Homeರಾಷ್ಟ್ರೀಯಉತ್ತರ ಪ್ರದೇಶ : ದಟ್ಟ ಮಂಜಿನಿಂದ ಬೈಕ್‌ಗಳ ಮುಖಾಮುಖಿ ಡಿಕ್ಕಿ, ಐವರು ಬಲಿ

ಉತ್ತರ ಪ್ರದೇಶ : ದಟ್ಟ ಮಂಜಿನಿಂದ ಬೈಕ್‌ಗಳ ಮುಖಾಮುಖಿ ಡಿಕ್ಕಿ, ಐವರು ಬಲಿ

ಬಲರಾಮ್‌ಪುರ, ನ. 19 (ಪಿಟಿಐ): ಉತ್ತರ ಪ್ರದೇಶದಲ್ಲಿ ದಟ್ಟವಾದ ಮಂಜಿನ ನಡುವೆ ಎರಡು ಮೋಟಾರುಸೈಕಲ್‌ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಲರಾಮ್‌ಪುರ-ಉತ್ರೌಲಾ ರಸ್ತೆಯಲ್ಲಿರುವ ಅಕ್ಷಿ ಬರ್ಹಾರಾ ಗ್ರಾಮದ ಬಳಿ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಉತ್ರೌಲಾದತ್ತ ಸಾಗುತ್ತಿದ್ದ ಮೋಟಾರುಸೈಕಲ್‌ಗಳು, ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿದಾಗ ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮಾರ್ತಾಂಡ್ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ.

ಗಾಯಗೊಂಡವರನ್ನು ಉತ್ರೌಲಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಐವರು ಯುವಕರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಮೃತಪಟ್ಟವರನ್ನು ಮೊಹಮ್ಮದ್ ಫಾರೂಕ್ (18), ಸಲೀಂ (18), ಗುಫ್ರಾನ್ (17), ತೌಫೀಕ್ (19) ಮತ್ತು ಫಜಲ್ ಮೊಹಮ್ಮದ್ (23) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಛಾಪರ್ ತಲ್ವಾ ಮತ್ತು ಗೌರಿವಾನ್ ದೀಹ್ ಗ್ರಾಮಗಳ ನಿವಾಸಿಗಳಾಗಿದ್ದಾರೆ ಎಂದು ಎಸ್‌ಪಿ ತಿಳಿಸಿದರು.

ಗಾಯಗೊಂಡವರನ್ನು ಮುಜಮ್ಮಿಲ್ (22) ಮತ್ತು ನಹಿದ್ ರಜಾ (21) ಎಂದು ಗುರುತಿಸಲಾಗಿದೆ. ಘಟನಾ ಸ್ಥಳದ ಪ್ರಾಥಮಿಕ ಪರಿಶೀಲನೆಯನ್ನು ಉಲ್ಲೇಖಿಸಿದ ಅಧಿಕಾರಿ, ರಸ್ತೆಯಲ್ಲಿ ಒಬ್ಬರು ಅಥವಾ ಇಬ್ಬರು ಪಾದಚಾರಿಗಳಿದ್ದರು. ಅವರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೈಕ್‌ಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಅಲ್ಲದೆ, ದಟ್ಟವಾದ ಮಂಜು ಕೂಡ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಸಿಂಗ್ ತಿಳಿಸಿದರು.

RELATED ARTICLES

Latest News