ಬೆಂಗಳೂರು,ನ.22- ಉತ್ತರ ಭಾರತದ ಪೈಂಟರ್ ಒಬ್ಬರನ್ನು ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಾಗಿ ನಂದಿನಿಲೇಔಟ್ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ರೂಪೇಶ್(25) ಕೊಲೆಯಾದ ಪೈಂಟರ್. ಇವರು ಉತ್ತರ ಭಾರತದ ಮೂಲದವರಾಗಿದ್ದು, ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದು, ಚೌಡೇಶ್ವರಿನಗರದಲ್ಲಿ ವಾಸವಾಗಿದ್ದರು.
ಇವರ ಬಾಡಿಗೆ ಮನೆಯಲ್ಲಿ ಸ್ನೇಹಿತ ಸಹ ವಾಸವಾಗಿದ್ದನು. ಕಳೆದ 15ರಂದು ಇಬ್ಬರ ಮಧ್ಯೆ ಯಾವುದೋ ವಿಚಾರವಾಗಿ ಮನೆಯಲ್ಲಿ ಜಗಳ ಉಂಟಾಗಿ ಆರೋಪಿ ರೂಪೇಶನ ತಲೆ ಮೇಲೆ ಕಲ್ಲು ಎತ್ತು ಹಾಕಿ ಕೊಲೆ ಮಾಡಿ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ.
ಈ ಮನೆಯಿಂದ ವಾಸನೆ ಬರುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಬೀಗ ಒಡೆದು ಮನೆಯೊಳಗೆ ಪರಿಶೀಲಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯ ಬಂಧನ ನಂತರ ಕೊಲೆಗೆ ಕಾರಣ ಏನೆಂಬುದು ತಿಳಿದುಬರಲಿದೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.
