Homeರಾಜ್ಯಇನ್ನು ಮುಂದೆ 'ಪ್ರಜಾ ಸೇವಾ ಕೇಂದ್ರ'ಗಳಾಗಲಿವೆ ಎಲ್ಲಾ ನಾಗರಿಕ ಸೇವಾ ಕೇಂದ್ರಗಳು

ಇನ್ನು ಮುಂದೆ ‘ಪ್ರಜಾ ಸೇವಾ ಕೇಂದ್ರ’ಗಳಾಗಲಿವೆ ಎಲ್ಲಾ ನಾಗರಿಕ ಸೇವಾ ಕೇಂದ್ರಗಳು

ಬೆಂಗಳೂರು,ನ.19-ರಾಜ್ಯದಾದ್ಯಂತ ವಿವಿಧ ಹೆಸರುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲಾ ನಾಗರಿಕ ಸೇವಾ ಕೇಂದ್ರಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪ್ರಜಾ ಸೇವಾ ಕೇಂದ್ರ ಎಂದು ಮರುನಾಮಕರಣ ಮಾಡಿ ಕರ್ನಾಟಕ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.

ಪ್ರಜಾಸೇವಾ ಇಲಾಖೆಯ ವಿದ್ಯುನಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದಡಿ ಬೆಂಗಳೂರು ನಗರದಲ್ಲಿ ಬೆಂಗಳೂರು ಒನ್‌, ಇತರೆ ನಗರ ಹಾಗೂ ಪಟ್ಟಣಗಳಲ್ಲಿ ಕರ್ನಾಟಕ ಒನ್‌ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಒನ್‌ ಎಂಬ ಹೆಸರುಗಳಲ್ಲಿ ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ಒದಗಿಸಲಾಗುತ್ತಿತ್ತು. ರಾಜ್ಯಾದ್ಯಂತ ಈ ಕೇಂದ್ರಗಳು ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತಿದ್ದ ಕಾರಣ, ಸೇವೆಗಳ ವಿತರಣೆಯಲ್ಲಿ ಏಕರೂಪತೆ ತರುವ ಉದ್ದೇಶದಿಂದ ಮಾನ್ಯ ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಈ ಮರುನಾಮಕರಣ ಮಾಡಲಾಗಿದೆ.

ನವೆಂಬರ್‌ 18, 2026 ರಿಂದಲೇ ರಾಜ್ಯದ ಎಲ್ಲಾ ಬೆಂಗಳೂರು ಒನ್‌, ಕರ್ನಾಟಕ ಒನ್‌ ಮತ್ತು ಗ್ರಾಮ ಒನ್‌ ಕೇಂದ್ರಗಳನ್ನು ಪ್ರಜಾ ಸೇವಾ ಕೇಂದ್ರ ಎಂದು ಕರೆಯಲಾಗುವುದು. ಇಂದಿನಿಂದ ಎಲ್ಲಾ ಅಧಿಕೃತ ಪತ್ರ ವ್ಯವಹಾರಗಳು, ನಾಮಫಲಕಗಳು, ವೆಬ್‌ ಪೋರ್ಟಲ್‌ಗಳು, ತಂತ್ರಾಂಶಗಳು (ಸಾಫ್ಟ್ ವೇರ್‌), ರಸೀದಿಗಳು (ಸ್ವೀಕೃತಿಗಳು) ಹಾಗೂ ಪ್ರಚಾರ ಸಾಮಗ್ರಿಗಳಲ್ಲಿ ಪ್ರಜಾ ಸೇವಾ ಕೇಂದ್ರ ಎಂಬ ಹೆಸರನ್ನೇ ಬಳಸಲು ಸೂಚಿಸಲಾಗಿದೆ.

ರಾಜ್ಯದ ಎಲ್ಲಾ ಪ್ರಜಾ ಸೇವಾ ಕೇಂದ್ರಗಳಿಗೆ ಏಕರೂಪದ ಬ್ರಾಂಡಿಂಗ್‌, ನಾಮಫಲಕದ ವಿನ್ಯಾಸ, ಲಾಂಛನ, ಬಣ್ಣದ ವಿನ್ಯಾಸ ಇತ್ಯಾದಿ ರೂಪಿಸಿ ಸರ್ಕಾರದಿಂದ ಅನುಮೋದನೆ ಪಡೆಯುವಂತೆ ವಿದ್ಯುನಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ.

ಅತ್ಯಂತ ಆದ್ಯತೆಯ ಮೇಲೆ ಅನುಷ್ಠಾನ:
ಕೇಂದ್ರಗಳ ನಿರ್ವಾಹಕರು ಹಾಗೂ ಫ್ರಾಂಚೈಸಿಗಳೊಂದಿಗಿನ ಒಪ್ಪಂದಗಳಲ್ಲಿಯೂ ಹೊಸ ಹೆಸರನ್ನು ಅಳವಡಿಸಿ, ಈ ಆದೇಶವನ್ನು ರಾಜ್ಯಾದ್ಯಂತ ಅತ್ಯಂತ ಆದ್ಯತೆಯ ಮೇರೆಗೆ ಜಾರಿಗೊಳಿಸುವಂತೆ ಪ್ರಜಾಸೇವಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಆದೇಶ ಹೊರಡಿಸಿದ್ದಾರೆ.

RELATED ARTICLES

Latest News