ಬೆಂಗಳೂರು, ನ.24- ಆಹಾರ ಪದ್ಧತಿಯಲ್ಲಿನ ಬದಲಾವಣೆ, ದೈಹಿಕ ಚಟುವಟಿಕೆಗಳ ಕೊರತೆ, ಬೊಜ್ಜು, ಒತ್ತಡ ಹಾಗೂ ನಿದ್ರಾಹೀನತೆಯಂತಹ ಜೀವನಶೈಲಿಯ ಸಮಸ್ಯೆಗಳಿಂದಾಗಿ ದೇಶದಲ್ಲಿ ದಿನದಿಂದ ದಿನಕ್ಕೆ ಮಧುಮೇಹಿಗಳ ಸಂಖ್ಯೆ ದ್ವಿಗುಣಗೊಳ್ಳುತ್ತಲೆ ಇದೆ. ಭಾರತದಲ್ಲಿ ಈಗಾಗಲೇ 10 ಕೋಟಿಗೂ ಅಧಿಕ ಮಂದಿ ಮಧುಮೇಹದಿಂದ ಬಳಲುತ್ತಿದ್ದು, 2050ರ ವೇಳೆಗೆ ಈ ಸಂಖ್ಯೆ 15.67 ಕೋಟಿ ದಾಟುವ ಸಾಧ್ಯತೆಯಿದೆ ಎಂಬ ಅಂದಾಜು ಕಳವಳಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ನಡೆದ ಭಾರತದ ಡಯಾಬಿಟಿಸ್ ಅಧ್ಯಯನ ಸಂಸ್ಥೆಯ 54ನೇ ವಾರ್ಷಿಕ ಸಮ್ಮೇಳನದಲ್ಲಿ ಮಧುಮೇಹದ ಹೆಚ್ಚಳ, ಅದರ ನಿಯಂತ್ರಣ ಹಾಗೂ ಆಧುನಿಕ ಚಿಕಿತ್ಸಾ ವಿಧಾನಗಳ ಕುರಿತು ತಜ್ಞರು ಚರ್ಚೆ ನಡೆಸಿದರು. 14 ರಾಷ್ಟ್ರಗಳ ಮಧುಮೇಹ ತಜ್ಞರು ಮತ್ತು ಸಂಶೋಧಕರು ಪಾಲ್ಗೊಂಡಿದ್ದ ಈ ಸಮಾವೇಶದಲ್ಲಿ ಮಧುಮೇಹ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯವನ್ನು ಪ್ರತಿಪಾದಿಸಲಾಯಿತು.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನಿಂದ ಆರೋಗ್ಯ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸುವ ಬಗ್ಗೆಯೂ ಚರ್ಚಿಸಲಾಯಿತು.ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ. 11.4ರಷ್ಟು ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ ಎಂಬ ಅಂಕಿ-ಅಂಶವನ್ನು ಉಲ್ಲೇಖಿಸಲಾಗಿದ್ದು, ಮಧುಮೇಹದ ಅಪಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವನ್ನು ತಜ್ಞರು ಒತ್ತಿಹೇಳಿದ್ದಾರೆ.
ಆತಂಕಕಾರಿ ಸಂಗತಿಯೆಂದರೆ, ಮಧುಮೇಹ ಹೊಂದಿರುವವರಲ್ಲಿ ಗಣನೀಯ ಸಂಖ್ಯೆಯ ಜನರಿಗೆ ತಮ್ಮ ಆರೋಗ್ಯ ಸಮಸ್ಯೆಯ ಬಗ್ಗೆ ತಿಳಿದಿಲ್ಲ. ದೇಶದಲ್ಲಿ ಶೇ. 43ರಷ್ಟು ಮಧುಮೇಹ ಪ್ರಕರಣಗಳು ಪತ್ತೆಯಾಗದೆ ಉಳಿದಿವೆ ಎಂಬ ಅಂದಾಜು, ನಿಯಮಿತ ಆರೋಗ್ಯ ತಪಾಸಣೆಯ ಮಹತ್ವವನ್ನು ಎತ್ತಿಹಿಡಿದಿದೆ.
ಯುವಜನರಲ್ಲೂ ಹೆಚ್ಚುತ್ತಿರುವ ಮಧುಮೇಹ:
ಮಧುಮೇಹವು ವಯಸ್ಸಾದವರನ್ನು ಮಾತ್ರ ಕಾಡುವ ಕಾಯಿಲೆಯಾಗಿ ಉಳಿದಿಲ್ಲ. ಯುವಜನರಲ್ಲಿಯೂ ಇದರ ಅಪಾಯ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಅನಿಯಮಿತ ಆಹಾರ ಸೇವನೆ, ಕರಿದ ತಿಂಡಿಗಳು, ಬೇಕರಿ ಉತ್ಪನ್ನಗಳು, ಸಕ್ಕರೆ ಹೆಚ್ಚಿರುವ ಪಾನೀಯಗಳ ಸೇವನೆ ಹಾಗೂ ವ್ಯಾಯಾಮದ ಕೊರತೆ ದೇಹದ ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ.
ಇವು ಮಧುಮೇಹದ ಅಪಾಯವನ್ನು ಹೆಚ್ಚಿಸಬಹುದು.ಐಟಿ ಸೇರಿದಂತೆ ದೀರ್ಘಕಾಲ ಕುಳಿತು ಕೆಲಸ ಮಾಡುವ ಉದ್ಯೋಗಿಗಳಲ್ಲಿ ದೈಹಿಕ ಚಟುವಟಿಕೆಯ ಕೊರತೆ, ಕೆಲಸದ ಒತ್ತಡ ಮತ್ತು ಅನಿಯಮಿತ ನಿದ್ರೆಯಂತಹ ಅಂಶಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ರಾತ್ರಿ ಸಮರ್ಪಕ ನಿದ್ರೆ ಮಾಡದಿರುವುದು ಹಾಗೂ ಕುಟುಂಬದಲ್ಲಿ ಮಧುಮೇಹದ ಹಿನ್ನೆಲೆ ಇರುವುದು ಕೂಡ ಅಪಾಯವನ್ನು ಹೆಚ್ಚಿಸಬಹುದು.
ಕರ್ನಾಟಕದಲ್ಲೂ ಹೆಚ್ಚಳದ ಆತಂಕ:
ದೇಶದ ಜೊತೆಗೆ ಕರ್ನಾಟಕದಲ್ಲಿಯೂ ಮಧುಮೇಹದ ಸಮಸ್ಯೆ ಗಂಭೀರವಾಗುತ್ತಿದೆ. ಲಭ್ಯ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಮಧುಮೇಹದ ಪ್ರಮಾಣ 2023ರಲ್ಲಿ ಶೇ. 7.5ರಷ್ಟಿದ್ದು, ನಂತರದ ವರ್ಷಗಳಲ್ಲಿ ಹೆಚ್ಚಳ ಕಂಡಿದೆ ಎಂದು ವರದಿಯಾಗಿದೆ. ರಾಜ್ಯದಲ್ಲಿ ಸುಮಾರು 58 ಲಕ್ಷ ಮಂದಿ ಮಧುಮೇಹಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಅಂದಾಜು ಉಲ್ಲೇಖಿಸಲಾಗಿದೆ.
ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಮಧುಮೇಹದ ಪ್ರಮಾಣ ಹೆಚ್ಚಾಗಿದೆ ಎಂಬ ಅಂಕಿ-ಅಂಶವೂ ಗಮನ ಸೆಳೆದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ. 10.3ರಷ್ಟು ಇದ್ದರೆ, ನಗರ ಪ್ರದೇಶಗಳಲ್ಲಿ ಶೇ. 14.7ರಷ್ಟಿದೆ ಎಂದು ಉಲ್ಲೇಖಿಸಲಾಗಿದೆ. ನಗರ ಜೀವನಶೈಲಿ, ಕಡಿಮೆ ದೈಹಿಕ ಚಟುವಟಿಕೆ, ಆಹಾರ ಪದ್ಧತಿ ಹಾಗೂ ಹೆಚ್ಚುತ್ತಿರುವ ಬೊಜ್ಜು ಇದಕ್ಕೆ ಕಾರಣವಾಗಿರಬಹುದು.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಕೂಡ ಮಧುಮೇಹ ಸೇರಿದಂತೆ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ನ 2016ರ ವರದಿಯಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಳದ ಕುರಿತು ಮಾಹಿತಿ ನೀಡಲಾಗಿದೆ. ಆ ವರದಿಯಲ್ಲಿ ಉಲ್ಲೇಖಿಸಿರುವ ಅಂಕಿ-ಅಂಶಗಳ ಪ್ರಕಾರ, ಬೆಂಗಳೂರಿನಲ್ಲಿ ರಕ್ತದಲ್ಲಿನ ಸಕ್ಕರೆ ಹೆಚ್ಚಳದ ಪ್ರಮಾಣ ಶೇ. 17.5ರಷ್ಟಿದ್ದರೆ, ಯಾದಗಿರಿಯಲ್ಲಿ ಶೇ. 0.8ರಷ್ಟಿದೆ ಎಂದು ಹೇಳಲಾಗಿದೆ.
ಮಧುಮೇಹ ನಿರ್ಲಕ್ಷಿಸಿದರೆ ಗಂಭೀರ ಪರಿಣಾಮ:
ಮಧುಮೇಹವನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಿ ನಿಯಂತ್ರಿಸದಿದ್ದರೆ ಕಣ್ಣು, ಮೂತ್ರಪಿಂಡ, ಹೃದಯ ಮತ್ತು ನರಮಂಡಲದ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು. ಹೃದಯ ಕಾಯಿಲೆ ಹಾಗೂ ಪಾರ್ಶ್ವವಾಯುವಿನ ಅಪಾಯವೂ ಹೆಚ್ಚಬಹುದು. ಹೀಗಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳುವುದು ಮತ್ತು ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುವುದು ಅತ್ಯಗತ್ಯ.
ಮಧುಮೇಹ ನಿಯಂತ್ರಣಕ್ಕೆ ಜೀವನಶೈಲಿಯೇ ಮುಖ್ಯಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದು ಅಗತ್ಯ. ವಾರಕ್ಕೆ ಕನಿಷ್ಠ 150 ನಿಮಿಷಗಳ ಕಾಲ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು, ಸಕ್ಕರೆ ಹೆಚ್ಚಿರುವ ಆಹಾರ ಮತ್ತು ಪಾನೀಯಗಳ ಸೇವನೆ ಕಡಿಮೆ ಮಾಡುವುದು, ಕೊಬ್ಬಿನಂಶ ಹೆಚ್ಚಿರುವ ಆಹಾರವನ್ನು ಮಿತಿಗೊಳಿಸುವುದು ಹಾಗೂ ದೇಹದ ತೂಕವನ್ನು ನಿಯಂತ್ರಣದಲ್ಲಿಡುವುದು ಮುಖ್ಯ. ತಂಬಾಕು ಸೇವನೆ ತ್ಯಜಿಸುವುದರ ಜೊತೆಗೆ ಸಮರ್ಪಕ ನಿದ್ರೆ ಮತ್ತು ಒತ್ತಡ ನಿರ್ವಹಣೆಗೂ ಆದ್ಯತೆ ನೀಡಬೇಕು.
ಮಧುಮೇಹವನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ ನಿಯಂತ್ರಿಸುವ ನಿಟ್ಟಿನಲ್ಲಿ ಜನಜಾಗೃತಿ, ನಿಯಮಿತ ತಪಾಸಣೆ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳು ನಿರ್ಣಾಯಕವಾಗಿವೆ. ತಂತ್ರಜ್ಞಾನದ ನೆರವಿನೊಂದಿಗೆ ಮಧುಮೇಹ ನಿಯಂತ್ರಣವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವುದು ಹಾಗೂ ಆರೋಗ್ಯಕರ ಜೀವನಶೈಲಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ.
