Homeರಾಷ್ಟ್ರೀಯಕಾರ್ತಿಗೈ ದೀಪ ವಿವಾದ : ಸುಪ್ರೀಂ ಆದೇಶ ಪ್ರಶ್ನಿಸಿ ಜೋಸೆಫ್‌ ಸರ್ಕಾರದಿಂದ ಮರುಪರಿಶೀಲನಾ ಅರ್ಜಿ

ಕಾರ್ತಿಗೈ ದೀಪ ವಿವಾದ : ಸುಪ್ರೀಂ ಆದೇಶ ಪ್ರಶ್ನಿಸಿ ಜೋಸೆಫ್‌ ಸರ್ಕಾರದಿಂದ ಮರುಪರಿಶೀಲನಾ ಅರ್ಜಿ

ಚೆನ್ನೈ, ನ.23- ನವೆಂಬರ್‌ 24ರಂದು ಮಧುರೈನ ತಿರುಪರನಕುಂದ್ರಂ ಬೆಟ್ಟದ ದೀಪಸ್ತಂಭದಲ್ಲಿ ಕಾರ್ತಿಗೈ ದೀಪ ಬೆಳಗಿಸಲು ಅನುಮತಿ ನೀಡಿದ್ದ ಸುಪ್ರೀಂ ಕೋರ್ಟ್‌ ಆದೇಶವನ್ನು ಪ್ರಶ್ನಿಸಿ ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್‌ ವಿಜಯ್‌ ನೇತೃತ್ವದ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ. ಈ ಬೆಳವಣಿಗೆ ರಾಜ್ಯದಲ್ಲಿ ಧಾರ್ಮಿಕ ಮತ್ತು ರಾಜಕೀಯ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿದ್ದು, ಬಿಜೆಪಿ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದೆ.

ತಮಿಳುನಾಡು ಸರ್ಕಾರದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಯುಕ್ತರು ಸುಪ್ರೀಂ ಕೋರ್ಟ್‌ನ ನವೆಂಬರ್‌ 20ರ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿಗಳಾದ ಅರವಿಂದ್‌ ಕುಮಾರ್‌ ಮತ್ತು ವಿಪುಲ್‌ ಎಂ. ಪಂಚೋಲಿ ಅವರನ್ನೊಳಗೊಂಡ ಪೀಠವು, ತಿರುಪರನಕುಂದ್ರಂ ಬೆಟ್ಟದ ದೀಪಸ್ತಂಭದಲ್ಲಿ ನವೆಂಬರ್‌ 24ರಂದು ಸಾಂಪ್ರದಾಯಿಕ ಕಾರ್ತಿಗೈ ದೀಪ ಬೆಳಗಿಸಲು ಒಂದು ಬಾರಿಯ ವಿಶೇಷ ಅನುಮತಿ ನೀಡಿತ್ತು.

ಆದರೆ, ಈ ಅನುಮತಿಗೆ ಸುಪ್ರೀಂ ಕೋರ್ಟ್‌ ಕೆಲವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿತ್ತು. ದೀಪ ಬೆಳಗಿಸುವ ಸಂದರ್ಭದಲ್ಲಿ ಸಾರ್ವಜನಿಕರು, ಮೆರವಣಿಗೆಗಳು ಹಾಗೂ ಯಾವುದೇ ಪ್ರದರ್ಶನಗಳಿಗೆ ಅವಕಾಶವಿರುವುದಿಲ್ಲ. ದೇವಾಲಯದ ಆಡಳಿತ ಮಂಡಳಿಯ ಅಧಿಕೃತ ಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಸ್ಥಳ ಪ್ರವೇಶಿಸಲು ಅನುಮತಿ ನೀಡಲಾಗಿತ್ತು. ಭದ್ರತಾ ವ್ಯವಸ್ಥೆಗಳ ಮೇಲ್ವಿಚಾರಣೆಗೆ ಮಧುರೈ ಜಿಲ್ಲಾಧಿಕಾರಿಯನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಅಗತ್ಯವಿದ್ದರೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯನ್ನು ನಿಯೋಜಿಸಲೂ ನ್ಯಾಯಾಲಯ ಅವಕಾಶ ನೀಡಿತ್ತು.

ಸರ್ಕಾರದ ಆಕ್ಷೇಪವೇನು?

ಕಾರ್ತಿಗೈ ದೀಪವನ್ನು ಸಾಂಪ್ರದಾಯಿಕವಾಗಿ ಉಚ್ಚಿಪ್ಪಿಳ್ಳಯ್ಯರ್‌ ದೇವಸ್ಥಾನದ ಬಳಿಯ ದೀಪ ಮಂಟಪದಲ್ಲಿ ಬೆಳಗಿಸಲಾಗುತ್ತದೆ. ವಿವಾದಿತ ದೀಪಸ್ತಂಭದಲ್ಲಿ ದೀಪ ಬೆಳಗಿಸುವ ಯಾವುದೇ ಸ್ಥಾಪಿತ ಸಂಪ್ರದಾಯವಿಲ್ಲ ಎಂಬುದು ತಮಿಳುನಾಡು ಸರ್ಕಾರದ ವಾದವಾಗಿದೆ.

ಇದಲ್ಲದೆ, ವಿವಾದಿತ ದೀಪಸ್ತಂಭವು ಹಜರತ್‌ ಸುಲ್ತಾನ್‌ ಸಿಕಂದರ್‌ ಬಾದುಷಾ ಔಲಿಯಾ ದರ್ಗಾದಿಂದ ಸುಮಾರು 50 ಮೀಟರ್‌ ದೂರದಲ್ಲಿದೆ. ಅಲ್ಲಿ ದೀಪ ಬೆಳಗಿಸುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಉಂಟಾಗುವ ಸಾಧ್ಯತೆಯಿದ್ದು, ಕೋಮು ಸಾಮರಸ್ಯಕ್ಕೂ ಧಕ್ಕೆಯಾಗಬಹುದು ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿದೆ.

ನವೆಂಬರ್‌ 24ರ ದೀಪ ಬೆಳಗಿಸುವಿಕೆಗೆ ನೀಡಿರುವ ಅನುಮತಿ ತಾತ್ಕಾಲಿಕವಾಗಿದ್ದು, ಇದರಿಂದ ಮುಂದಿನ ವರ್ಷಗಳಲ್ಲಿ ಅಥವಾ ಭವಿಷ್ಯದಲ್ಲಿ ಶಾಶ್ವತ ಧಾರ್ಮಿಕ ಹಕ್ಕು ಸೃಷ್ಟಿಯಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಈಗಾಗಲೇ ಸ್ಪಷ್ಟಪಡಿಸಿದೆ. ಈ ವಿವಾದಕ್ಕೆ ಸಂಬಂಧಿಸಿದ ಮೂಲ ಪ್ರಕರಣದ ಕುರಿತು ವಿಸ್ತೃತ ವಿಚಾರಣೆಯನ್ನು 2027ರ ಜನವರಿಯಲ್ಲಿ ನಡೆಸಲು ನ್ಯಾಯಾಲಯ ಉದ್ದೇಶಿಸಿದೆ.

ವಿಜಯ್‌ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

ಸುಪ್ರೀಂ ಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಿರುವುದಕ್ಕೆ ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್‌ ನಾಗೇಂದ್ರನ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದ್ದು, ಮತಬ್ಯಾಂಕ್‌ ರಾಜಕೀಯಕ್ಕಾಗಿ ಧಾರ್ಮಿಕ ವಿಚಾರವನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ದೀಪಸ್ತಂಭದಲ್ಲಿ ದೀಪ ಬೆಳಗಿಸಲು ಸರ್ಕಾರಕ್ಕೆ ಏಕೆ ಹಿಂಜರಿಕೆ ಎಂಬ ಪ್ರಶ್ನೆ ಎತ್ತಿದ್ದಾರೆ. ಸುಪ್ರೀಂ ಕೋರ್ಟ್‌ ಆದೇಶವನ್ನು ಗೌರವಿಸಿ ಇತರ ಸಂಘಟನೆಗಳು ಸಂಯಮದಿಂದ ವರ್ತಿಸುತ್ತಿರುವಾಗ, ಟಿವಿಕೆ ಸರ್ಕಾರ ಮಾತ್ರ ಮರುಪರಿಶೀಲನಾ ಅರ್ಜಿ ಸಲ್ಲಿಸಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ದೇವಾಲಯಗಳ ಆಸ್ತಿಗಳನ್ನು ರಕ್ಷಿಸುವ ಜವಾಬ್ದಾರಿ ಹೊಂದಿರುವ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ, ‘ಕಂಧರ್‌ ಬೆಟ್ಟ’ವನ್ನು ‘ಸಿಕಂದರ್‌ ಬೆಟ್ಟ’ವನ್ನಾಗಿ ಪರಿವರ್ತಿಸಲು ಮುಂದಾಗಿದೆಯೇ ಎಂದು ವ್ಯಂಗ್ಯವಾಡಿದ್ದಾರೆ. ಮುಖ್ಯಮಂತ್ರಿ ಜೋಸೆಫ್‌ ವಿಜಯ್‌ ಅವರು ಮತಬ್ಯಾಂಕ್‌ ರಾಜಕೀಯಕ್ಕಾಗಿ ಇಂತಹ ನಿರ್ಧಾರ ಕೈಗೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ತಿರುಪರನಕುಂದ್ರಂ ಬೆಟ್ಟದ ಕಾರ್ತಿಗೈ ದೀಪ ವಿವಾದ ಇದೀಗ ನ್ಯಾಯಾಂಗ ಮತ್ತು ರಾಜಕೀಯ ಸಂಘರ್ಷವಾಗಿ ಮಾರ್ಪಟ್ಟಿದೆ. ಒಂದು ಕಡೆ ಧಾರ್ಮಿಕ ಸಂಪ್ರದಾಯ ಮತ್ತು ಹಕ್ಕುಗಳ ಪ್ರಶ್ನೆ ಮುಂದಿಟ್ಟುಕೊಂಡು ದೀಪ ಬೆಳಗಿಸಲು ಅನುಮತಿ ಕೋರುತ್ತಿರುವ ಸಂಘಟನೆಗಳಿದ್ದರೆ, ಮತ್ತೊಂದೆಡೆ ಕಾನೂನು ಸುವ್ಯವಸ್ಥೆ ಮತ್ತು ಕೋಮು ಸಾಮರಸ್ಯದ ನೆಪದಲ್ಲಿ ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿದೆ. ಸುಪ್ರೀಂ ಕೋರ್ಟ್‌ನ ಮುಂದಿನ ವಿಚಾರಣೆ ಈ ವಿವಾದದ ದಿಕ್ಕನ್ನು ನಿರ್ಧರಿಸುವ ಸಾಧ್ಯತೆಯಿದೆ.

RELATED ARTICLES

Latest News