ಮಂಡ್ಯ,ನ.24- ಮುಂದೆ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು-ಮೈಸೂರು ದಶಪಥ ರಸ್ತೆಯ ನಗುವಿನಹಳ್ಳಿಯ ಗೇಟ್ ಬಳಿ ಇಂದು ಬೆಳಗ್ಗೆ ಸಂಭವಿಸಿದೆ.
ಮಂಡ್ಯದ ಗುತ್ತಲು ಬಡಾವಣೆಯ ಮಹದೇವು (49) ಹಾಗೂ ತೈಲೂರು ಗ್ರಾಮದ ರಿತ್ವಿಕಾ(8) ಮೃತಪಟ್ಟ ದುರ್ದೈವಿಗಳು. ಲತಾ, ಗೌರಿ, ಶಿವರಾಜು ಹಾಗೂ ಪ್ರಾರ್ಥವ್ಯ ಅವರುಗಳಿಗೆ ಗಂಭಿರ ಗಾಯಗಳಾಗಿದ್ದು, ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.ಕಾರಿನಲ್ಲಿ ನಂಜನಗೂಡು ದೇವಸ್ಥಾನಕ್ಕೆ ಎರಡು ಕುಟುಂಬದ ಸದಸ್ಯರು ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಮುಂದೆ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ಲಾರಿ ಹಿಂಭಾಗಕ್ಕೆ ಕಾರು ಕಚ್ಚಿಕೊಂಡಿದ್ದು, ಭೀಕರ ಅಪಘಾತದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.ಅಪಘಾತಕ್ಕೂ ಮುನ್ನ ಎರಡು ಕುಟುಂಬದವರು ರೀಲ್ಸ್ ಮಾಡಿ ವಾಟ್ಸ್ಯಾಪ್ ಸ್ಟೇಟಸ್ಗೆ ಹಾಕಿ ಸಂಭ್ರಮಿಸಿದ್ದರು. ಆದರೆ ವಿಧಿ ಅವರ ಸಂತಸವನ್ನು ಸಹಿಸಲಿಲ್ಲ. ಜವರಾಯನಂತೆ ಎದುರಾದ ಲಾರಿ ಇಬ್ಬರ ಜೀವವನ್ನು ಬಲಿತೆಗೆದುಕೊಂಡಿದೆ.
ಬಾಲಕಿಯ ಸಾವು ಪೋಷಕರಿಗೆ ಬರಸಿಡಿಲು ಬಡಿದಂತಾಗಿದ್ದು, ಆಕ್ರಂದನ ಮುಗಿಲು ಮುಟ್ಟಿತ್ತು. ಸುದ್ದಿ ತಿಳಿದ ಕೂಡಲೇ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
