Homeಬೆಂಗಳೂರುಬೆಂಗಳೂರಲ್ಲಿ 100ಕ್ಕೂ ಹೆಚ್ಚು ರೌಡಿ ಮನೆಗಳ ಮೇಲೆ ಪೊಲೀಸರ ದಾಳಿ

ಬೆಂಗಳೂರಲ್ಲಿ 100ಕ್ಕೂ ಹೆಚ್ಚು ರೌಡಿ ಮನೆಗಳ ಮೇಲೆ ಪೊಲೀಸರ ದಾಳಿ

ಬೆಂಗಳೂರು,ನ.22- ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸೂಚಿಸಿದ ಬೆನ್ನಲ್ಲೇ ನಗರ ಪೊಲೀಸರು ಇಂದು ಮುಂಜಾನೆ ಫೀಲ್ಡ್ ಗಿಳಿದು 100 ಕ್ಕೂ ಹೆಚ್ಚು ರೌಡಿ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಬೆಳ್ಳಂಬೆಳಗ್ಗೆ ನಿದ್ದೆಯಲ್ಲಿದ್ದ ರೌಡಿಗಳ ಮನೆ ಬಾಗಿಲು ತಟ್ಟಿದ ಪೊಲೀಸರು ಒಳ ಪ್ರವೇಶಿಸಿ, ಶೋಧಿಸಿ ಹೊರಗಡೆ ಕರೆತಂದು ವಿಚಾರಣೆ ನಡೆಸಿದ್ದಾರೆ.

ಈಗ ಯಾವ ಕೆಲಸ ಮಾಡುತ್ತಿದ್ದೀರಿ, ನಿನ್ನ ಚಟುವಟಿಕೆಗಳೇನು, ಪ್ರಸ್ತುತ ಬಳಸುತ್ತಿರುವ ಮೊಬೈಲ್‌ ನಂಬರ್‌ ನೀಡಿ ಹೀಗೆ ಮುಂತಾದ ಪ್ರಶ್ನೆಗಳನ್ನು ಹಾಕಿ ಪೊಲೀಸರು ಉತ್ತರ ಪಡೆದಿದ್ದಾರೆ.ವಾರೆಂಟ್‌ ಇದ್ದರೆ ನ್ಯಾಯಾಲಯಕ್ಕೆ ಹಾಜರಾಗಬೇಕು. ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸಬಾರದು. ರಿಯಲ್‌ ಎಸ್ಟೇಟ್‌ ವ್ಯವಹಾರಗಳಲ್ಲಿ ಭಾಗಿಯಾಗಬಾರದು ಎಂದು ಪೊಲೀಸ್‌‍ ಅಧಿಕಾರಿಗಳು ರೌಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಶುಕ್ರವಾರ ನಗರದ ಹಿರಿಯ ಪೊಲೀಸ್‌‍ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿ ನಗರದಲ್ಲಿ ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು, ಅಪರಾಧ ಪ್ರಕರಣಗಳು ಆಗದಂತೆ ತಡೆಯಬೇಕು ಎಂದು ಖಡಕ್‌ ಸೂಚನೆ ನೀಡಿದ್ದರು. ಸರ್ಕಾರ ನಗರದಲ್ಲಿ ಹೊಸದಾಗಿ ರೌಡಿ ನಿಗ್ರಹದಳ ರಚಿಸಿ ಅದಕ್ಕೆ ಆಯುಕ್ತರಾಗಿ ಹೆಚ್ಚುವರಿ ಪೊಲೀಸ್‌‍ ಮಹಾ ನಿರ್ದೇಶಕ ಹೇಮಂತ್‌ ನಿಂಬಾಳ್ಕರ್‌ ಅವರನ್ನು ನೇಮಕ ಮಾಡಿದೆ.

ನಿನ್ನೆ ನಗರದ ಮುಖ್ಯ ಪೊಲೀಸ್‌‍ ಆಯುಕ್ತ ಆರ್‌. ಹಿತೇಂದ್ರ ಮತ್ತು ಹೇಮಂತ್‌ ನಿಂಬಾಳ್ಕರ್‌ ಕಿರಿಯ ಅಧಿಕಾರಿಗಳು ಜೊತೆ ಸಭೆ ನಡೆಸಿ ಕೆಲವು ಸೂಚನೆ ನೀಡಿದರು. ಇದರ ಹಿನ್ನಲೆಯಲ್ಲಿ ಇಂದು ಮುಂಜಾನೆ ನಗರ ಪೊಲೀಸರು ರೌಡಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.

RELATED ARTICLES

Latest News