Homeರಾಜ್ಯ2ನೇ ವಾರಕ್ಕೆ ಕಾಲಿಟ್ಟಿ ಆಶಾ ಕಾರ್ಯಕರ್ತೆಯರ ಹೋರಾಟ : 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ

2ನೇ ವಾರಕ್ಕೆ ಕಾಲಿಟ್ಟಿ ಆಶಾ ಕಾರ್ಯಕರ್ತೆಯರ ಹೋರಾಟ : 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಬೆಂಗಳೂರು,ನ.24- ಗೌರವಧನ 15 ಸಾವಿರಕ್ಕೆ ಹೆಚ್ಚಳ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟ 2ನೇ ವಾರಕ್ಕೆ ಕಾಲಿಟ್ಟಿದೆ. ಸಮಾಜದ ಆರೋಗ್ಯ ಕಾಪಾಡುವ ಆಶಾ ಕಾರ್ಯಕರ್ತೆಯರ ಆರೋಗ್ಯ, ಪ್ರತಿಭಟನೆಯಿಂದ ದಿನೇ ದಿನೇ ಹದಗೆಡುತ್ತಿದೆ. ಅವರ ಗೋಳನ್ನು ಯಾರು ಕೇಳುವವರು ಇಲ್ಲದಂತಾಗಿದೆ.

ಆಡಳಿತ ಕೇಂದ್ರ ವಿಧಾನಸೌಧ ಕೂಗಳತೆ ದೂರದಲ್ಲಿದೆ. ಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರಿಗೆ ಕನಿಷ್ಟ ಸೌಲಭ್ಯಗಳನ್ನಾದರೂ ಒದಗಿಸಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ 6 ಸಾವಿರ ಕಾರ್ಯಕರ್ತೆಯರು ಕಳೆದ ಒಂದು ವಾರದಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದು, ಕನಿಷ್ಟ ಮೂಲಭೂತ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದಾರೆ.

20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಮನೆಯಲ್ಲಿ ಮಕ್ಕಳು, ಅವಲಂಬಿತರನ್ನುಬಿಟ್ಟು ರಾಜಧಾನಿ ಬೆಂಗಳೂರಿನಲ್ಲಿ ಮಳೆ ಚಳಿ ಎನ್ನದೆ ಬೀದಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸಾವಿರಾರು ಜನ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಅಗತ್ಯ ಶೌಚಾಲಯಗಳು, ಸ್ನಾನ ಮಾಡಲು, ಮಲಗಲು ಜಾಗವಿಲ್ಲದೆ ಪರದಾಡುತ್ತಿದ್ದಾರೆ. ನಮ ಗೋಳನ್ನು ಕೇಳುವವರು ಯಾರು ಇಲ್ಲ. ಶೌಚಾಲಯಗಳಿಲ್ಲದೆ ನಾವು ಸರಿಯಾಗಿ ನೀರು ಕುಡಿಯುತ್ತಿಲ್ಲ, ಆಹಾರ ಸೇವಿಸದೆ ಕಾಲ ಕಳೆಯುತ್ತಿದ್ದೇವೆ. ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ.

ಆರೋಗ್ಯ ಸಚಿವರು ಎರಡುಮೂರು ಬಾರಿ ಸಂಧಾನ ಮಾಡಿದರಾದರೂ ಯಾವುದೇ ಫಲ ನೀಡಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಜಪಾನ್‌ ಪ್ರವಾಸದಲ್ಲಿದಾರೆ ಎಂದು ಹೇಳುತ್ತಿದ್ದಾರೆ. ಎಷ್ಟೇ ದಿನವಾದರೂ ನಾವು ಇಲ್ಲೇ ಕುಳಿತು ಕಾಯುತ್ತೇವೆ. ಅವರು ಬಂದು ಭರವಸೆ ನೀಡಿದ ಮೇಲೆ ಇಲ್ಲಿಂದ ತೆರಳುತ್ತೇವೆ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಕುಳಿತಿದ್ದಾರೆ.

RELATED ARTICLES

Latest News