Homeರಾಜ್ಯಹೊಸ ಕಾರು ಖರೀದಿಗೆ ಮುಂದಾದ ಸಚಿವರು : ಬರಗಾಲದಲ್ಲೂ ಬೇಕಿತ್ತಾ ಶೋಕಿ..?

ಹೊಸ ಕಾರು ಖರೀದಿಗೆ ಮುಂದಾದ ಸಚಿವರು : ಬರಗಾಲದಲ್ಲೂ ಬೇಕಿತ್ತಾ ಶೋಕಿ..?

ಬೆಂಗಳೂರು, ನ.23- ಬರಗಾಲದ ನಡುವೆಯೂ ರಾಜ್ಯ ಸರ್ಕಾರದ ಸಚಿವರು, ಸಂಸದರಿಗಾಗಿ ಹೊಸ ಕಾರುಗಳನ್ನು ಖರೀದಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಕಳೆದ ತಿಂಗಳು ವಾಹನಗಳ ಖರೀದಿ ವೆಚ್ಚದ ಮಿತಿಯನ್ನು ರಾಜ್ಯ ಸರ್ಕಾರ 26 ಲಕ್ಷ ರೂ.ಗಳಿಂದ 31 ಲಕ್ಷ ರೂ.ಗೆ ಹೆಚ್ಚಿಸಿತ್ತು. ಅದರಂತೆ ಕಾರುಗಳನ್ನು ಖರೀದಿಸಲಾಗುತ್ತಿದ್ದು, ಸಚಿವರುಗಳಿಗೆ ಹಂಚಿಕೆ ಮಾಡಲಾಗುತ್ತಿದೆ.

ಕಂದಾಯ ಸಚಿವರಾಗಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ನಮಗೆ ಒದಗಿಸಲಾದ ಹೊಸ ಕಾರಿನಲ್ಲಿ ಇಂದು ಸವಾರಿ ಆರಂಭಿಸಿದರು. ಬೆಳಗ್ಗೆ ಹೊಸ ಕಾರಿಗೆ ಪೂಜೆ ನೆರವೇರಿಸಿದ ಬಳಿಕ ಖುದ್ದು ತಾವಾಗಿಯೇ ಚಾಲನೆ ಮಾಡಿದರು. ಕಾರಿನ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ಪರಿಶೀಲನೆ ನಡೆಸಿದರು.

ಉಪ ಮುಖ್ಯಮಂತ್ರಿಯಾದ ಬಳಿಕ, ತಮಗೆ ಹಳೆಯ ಕಾರು ನೀಡಲಾಗಿತ್ತು. ಸದ್ಯಕ್ಕೆ ಅದೇ ಇರಲಿ ಎಂದು ತಾವು ಸ್ವೀಕಾರ ಮಾಡಿದ್ದು, ಇತ್ತೀಚೆಗೆ ಅದರ ಸುಸ್ಥಿತಿ ಏರುಪೇರಾಗಿತ್ತು. ಈ ಹಂತದಲ್ಲಿ ಹೊಸ ಕಾರು ನೀಡಲಾಗಿದೆ ಎಂದು ಪರಮೇಶ್ವರ್‌ ಹೇಳಿದ್ದಾರೆ. ಹೊಸ ಪಾರ್ಚುನರ್‌ ಕಾರು ಗ್ರಾಮೀಣ ಭಾಗದ ಪ್ರವಾಸಕ್ಕೆ ಅನುಕೂಲಕರವಾಗಿದೆ ಎಂದು ಪರಮೇಶ್ವರ್‌ ಅಭಿಪ್ರಾಯ ಪಟ್ಟಿದ್ದಾರೆ.

ಸಾಲ ಮಾಡಿ ತುಪ್ಪ ತಿನ್ನುವ ಇರಾದೆ:
ರಾಜ್ಯದಲ್ಲಿ 177 ತಾಲ್ಲೂಕುಗಳು ಭೀಕರ ಬರದ ಪರಿಸ್ಥಿತಿಯಿಂದ ನರಳುತ್ತಿವೆ. ಆ ಭಾಗಕ್ಕೆ ರಾಜ್ಯ ಸರ್ಕಾರ ಪೂರ್ಣ ಪ್ರಮಾಣದ ಆರ್ಥಿಕ ನೆರವು ನೀಡಿಲ್ಲ, ಇತ್ತ ಕೇಂದ್ರ ಸರ್ಕಾರ ಕೂಡ ಹಣ ಬಿಡುಗಡೆ ಮಾಡಿಲ್ಲ. ಮಳೆಯಿಲ್ಲದೆ ಸಂಕಷ್ಟಕ್ಕೊಳಗಾದ ರೈತರ ಪಾಡು ಕೇಳುವರಿಲ್ಲದಂತಾಗಿದೆ.

ಆಶಾ ಕಾರ್ಯಕರ್ತರು ನ್ಯಾಯಯುತವಾದ ವೇತನಕ್ಕಾಗಿ ಆಗ್ರಹಿಸಿ, ಕಳೆದ ಒಂದು ವಾರದಿಂದ ಫ್ರೀಡಂಪಾರ್ಕ್‌ನಲ್ಲಿ ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಳೆ, ಚಳಿಯನ್ನುಲೆಕ್ಕಿಸದೆ ತಮ ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಧರಣಿ ಮುಂದುವರೆಸಿದ್ದಾರೆ. ಬರ ಪೀಡಿತ ತಾಲ್ಲೂಕುಗಳ ರೈತರಿಗೆ ಪರಿಹಾರ ಪಾವತಿ ವಿಚಾರ ಬಂದಾಗ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಆಧರಿಸಿ ನಿರ್ಧರಿಸುವುದಾಗಿ ರಾಜ್ಯ ಸರ್ಕಾರ ಸಬೂಬು ಹೇಳುತ್ತಿದೆ.

ಆದರೆ ಇತ್ತ ವಾಹನಗಳ ಖರೀದಿ ಎಗ್ಗಿಲ್ಲದೆ ನಡೆಯುತ್ತಿದೆ. ಪಕ್ಷದ ಕಾರ್ಯಕರ್ತರು, ಮುಖಂಡರನ್ನು ನಿಗಮ ಮಂಡಳಿಗಳಿಗೆ ನೇಮಕಾತಿ ಮಾಡಲಾಗುತ್ತದೆ. ಗ್ಯಾರಂಟಿ ಅನುಷ್ಠಾನಗಳ ಸಮಿತಿ, ಭಾರತ್‌ ಜೋಡೋ ಸಮಿತಿಗಳಿಗೆ ಸಾವಿರಾರು ಕಾರ್ಯಕರ್ತರು ನಿಯೋಜನೆಗೊಳ್ಳುತ್ತಿದ್ದಾರೆ.

ರಾಜ್ಯದ ಆರ್ಥಿಕ ಸ್ಥಿತಿ ಆತಂಕಕಾರಿಯಾಗಿದ್ದರೆ, ಸರ್ಕಾರ ಮಿತ ವ್ಯಯಕ್ಕೆ ಮಣೆ ಹಾಕಬೇಕಿತ್ತು. ಅದರ ಬದಲಾಗಿ ಕಾರ್ಯಕರ್ತರಿಗೆ ನೇಮಕಾತಿ ಮಾಡುವುದು ಸಚಿವರಿಗೆ, ಸಂಸದರಿಗೆ, ಅಧಿಕಾರಿಗಳಿಗೆ ಹೊಸ ಕಾರು ಖರೀದಿಸುವಂತಹ ದುಂಧು ವೆಚ್ಚಗಳಿಗೆ ಮುಂದಾಗಿರುವುದು ಟೀಕೆಗೆ ಗುರಿಯಾಗಿದೆ.

RELATED ARTICLES

Latest News