ನವದೆಹಲಿ, ನ. 19 (ಪಿಟಿಐ): ಭಾರತೀಯ ಪ್ರಜಾಪ್ರಭುತ್ವವು ಅನಾರೋಗ್ಯಪೀಡಿತವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆನ್ನಲಾದ ವಿಷಯದ ಕುರಿತು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಅವರು ಭಾರತ ವಿರೋಧಿ ಪ್ರಚಾರದಲ್ಲಿ ತೊಡಗಿದ್ದಾರೆ ಮತ್ತು ವಿದೇಶಿ ನೆಲದಿಂದ ದೇಶದ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಅವರು, ರಾಹುಲ್ ಗಾಂಧಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆನ್ನಲಾದ ವಿಡಿಯೋವೊಂದನ್ನು ಎಕ್್ಸನಲ್ಲಿ ಹಂಚಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕ ಮತ್ತೊಮ್ಮೆ ತಮಗೆ ಕುಟುಂಬದ ಮೇಲೆ ಪ್ರೀತಿ ಇದೆ, ಆದರೆ ಪ್ರಜಾಪ್ರಭುತ್ವದ ಮೇಲೆ ದ್ವೇಷವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಬುಧವಾರ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಭಾರತೀಯ ಪ್ರಜಾಪ್ರಭುತ್ವವು ಅನಾರೋಗ್ಯಪೀಡಿತವಾಗಿದೆ. ಭಾರತೀಯ ಪ್ರಜಾಪ್ರಭುತ್ವದಲ್ಲಿ ಸಮಸ್ಯೆ ಇದೆ ಎಂದು ಹೇಳಬೇಕೆಂದರೆ, ಅದಕ್ಕೆ 100, 200 ಅಥವಾ 300 ಪ್ರತಿಶತದಷ್ಟು ಸಾಕ್ಷ್ಯಾಧಾರಗಳಿಲ್ಲದೆ ಹೇಳುವುದು ಕಷ್ಟ. ಆದರೆ, ವಿರೋಧ ಪಕ್ಷದ ಕಾರ್ಯಕರ್ತರ ಗತಿಯೇನು…? ಎಂದು ಪ್ರಶ್ನಿಸಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ.
ಪ್ರತಿ ಬಾರಿಯೂ ರಾಹುಲ್ ಗಾಂಧಿ ಅವರು ಭಾರತೀಯ ರಾಷ್ಟ್ರಕ್ಕೆ, ಭಾರತದ ಜನರಿಗೆ ಮತ್ತು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತಾರೆ. ರಾಹುಲ್ ಗಾಂಧಿ ಅವರು ಭಾರತ ವಿರೋಧಿ ಪ್ರಚಾರದ ನಾಯಕರಾಗಿದ್ದಾರೆ, ಎಂದು ಭಂಡಾರಿ ಹೇಳಿದರು.
ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ಕೂಡ ಲೋಕಸಭೆಯ ವಿರೋಧ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ವಿದೇಶಿ ನೆಲದಲ್ಲಿ ಭಾರತದ ಚುನಾವಣಾ ಪ್ರಕ್ರಿಯೆಯ ಘನತೆಯನ್ನು ಹಾಳುಮಾಡಲು ಅವರು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ ಕೇಶವನ್, ರಾಹುಲ್ ಅವರ ಹೇಳಿಕೆಗಳು ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಅವಜ್ಞೆಯನ್ನು ಮತ್ತು ದೇಶದ ಪ್ರಜಾಪ್ರಭುತ್ವ ಪ್ರಕ್ರಿಯೆಯ ಬಗ್ಗೆ ತಿರಸ್ಕಾರವನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.
ಎಕ್್ಸನಲ್ಲಿ ಪೋಸ್ಟ್ ಮಾಡಿರುವ ಕೇಶವನ್, ಚುನಾವಣಾ ಪ್ರಕ್ರಿಯೆಯ ಕುರಿತಾದ ತಮ್ಮ ಆರೋಪಗಳನ್ನು ಸಮರ್ಥಿಸಿಕೊಳ್ಳಲು ರಾಹುಲ್ ಗಾಂಧಿ ಯಾವುದೇ ಪ್ರಮಾಣಪತ್ರವನ್ನು (ಅಫಿಡವಿಟ್) ಸಲ್ಲಿಸಿಲ್ಲ ಎಂದು ತಿಳಿಸಿದರು. 2014ರ ಚುನಾವಣೆಗಳ ಕುರಿತು ರಾಹುಲ್ ಗಾಂಧಿ ನೀಡಿರುವ ಹೇಳಿಕೆಗಳು ತರ್ಕಹೀನ ಮತ್ತು ಭ್ರಮಾತ್ಮಕ ಮಾತುಗಳಾಗಿವೆ. ಏಕೆಂದರೆ, 2014ರ ಚುನಾವಣೆಗಳು ನಡೆದಾಗ ಅಧಿಕಾರದಲ್ಲಿದ್ದುದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವೇ ಆಗಿತ್ತು, ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ಅವರಿಗೆ ಆಯ್ದ ಸಂದರ್ಭಗಳಲ್ಲಿ ಮಾತ್ರ ನೆನಪಿನ ಶಕ್ತಿ ಕಳೆದುಕೊಳ್ಳುವ ಕಾಯಿಲೆ ಇದೆ ಎಂದು ಆರೋಪಿಸಿದ ಕೇಶವನ್, ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಸೋತಾಗ ಮಾತ್ರ ಅವರು ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಾರೆ, ಆದರೆ ಕೆಲವು ರಾಜ್ಯಗಳಲ್ಲಿ ಪಕ್ಷ ಗೆದ್ದಾಗ ಮೌನವಾಗಿರುತ್ತಾರೆ ಎಂದು ಟೀಕಿಸಿದರು. ಚುನಾವಣೆಗಳ ನಂತರ ಚುನಾವಣೆಗಳಲ್ಲಿ ರಾಹುಲ್ ಗಾಂಧಿ ಅವರು ಸಂಪೂರ್ಣವಾಗಿ ವಿಫಲರಾಗುತ್ತಿದ್ದಾರೆ (ಕ್ಲೀನ್ ಬೌಲ್ಡ್ ಆಗುತ್ತಿದ್ದಾರೆ) ಮತ್ತು ಜನರಿಂದ ತಿರಸ್ಕರಿಸಲ್ಪಡುತ್ತಿದ್ದಾರೆ. ಇದಕ್ಕೆ ಕಾರಣ ಪಿಚ್ (ಚುನಾವಣಾ ಅಖಾಡ) ಹಾಳಾಗಿರುವುದಲ್ಲ, ಬದಲಾಗಿ ಅವರು ನಾಯಕತ್ವ ವಹಿಸಲು ಅನರ್ಹರು, ಅಸಮರ್ಥರು ಮತ್ತು ಅಯೋಗ್ಯರಾಗಿದ್ದಾರೆ.
ಹೀಗಾಗಿಯೇ ಜನರು ಅವರನ್ನು ನಂಬುವುದಿಲ್ಲ, ಎಂದು ಕೇಶವನ್ ಹೇಳಿದರು. ವಿದೇಶ ನೆಲದಲ್ಲಿ ಚುನಾವಣಾ ಅಕ್ರಮಗಳ ಆರೋಪ ಮಾಡುತ್ತಾ ಗಾಂಧಿ ನೀಡಿದ ಹೇಳಿಕೆಗಳನ್ನು ಅವರು ಅತ್ಯಂತ ಖಂಡನೀಯ ಎಂದು ಬಣ್ಣಿಸಿದ್ದು, ಇದು ಅವರ ತುರ್ತು ಪರಿಸ್ಥಿತಿಯ ಮನಸ್ಥಿತಿಯನ್ನು ಬಯಲುಗೊಳಿಸಿದೆ.
