ಬೆಂಗಳೂರು- ಡೀಪ್ಫೇಕ್, ಡೀಪ್ಪೋರ್ನ್, ಆನ್ಲೈನ್ ಮಕ್ಕಳ ಲೈಂಗಿಕ ದೌರ್ಜನ್ಯ ವಿಷಯ ಸೇರಿದಂತೆ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಹೆಚ್ಚುತ್ತಿರುವ ಡಿಜಿಟಲ್ ಅಪರಾಧಗಳನ್ನು ನಿಯಂತ್ರಿಸಲು ಕರ್ನಾಟಕ ಸರ್ಕಾರವು ಪ್ರತ್ಯೇಕ ಘಟಕ ಸ್ಥಾಪಿಸಲು ಮುಂದಾಗಿದೆ.
ಮಹಿಳೆಯರು ಮತ್ತು ಮಕ್ಕಳ ಸೈಬರ್ ಸುರಕ್ಷತೆಯನ್ನು ಕೇಂದ್ರವಾಗಿಟ್ಟುಕೊಂಡು ಱಮಹಿಳಾ ಮಕ್ಕಳ ಸೈಬರ್ ರಕ್ಷಣೆ ದಳ ರಚಿಸಲು ಉದ್ದೇಶಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಆನ್ಲೈನ್ ಅಪರಾಧಗಳಿಗೆ ಸಂಬಂಧಿಸಿದ ದೂರುಗಳು ಮತ್ತು ಪ್ರಕರಣಗಳ ತನಿಖೆಯ ಮೇಲೆಯೇ ಈ ಘಟಕ ಪ್ರಮುಖವಾಗಿ ಗಮನಹರಿಸಲಿದೆ.
ಡಾರ್ಕ್ವೆಬ್ ಮೇಲೂ ನಿಗಾ
ಹೊಸ ಘಟಕವು ಡಾರ್ಕ್ವೆಬ್ ಸೇರಿದಂತೆ ವಿವಿಧ ಆನ್ಲೈನ್ ವೇದಿಕೆಗಳನ್ನು ಪರಿಶೀಲಿಸಿ, ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಆಕ್ಷೇಪಾರ್ಹ ವಿಷಯಗಳನ್ನು ಪತ್ತೆಹಚ್ಚಲು ಹಾಗೂ ಸಂತ್ರಸ್ತರನ್ನು ಗುರುತಿಸಲು ಅಗತ್ಯವಾದ ತಂತ್ರಜ್ಞಾನವನ್ನು ಬಳಸಲಿದೆ. ಸಂತ್ರಸ್ತರು ತಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅನುಕೂಲವಾಗುವಂತೆ ಘಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸುವ ಉದ್ದೇಶವಿದೆ.
ಅಪರಾಧಿಗಳನ್ನು ಪತ್ತೆಹಚ್ಚುವುದು ಮಾತ್ರವಲ್ಲದೆ, ಸಂತ್ರಸ್ತರಿಗೆ ಸಮಾಲೋಚನೆ ಮತ್ತು ಅಗತ್ಯ ನೆರವು ಒದಗಿಸುವ ವ್ಯವಸ್ಥೆಯನ್ನೂ ಘಟಕದಲ್ಲಿ ರೂಪಿಸಲು ಸರ್ಕಾರ ಮುಂದಾಗಿದೆ. ಜತೆಗೆ, ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಅವುಗಳನ್ನು ತಡೆಗಟ್ಟುವುದು ಘಟಕದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ.
ಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಆನ್ಲೈನ್ ಅಪರಾಧಗಳು ಸಾಮಾನ್ಯ ಸೈಬರ್ ಅಪರಾಧ ಅಥವಾ ಆನ್ಲೈನ್ ವಂಚನೆಗಳಿಗಿಂತ ಭಿನ್ನವಾಗಿವೆ. ಇಂತಹ ಪ್ರಕರಣಗಳು ಸಂತ್ರಸ್ತರ ಘನತೆಗೆ ಧಕ್ಕೆ ತರುವುದರ ಜತೆಗೆ, ಅವರ ಮಾನಸಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಕಾನೂನು ಕ್ರಮದ ಜತೆಗೆ ದೀರ್ಘಕಾಲೀನ ಸಮಾಲೋಚನೆಯ ಅಗತ್ಯವೂ ಇದೆ.
ಎನ್ಜಿಒ, ವೈದ್ಯರು, ವರ್ತನಾ ತಜ್ಞರ ಸಹಭಾಗಿತ್ವ
ಸಂತ್ರಸ್ತರಿಗೆ ಸಮಗ್ರ ನೆರವು ನೀಡಲು ಎನ್ಜಿಒಗಳು, ವೈದ್ಯರು ಮತ್ತು ವರ್ತನಾ ತಜ್ಞರನ್ನು ಕೂಡ ಎಂಎಂಸಿಆರ್ಡಿಯೊಂದಿಗೆ ಸಂಪರ್ಕಿಸುವ ಉದ್ದೇಶವಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುವ ಸಂದರ್ಭದಲ್ಲಿ ಸಂತ್ರಸ್ತರಿಗೆ ಮಾನಸಿಕ ಹಾಗೂ ಸಾಮಾಜಿಕ ಬೆಂಬಲ ಒದಗಿಸಲು ಈ ತಜ್ಞರು ನೆರವಾಗಲಿದ್ದಾರೆ.
