ್ಕ್‌ನಲ್ಲಿ 250 ಕೋಟಿ ರೂ. ಹೂಡಿಕೆಯಲ್ಲಿ ಈ ಘಟಕ ಸ್ಥಾಪನೆಯಾಗುತ್ತಿದ್ದು, 2027ರ ಜನವರಿ 6ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಉದ್ಘಾಟಿಸಲಿದ್ದಾರೆ.ಸಫ್ರಾನ್‌ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ದೇಶದ ಮುಖ್ಯಸ್ಥ ಜೆ.ಎಸ್‌‍. ಗವಾಂಕರ್‌ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ.

ಸುಮಾರು 12,000 ಚದರ ಮೀಟರ್‌ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿರುವ ಘಟಕದಲ್ಲಿ ರಫೇಲ್‌ ಯುದ್ಧ ವಿಮಾನಗಳಿಗೆ ಅಗತ್ಯವಿರುವ ರಕ್ಷಣಾ ವಿದ್ಯುನಾನ ಉಪಕರಣಗಳನ್ನು ತಯಾರಿಸಲಾಗುತ್ತದೆ. 2030ರ ವೇಳೆಗೆ ವಾರ್ಷಿಕ ಸುಮಾರು 30,000 ಉಪಕರಣಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದುವ ಗುರಿ ಇದೆ.

ಈ ಘಟಕದಿಂದ ಸುಮಾರು 400 ಮಂದಿಗೆ ಉದ್ಯೋಗಾವಕಾಶ ದೊರೆಯಲಿದೆ. ಬೆಂಗಳೂರಿನ ಕಲ್ಯಾಣಿ ಟೆಕ್‌ ಪಾರ್ಕ್‌ನಲ್ಲಿರುವ ಸಫ್ರಾನ್‌ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನೂ ವಿಸ್ತರಿಸಲಾಗುತ್ತಿದ್ದು, ವಿಮಾನಯಾನ ವಿದ್ಯುನಾನ ಹಾಗೂ ನಿಯಂತ್ರಣ ವ್ಯವಸ್ಥೆಗಳ ವಿಭಾಗದಲ್ಲಿ ಸುಮಾರು 250 ಎಂಜಿನಿಯರ್‌ಗಳು ಮತ್ತು ತಂತ್ರಜ್ಞರು ಕಾರ್ಯನಿರ್ವಹಿಸಲಿದ್ದಾರೆ.

ಸಫ್ರಾನ್‌ ಸಂಸ್ಥೆ ಭಾರತದಲ್ಲಿ 70 ವರ್ಷಗಳಿಗೂ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸುತ್ತಿದ್ದು, ದೇಶಾದ್ಯಂತ 18 ಘಟಕಗಳನ್ನು ಹೊಂದಿದೆ. ವಿಮಾನಯಾನ ವಿದ್ಯುನಾನ, ಎಂಜಿನಿಯರಿಂಗ್‌ ಮತ್ತು ರಕ್ಷಣಾ ವ್ಯವಸ್ಥೆಗಳ ಪ್ರಮುಖ ಕೇಂದ್ರವಾಗಿ ಬೆಂಗಳೂರು ಗುರುತಿಸಿಕೊಂಡಿದೆ. ದೇವನಹಳ್ಳಿಯಲ್ಲಿರುವ ಸಫ್ರಾನ್‌ ಎಚ್‌ಎಎಲ್‌ ವಿಮಾನ ಎಂಜಿನ್‌ ಘಟಕದಲ್ಲಿ ಹೆಲಿಕಾಪ್ಟರ್‌ ಎಂಜಿನ್‌ಗಳ ಬಿಡಿಭಾಗಗಳನ್ನು ತಯಾರಿಸಲಾಗುತ್ತಿದೆ. ಫ್ರಾನ್ಸ್ ಮೂಲದ ಸಫ್ರಾನ್‌ ಜಾಗತಿಕ ವಿಮಾನಯಾನ ಮತ್ತು ರಕ್ಷಣಾ ಉದ್ಯಮದ ಪ್ರಮುಖ ಸಂಸ್ಥೆಯಾಗಿದ್ದು, 30ಕ್ಕೂ ಹೆಚ್ಚು ದೇಶಗಳಲ್ಲಿ 1.10 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದೆ.

2025ರಲ್ಲಿ ಸಂಸ್ಥೆಯ ಹೊಂದಾಣಿಕೆಯ ಆದಾಯ 31.33 ಶತಕೋಟಿ ಯುರೋಗಳಷ್ಟಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.15ರಷ್ಟು ಬೆಳವಣಿಗೆ ದಾಖಲಿಸಿದೆ.ಬೆಂಗಳೂರಿನಲ್ಲಿ ಈ ಘಟಕ ಸ್ಥಾಪನೆಯಾಗುತ್ತಿರುವುದು ರಾಜ್ಯದ ವಿಮಾನಯಾನ ಮತ್ತು ರಕ್ಷಣಾ ಉತ್ಪಾದನಾ ವಲಯಕ್ಕೆ ಹೊಸ ಹೂಡಿಕೆ ಹಾಗೂ ಉದ್ಯೋಗಾವಕಾಶಗಳನ್ನು ತರುವ ನಿರೀಕ್ಷೆಯಿದೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ.

RELATED ARTICLES

Latest News